ಲೋಕಾಯುಕ್ತ ರೇಡ್ ಆಯ್ತು, ಲಂಚದ 40 ಲಕ್ಷ ಸೇರಿ 8 ಕೋಟಿ 10 ಲಕ್ಷದ 30 ಸಾವಿರ ರೂಪಾಯಿ ಹಣವನ್ನೂ ಲೋಕಾಯುಕ್ತರು ಜಪ್ತಿ ಮಾಡಿದ್ದರು. ಆ ಬಳಿಕ ಒಟ್ಟು 6 ಮಂದಿ ಆರೋಪಿಗಳಲ್ಲಿ ಐವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಜೈಲಿನಲ್ಲಿ ಬಂಧಿತ ಆರೋಪಿಗಳಿಗೆ UTP ನಂಬರ್ ಕೊಟ್ಟಿದ್ದು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಸಂಖ್ಯೆ 2066, ಸುರೇಂದ್ರ ಸಂಖ್ಯೆ 2067, ಸಿದ್ದೇಶ್ ಸಂಖ್ಯೆ 2068, ನಿಕೋಲಾಸ್ ಸಂಖ್ಯೆ 2069, ಗಂಗಾಧರ್ ಸಂಖ್ಯೆ 2070 ಎಂದು ಕೊಡಲಾಗಿದೆ. ಸದ್ಯಕ್ಕೆ ಬಂಧಿತ ಆರೋಪಿಗಳನ್ನು ಜೈಲಿನ ಕ್ವಾರಂಟೈನ್ ಸೆಲ್ನಲ್ಲಿ ಇರಿಸಲಾಗಿದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ವಿಚಾರಣಾಧೀನ ಕೈದಿಗಳ ಸೆಲ್ಗೆ ಶಿಫ್ಟ್ ಮಾಡಲಾಗುತ್ತದೆ. ಆದರೆ ಲೋಕಾಯುಕ್ತ ದಾಳಿ ನಡೆಯುತ್ತಿದ್ದ ಹಾಗೆ ನಾಪತ್ತೆ ಆಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎ1 ಆರೋಪಿ ಆಗಿದ್ದು, ಅಜ್ಞಾತ ಸ್ಥಳವನ್ನು ಸೇರಿಕೊಂಡಿದ್ದಾರೆ. ಇದೀಗ ಬಂಧನಕ್ಕೂ ಮುನ್ನ ಸಾಕಷ್ಟು ವಿಚಾರಗಳು ಬಯಲಾಗಿವೆ.
CSR ಫಂಡ್ನಲ್ಲಿ ಉಳಿದ ಸಚಿವರಿಗೂ ಪಾಲು..!
ಪ್ರತಿಯೊಂದು ಕಂಪನಿಯೂ ತನ್ನ ಆದಾಯದಲ್ಲಿ ಶೇಕಡ 2ರಷ್ಟನ್ನು ಸಿಎಸ್’ಆರ್ (Corporate Social Responsibility) ಫಂಡ್ಗೆ ನೀಡಬೇಕಿದೆ. ಆ ಫಂಡ್ ಬಳಕೆಗೆ ಒಂದು ಸಮಿತಿ ಇರುತ್ತದೆ. ಆ ಸಿಎಸ್’ಆರ್ ಫಂಡ್ನಲ್ಲಿ ಅಕ್ರಮ ಮಾಡುವ ಉದ್ದೇಶದಿಂದ ಅಲ್ಲಿ ಸದಸ್ಯರುಗಳನ್ನ ತೆಗೆದು ಅಧಿಕಾರಿಗಳೇ ಸೇರಿಕೊಂಡರು. ಸಿಎಸ್’ಆರ್ ಫಂಡ್’ನ ಹಣ ಅರ್ಹತೆ ಇದ್ದವರಿಗೆ ಕೊಟ್ಟಿಲ್ಲ. ಸಿಎಸ್ಆರ್ ಫಂಡ್ನಲ್ಲಿ ಸಚಿವ ಬೈರತಿ ಬಸವರಾಜು ಅವರಿಗೂ 3.70 ಕೋಟಿ ಹಣವನ್ನ ಕೊಡಲಾಗಿದೆ. ಶಾಲೆ ನಿರ್ಮಾಣಕ್ಕೆ ಎಂದು ಹೇಳಿ ತೆಗೆದುಕೊಂಡು ಹೋಗಿದ್ದಾರೆ. ನಂತರ ಆ ಹಣ ಏನಾಯ್ತು ಎನ್ನುವ ಬಗ್ಗೆ ಮಾಹಿತಿ ತಿಳಿದಿಲ್ಲ. ಇನ್ನು ಸಿಎಸ್’ಆರ್ ಫಂಡ್’ನ ಹಣವನ್ನು ದಾವಣಗೆರೆಯ ಚನ್ನಗಿರಿ ಹಾಗು ಶಿವಮೊಗ್ಗಕ್ಕೂ ತೆಗೆದುಕೊಂಡು ಹೋಗಿದ್ದಾರೆ. ಅದು ಕೂಡ ಬಳಕೆ ಆಗಿದೆಯೋ ಇಲ್ವೋ..? ಇನ್ನು ಎಲ್ಲೆಲ್ಲಿ ಕೊಟ್ಟಿದ್ದಾರೊ..? ಗೊತ್ತಿಲ್ಲ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಶಿವಶಂಕರ್ ಆಗ್ರಹಿಸಿದ್ದಾರೆ.
‘ಮೈಸೂರು ಸ್ಯಾಂಡಲ್ ಸೋಪು’ ಕಂಪನಿಯಲ್ಲೇ ಭ್ರಷ್ಟರು..!
ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಮಾರ್ಜಕ ಸಂಸ್ಥೆಯಲ್ಲಿ 6 ಅಧಿಕಾರಿಗಳ ವಿರುದ್ಧ ನೌಕರರ ಸಂಘ ಅನುಮಾನ ವ್ಯಕ್ತಪಡಿಸಿದೆ. ಪರ್ಚೇಸ್ ಕಮಿಟಿ ಮತ್ತು ಮ್ಯಾನೇಜ್ಮೆಂಟ್ ಅವರನ್ನ ತನಿಖೆಗೆ ಒಳಪಡಿಸಬೇಕು. 6 ಮಂದಿ ಅಧಿಕಾರಿಗಳನ್ನ ತನಿಖೆ ಒಳಪಡಿಸಿದರೆ ಸತ್ಯಾಂಶ ಹೊರ ಬರುತ್ತೆ. ಈ ಆರು ಜನ ಅಧಿಕಾರಿಗಳ ಮೇಲೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹ ಮಾಡಿದ್ದಾರೆ. ಇನ್ನು ಸಿಎಸ್’ಆರ್ ಫಂಡ್ ಮೂಲಕ ಕಂಪನಿ ಸುತ್ತಮುತ್ತ ಆಗುವಂತಹ ಸಮಸ್ಯೆಗಳ ನಿವಾರಣೆಗಾಗಿ ರಸ್ತೆ ಅಭಿವೃದ್ಧಿ, ಪರಿಸರ ರಕ್ಷಣೆ, ಮೂಲಭೂತ ಸೌಲಭ್ಯಗಳು, ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕೆಲಸಗಳಿಗೆ ಬಿಡುಗಡೆ ಮಾಡಲಾಗುತ್ತದೆ. NGO ( Non-governmental organization ) ಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಆದರೆ ಇಲ್ಲಿ ಹೇಗೆ ಹಣ ಬಿಡುಗಡೆ ಆಗಿದೆ ಅನ್ನೋ ಬಗ್ಗೆ ತನಿಖೆ ನಡೆಯಬೇಕಿದೆ ಅನ್ನೋದು ನೌಕರರ ಆಗ್ರಹ.
KAS ಅಧಿಕಾರಿ ಅಲ್ಲವೇ ಅಲ್ಲ ಪ್ರಶಾಂತ್ ಮಾಡಾಳ್..!
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ KAS ಅಧಿಕಾರಿ ಎಂದು ವರದಿಯಾಗಿತ್ತು. ಆದರೆ KAS ಅಧಿಕಾರಿಗಳ ಸಂಘ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪ್ರಶಾಂತ್ ಮಾಡಾಳ್ KAS ಅಧಿಕಾರಿ ಅಲ್ಲ. ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ (KSAS) ಸೇರಿದ ಅಧಿಕಾರಿ ಎಂದು ಸ್ಪಷ್ಟನೆ ಕೊಡಲಾಗಿದೆ. ಇದರ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಅವರನ್ನು ಅಮಾನತು ಮಾಡುವಂತೆ ಲೋಕಾಯುಕ್ತ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಪ್ರಶಾಂತ್ ಮಾಡಾಳ್ ಪ್ರಕರಣದಲ್ಲಿ ಒಟ್ಟು 8 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ನಿಯಮದ ಪ್ರಕಾರ ಯಾವುದೇ ಅಧಿಕಾರಿ ಬಂಧನವಾದ 48 ಗಂಟೆಯೊಳಗೆ ಅಮಾನತು ಆಗಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದೀಗ ಓರ್ವ ಶಾಸಕನ ಪುತ್ರ ಸಿಕ್ಕಿಬಿದ್ದಿರುವುದರಿಂದ ಕಂಗಾಲಾಗಿರುವ ಭಾರತೀಯ ಜನತಾ ಪಾರ್ಟಿಗೆ ಬೈರತಿ ಬಸವರಾಜ್ ಸೇರಿದಂತೆ, ಇನ್ನು ಹಲವರು ಸಿಕ್ಕಿ ಬೀಳುವ ಸಾಧ್ಯತೆ ಇರುವುದು ಸಂಕಷ್ಟ ಸೂಚಕವಾಗಿ ಪರಿಣಮಿಸಿದೆ.