ಕೋಲಾರ: ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ 10 ಕೆಜಿ ಅಕ್ಕಿ ಕೊಟ್ಟೆ ಅಂತ ಬುರುಡೆ ಬಿಡುತ್ತಿದ್ದಾರೆ. ಅಕ್ಕಿ ಕೊಟ್ಟಿದ್ದು ಕೇಂದ್ರ ಸರ್ಕಾರ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದು ಮೂರು ರೂಪಾಯಿ ಗೋಣಿಚೀಲ. ಈ ದೇಶದ ರೈತರ ಬೆನ್ನೆಲುಬಾಗಿ ನಿಂತಿರುವುದು ಭಾರತೀಯ ಜನತಾ ಪಕ್ಷ ಮಾತ್ರ. ಹಾಗಾಗಿ ಈ ದೇಶದ ಉಳಿವಿಗಾಗಿ, ಈ ದೇಶದ ರೈತರ ನೆಮ್ಮದಿಗಾಗಿ ತಾಲೂಕಿನ ಜನತೆ ಭಾರತೀಯ ಜನತಾ ಪಕ್ಷಕ್ಕೆ ಮತ ಕೊಡಬೇಕು ಎಂದು ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಅವರು ವೇಮಗಲ್ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಕೋಲಾರ ತಾಲೂಕಿನ ವೇಮಗಲ್ ಪಟ್ಟಣ ವ್ಯಾಪ್ತಿಯ ಬೆಟ್ಟಹೊಸಪುರ ಗ್ರಾಮದಲ್ಲಿ ಶನಿವಾರ ಸ್ವಾಭಿಮಾನ ಸಂಕಲ್ಪ ಕಾರ್ಯಕ್ರಮವು ಅದ್ದೂರಿಯಾಗಿ ನೇರವೇರಿತು. ಬೆಟ್ಟಹೊಸಪುರ ಗ್ರಾಮದಲ್ಲಿ ಪಟಾಕಿ ಸಿಡಿಸಿ ಬೃಹತ್ ಅಕಾರದ ಆಪಲ್ ಹಾರವನ್ನು ಕ್ರೈನ್ ಮುಖಾಂತರ ಹಾಕುವುದರ ಮೂಲಕ ಮಾಜಿ ಸಚಿವ ವರ್ತೂರ್ ರವರನ್ನು ಸ್ವಾಗತಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವರ್ತೂರು ಪ್ರಕಾಶ್ ಅವರು, ರೈತರಿಗೆ ಪ್ರಧಾನಿ ಮೋದಿಯವರು ಕಿಸಾನ್ ಸನ್ಮಾನ ಯೋಜನೆ ಅಡಿಯಲ್ಲಿ ವರ್ಷಕ್ಕೆ ಹತ್ತು ಸಾವಿರ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇದುವರೆಗೂ ಅಂತಹ ಯೋಜನೆಗಳನ್ನು ಜಾರಿಗೆ ತರಲೇ ಇಲ್ಲ. ರೈತರ ಪರ ಕಾಳಜಿ ವಹಿಸಲೇ ಇಲ್ಲ ಎಂದರು.
ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ?
ಕೇಂದ್ರ ಸರ್ಕಾರ ಈ ದೇಶದ ದಲಿತರಿಗೆ ಉಚಿತ ವಿದ್ಯುತ್ ನೀಡುತ್ತಿದೆ. ದಲಿತರ ಪರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಪಕ್ಷ ಯಾಕೆ ಮಾಡಲಿಲ್ಲ? ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗಾಗಿ ದೇಶದ ನಾಗರಿಕರನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ದೇಶ ಅಭಿವೃದ್ಧಿ ಹೊಂದುವುದಿಲ್ಲ. ನಾನು ಹತ್ತು ವರ್ಷಗಳ ಕಾಲ ಶಾಸಕನಾಗಿದ್ದ ವೇಳೆ ಕೋಲಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೆ. ಆದರೆ ಕಾರಣಾಂತರಗಳಿಂದ ಸೋತು ಹೋದೆ. ಐದು ವರ್ಷಗಳಿಂದ ಈಗಿನ ಶಾಸಕರು ಅಭಿವೃದ್ಧಿ ಮಾಡದೆ ಕಾಲ ಕಳೆದು ಈಗ ಮತ ಕೇಳಲು ನಿಮ್ಮ ಬಳಿ ಬಂದಾಗ ತಕ್ಕ ಶಾಸ್ತಿ ಮಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಗ್ಲಿ ಸೂರ್ಯ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರೂಪಶ್ರೀ ಮಂಜುನಾಥ್, ಅರುಣ್ ಪ್ರಸಾದ್, ತಾಲೂಕು ಅಧ್ಯಕ್ಷ ಸಿಡಿ ರಾಮಚಂದ್ರಗೌಡ, ಬೆಟ್ಟಹೊಸಪುರ ಗ್ರಾಮದ ಮುಖಂಡರಾದ ದೇವರಾಜ್, ಮುನಿರಾಜು, ಚಂದ್ರಪ್ಪ, ಹರೀಶ, ನಾಗೇಶ್, ಎಸ್ ಮಂಜುನಾಥ್, ಈರಪ್ಪ, ಹಾಗೂ ಉಪಸ್ಥಿತರಿದ್ದರು