ವರ್ತಮಾನದ ವಾಸ್ತವಕ್ಕೆ ಕುರುಡಾದಷ್ಟೂ ಚಾರಿತ್ರಿಕ ಸುಳ್ಳುಗಳು ಆಕರ್ಷಣೀಯವಾಗುತ್ತವೆ
ರಾಜಕಾರಣವೂ ಒಂದು ಕಲೆ ಎನ್ನುತ್ತಿದ್ದ ಕಾಲವೂ ಒಂದಿತ್ತು. ಏಕೆಂದರೆ ರಾಜಕಾರಣದಲ್ಲಿ ಸೋಲು-ಗೆಲುವು ಎಷ್ಟು ಮುಖ್ಯವೋ ಅಧಿಕಾರಗ್ರಹಣವೂ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿಯೇ ಈ ಕ್ಷೇತ್ರವನ್ನು ಪ್ರವೇಶಿಸುವ ವ್ಯಕ್ತಿಗಳು ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ, ತಮ್ಮ ಸುತ್ತಮುತ್ತಲಿನ ಜಾಗಗಳೆಲ್ಲವನ್ನೂ ಆಕ್ರಮಿಸುತ್ತಾ, ಎದುರಾದ ಅವಕಾಶಗಳನ್ನೆಲ್ಲಾ ಬಳಸಿಕೊಳ್ಳುತ್ತಾ ತಮ್ಮದೇ ಆದ ಪ್ರಭಾವ ವಲಯಗಳನ್ನು ಸೃಷ್ಟಿಸಿಕೊಳ್ಳುವುದರಲ್ಲಿ ನಿಷ್ಣಾತರಾಗಲು ಪ್ರಯತ್ನಿಸುತ್ತಾರೆ. ವಿಧ್ಯುಕ್ತ ತರಬೇತಿ ಇಲ್ಲದ ಕಲೆ ಎಂದರೆ ಬಹುಶಃ ರಾಜಕೀಯ ಕಲೆ ಒಂದೇ ಇರಬಹುದು. ಏಕೆಂದರೆ ಇದು ನೋಡಿ, ಅನುಕರಿಸಿ, ಹಿಂಬಾಲಿಸಿ ಕಲಿಯುವಂತಹ ಕಲೆ. ವಿಶಾಲ ನೆಲೆಯಲ್ಲಿ ಇದನ್ನು ಕಲೆ ಎನ್ನುವುದು ಕಷ್ಟವೇ ಆದರೂ, ಎಷ್ಟೇ ಎಡವಿದರೂ, ಘಾಸಿಗೊಂಡರೂ, ಪೆಟ್ಟುಗಳನ್ನು ತಿಂದರೂ ಎದೆಗುಂದದೆ ಸವಾಲುಗಳಿಗೆ ಎದೆಯೊಡ್ಡಿ ಮುನ್ನಡೆಯುವ ಛಾತಿ ಮತ್ತು ಧಾರಣಾ ಸಾಮರ್ಥ್ಯ ರಾಜಕಾರಣವನ್ನು ಒಂದು ಕಲೆಯಾಗಿ ಮಾರ್ಪಡಿಸುತ್ತದೆ.
ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಕೇಂದ್ರವನ್ನು ಸಮೀಪಿಸಲು ಸಕಲ ಕಸರತ್ತುಗಳನ್ನೂ ಮಾಡುವುದು ವ್ಯಾವಹಾರಿಕವಾಗಿ ಸಹಜ ಪ್ರವೃತ್ತಿ ಎಂದೇ ಹೇಳಬಹುದು. ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೂ ಎಳೆಯ ಮಕ್ಕಳಿಗೆ ಸುಳ್ಳು ಮಾತನಾಡದಂತೆ, ಅನ್ಯರ ನಿಂದೆ ಮಾಡದಂತೆ, ತಪ್ಪು ಹಾದಿಯಲ್ಲಿ ಹೋಗದಂತೆ ಬುದ್ಧ-ಬಸವ-ಗಾಂಧಿಯ ಮುಖೇನ ಬೋಧನೆ ಮಾಡುತ್ತಲೇ ಬರುವ ಸಮಾಜದಲ್ಲೂ, ಇದೇ ಶಿಕ್ಷಣ ವ್ಯವಸ್ಥೆಯನ್ನು ನಿರ್ವಹಿಸುವ ಅಧಿಕಾರ ರಾಜಕಾರಣ, ಸುಳ್ಳು, ವಂಚನೆ, ದೂಷಣೆ, ನಿಂದನೆ ಇವೆಲ್ಲ ಅವಲಕ್ಷಣಗಳ ಪ್ರಯೋಗಾಲಯವಾಗಿ ರೂಪುಗೊಂಡಿರುತ್ತದೆ. ಇದು ಆಧುನಿಕ ಸಮಾಜದ ಒಂದು ವಿಡಂಬನೆ ಎನ್ನಬಹುದು. ಸಮಾಜವೂ ಸಹ ರಾಜಕೀಯ ವಲಯದಲ್ಲಿ ಸೃಷ್ಟಿಯಾಗುವ ಸುಳ್ಳುಗಳನ್ನು ಸಹಜ ಅಭಿವ್ಯಕ್ತಿಯ ರೂಪದಲ್ಲೇ ಪರಿಗಣಿಸುವ ಮೂಲಕ ಮಾನ್ಯತೆ ನೀಡುತ್ತದೆ. ಮನುಷ್ಯನಿಗೆ ಸುಳ್ಳು ಹೇಳಲು ಒಂದು ಕಾರಣ ಬೇಕಾಗುವಂತೆಯೇ, ತಾನು ಹೇಳುವ ಸುಳ್ಳನ್ನು ಸತ್ಯ ಎಂದು ಸಾಬೀತುಪಡಿಸಲು ಮತ್ತೊಬ್ಬ ವ್ಯಕ್ತಿ ಅಥವಾ ಮತ್ತೊಂದು ಸಂಘಟನೆ/ಸಂಸ್ಥೆ/ಸಮಾಜವೂ ಬೇಕಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಆಡಳಿತಾರೂಢ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಪರಸ್ಪರ ಹೀಗೆಯೇ ತಮ್ಮ ಪ್ರತಿರೂಪವನ್ನು ನಿಂದಿಸಿಕೊಳ್ಳುವ ಮೂಲಕ, ಸಾರ್ವತ್ರಿಕ ಸುಳ್ಳುಗಳನ್ನು ಸಾರ್ವಕಾಲಿಕ ಸತ್ಯದಂತೆ ಬಿಂಬಿಸಲು ಪ್ರಯತ್ನಿಸುತ್ತವೆ.
ವಾಸ್ತವ ರಾಜಕಾರಣ-ಅವಾಸ್ತವಿಕ ಚರಿತ್ರೆ
ರಾಜಕೀಯ ಆಡಳಿತಾಧಿಕಾರ ಗಳಿಸುವುದೇ ಎಲ್ಲ ರಾಜಕೀಯ ಪಕ್ಷಗಳ ಪರಮೋದ್ದೇಶವಾಗಿರುವುದರಿಂದ ಸುಶಿಕ್ಷಿತ ಜನರೂ ಸಹ ಪಕ್ಷಗಳ ಈ ವಾಮ ಮಾರ್ಗಗಳಿಗೆ ಮಾನ್ಯತೆ ನೀಡುತ್ತಿರುತ್ತಾರೆ. ಆದರೆ ಈ ಸುಳ್ಳುಗಳನ್ನು ಸೃಷ್ಟಿಸುವ ಸಲುವಾಗಿಯೇ ಗತ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಕ್ರಿಯೆ ಮಾತ್ರ ಇತ್ತೀಚಿನ ವಿದ್ಯಮಾನವಾಗಿದೆ. ಸಾಮಾನ್ಯ ಜನತೆ ಎದುರಿಸುವ ವರ್ತಮಾನದ ಜ್ವಲಂತ ಸಮಸ್ಯೆಗಳಿಗೆ ಭೂತಕಾಲದ ಆಡಳಿತ ವ್ಯವಸ್ಥೆಯನ್ನು ದೂಷಿಸುವುದರಿಂದ ಹಿಡಿದು, ಇಂದಿನ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಿಕ್ಕುಗಳಿಗೆ ಶತಮಾನಗಳ ಹಿಂದಿನ ಇತಿಹಾಸದ ಹೆಜ್ಜೆಗಳನ್ನು ಕಾರಣವನ್ನಾಗಿ ಮಾಡುವ ಒಂದು ಪ್ರಕ್ರಿಯೆಗೂ ಭಾರತದ ರಾಜಕಾರಣದಲ್ಲಿ ಅವಕಾಶ ದೊರೆತಿದೆ. ಈ ಕಲ್ಪಿತ ಸತ್ಯಗಳನ್ನು ಸಾದರಪಡಿಸುವ ಸಲುವಾಗಿಯೇ ಚಾರಿತ್ರಿಕ ಸುಳ್ಳುಗಳನ್ನೂ ಸೃಷ್ಟಿಸಲಾಗುತ್ತದೆ. ಪುರಾಣಗಳನ್ನು ಇತಿಹಾಸವನ್ನಾಗಿ ನೋಡುವುದು, ಚಾರಿತ್ರಿಕ ಮಿಥ್ಯೆಗಳನ್ನು ಸತ್ಯ ಎಂದು ವ್ಯಾಖ್ಯಾನಿಸುವುದು, ಚರಿತ್ರೆಯ ವ್ಯಕ್ತಿ ಮತ್ತು ಘಟನೆಗಳನ್ನು ವರ್ತಮಾನದಲ್ಲಿಟ್ಟು ನೋಡುವುದು ಮತ್ತು ಇವತ್ತಿನ ರಾಜಕೀಯ-ಸಾಂಸ್ಕೃತಿಕ ಅವಶ್ಯಕತೆಗಳಿಗನುಗುಣವಾಗಿ ಚರಿತ್ರೆಯ ಪುಟಗಳನ್ನು ಅಳಿಸಿ ಪುನಃ ಬರೆಯುವ ಮರುನಿರ್ವಚನೆಯ ಪ್ರಯತ್ನಗಳು ಇವೆಲ್ಲವೂ ಸುಳ್ಳಿನ ಕಾರ್ಖಾನೆಯ ಕಚ್ಚಾವಸ್ತುಗಳಾಗಿ ಪರಿಣಮಿಸುತ್ತವೆ.
ಕಳೆದ ಒಂದು ದಶಕದ ರಾಜಕಾರಣದಲ್ಲಿ ಈ ವಿದ್ಯಮಾನವು ಅಧಿಕೃತತೆ ಪಡೆದುಕೊಂಡಿರುವುದೇ ಅಲ್ಲದೆ, ಬೃಹತ್ ಜನಸಂಖ್ಯೆಯ ಮಾನ್ಯತೆಯನ್ನೂ ಪಡೆದುಕೊಂಡಿದೆ. ಹಾಗಾಗಿಯೇ ನೆಹರೂ ಆರ್ಥಿಕತೆಯ ಫಲಾನುಭವಿಗಳೂ ಸಹ ಅವರೇ ಆಶ್ರಯಿಸಿದ ಅರ್ಥವ್ಯವಸ್ಥೆ ಮತ್ತು ಅದು ಕಲ್ಪಿಸಿರುವಂತಹ ಸುಭದ್ರ ನೆಲೆಯನ್ನೂ ಮರೆತು, “ 70 ವರ್ಷಗಳಲ್ಲಿ ಏನೂ ಸಾಧನೆಯಾಗಿಲ್ಲ ” ಎಂಬ ರಾಜಕೀಯ ಮಂತ್ರವನ್ನು ಜಪಿಸುತ್ತಿರುತ್ತಾರೆ. ಈ ತಲೆಮಾರಿನ ಮುಂದಿನ ಪೀಳಿಗೆ, ಅಂದರೆ ವರ್ತಮಾನದ ಯುವಪೀಳಿಗೆ, ತಮ್ಮ ಸುತ್ತಲೂ ನಿರ್ಮಿತವಾಗಿರುವ ಹಿತವಲಯದ ವಾತಾವರಣಕ್ಕೆ ಮೂಲ ಕಾರಣವೇ “ಆಧುನಿಕ ಭಾರತದ ” ಶಿಲ್ಪಿಗಳು ಎಂಬ ಅರಿವೇ ಇಲ್ಲದವರಂತೆ, ಕಲ್ಪಿತ ಸತ್ಯವನ್ನು ವಾಸ್ತವ ಎಂಬ ಭ್ರಮೆಗೊಳಗಾಗಿ, ನವ ಭಾರತದ ಕಾರ್ಪೋರೇಟ್ ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಅಪ್ಪಿಕೊಳ್ಳುತ್ತಿದೆ, ಒಪ್ಪಿಕೊಳ್ಳುತ್ತಿದೆ. ಇತ್ತೀಚೆಗೆ ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ 615 ಎಕರೆ ವಿಸ್ತೀರಣದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಹೆಚ್‌ಎಎಲ್ ಹೆಲಿಕಾಪ್ಟರ್ ಕಾರ್ಖಾನೆಗೆ ತಳಪಾಯ ಒದಗಿಸಿರುವುದು 79 ವರ್ಷದ ಭವ್ಯ ಇತಿಹಾಸ ಇರುವ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಎಂಬ ಸಾರ್ವಜನಿಕ ಕಂಪನಿ. ಇದು ಸ್ವಾತಂತ್ರ್ಯಪೂರ್ವದಲ್ಲಿ ಖಾಸಗಿ ವ್ಯಕ್ತಿಯಿಂದ ಸ್ಥಾಪನೆಯಾದರೂ, ಇದಕ್ಕೆ ಸ್ವಾತಂತ್ರ್ಯಾನಂತರ ಕಾಯಕಲ್ಪ ಒದಗಿಸಿದ್ದು ನೆಹರೂ ಆರ್ಥಿಕತೆ ಸೃಷ್ಟಿಸಿದ ಆಡಳಿತ ನೀತಿಗಳು. ಇಂತಹ ನೂರಾರು ಚಾರಿತ್ರಿಕ ಸತ್ಯಗಳನ್ನೂ ಸುಳ್ಳಾಗಿಸುವ ರಾಜಕೀಯ ಕುಟಿಲತೆಯ ನಡುವೆ ನಾವು ಮತ್ತಷ್ಟು ಚಾರಿತ್ರಿಕ ಸುಳ್ಳುಗಳನ್ನು ಸೃಷ್ಟಿಸುತ್ತಿದ್ದೇವೆ.
ವೈಭವೀಕರಿಸಲ್ಪಟ್ಟ ಸುಳ್ಳು ಕಾಲಕ್ರಮೇಣ ಸ್ಫಟಿಕ ಸತ್ಯದಂತೆ ಹೊಳೆಯಲಾರಂಭಿಸುತ್ತದೆ. ಇದಕ್ಕೆ ಜ್ವಲಂತ ನಿದರ್ಶನ ಟಿಪ್ಪು ಕಾಲದ ಉರಿಗೌಡ-ನಂಜೇಗೌಡ ಎಂಬ ಕಲ್ಪಿತ ಪಾತ್ರಗಳು ಮತ್ತು ಟಿಪ್ಪು ಸುಲ್ತಾನನ ಚರಿತ್ರೆಯ ಪುಟಗಳು. ಲಿಖಿತ ಶಾಸನಗಳು, ಚಾರಿತ್ರಿಕ ಕಥನಗಳು ಮತ್ತು ಮೌಖಿಕ ಪರಂಪರೆಯ ಲಾವಣಿಗಳಲ್ಲಿರುವ ಸತ್ಯವನ್ನು ಅಲ್ಲಗಳೆದು, ಕಲ್ಪಿತ ಪಾತ್ರಗಳನ್ನು ಎರಡು ಶತಮಾನದ ಹಿಂದಿನ ಚರಿತ್ರೆಯ ಚೌಕಟ್ಟಿನಲ್ಲಿ ಕೂರಿಸಿ ಅದನ್ನೇ ಚಾರಿತ್ರಿಕ ಸತ್ಯ ಎಂದು ನಂಬಿಸುವ ರಂಗಕಲೆಯೂ ಒಂದು ರೀತಿಯಲ್ಲಿ ರಾಜಕೀಯ ಕೌಶಲವೇ. ನಮ್ಮ ಯುವ ಸಮಾಜ ಇಂತಹ ಸುಳ್ಳುಗಳಿಗೆ ಬಹಳ ಆಪ್ತತೆಯಿಂದ ತೆರೆದುಕೊಳ್ಳುತ್ತದೆ. ಏಕೆಂದರೆ ಈ ಸಮೂಹದಲ್ಲಿ ಅಧ್ಯಯನದ ಕೊರತೆ ಇದೆ. ನಂಬಿಕೆ ಮತ್ತು ವಿಶ್ವಾಸ ಎಂಬ ಸಂವೇದನಾಶೀಲ ಗುಣಲಕ್ಷಣಗಳನ್ನು ಸಾಂಸ್ಕೃತಿಕವಾಗಿ-ರಾಜಕೀಯವಾಗಿ ಸಾಪೇಕ್ಷಗೊಳಿಸಲಾಗಿರುವುದರಿಂದ, ತಾವು ನಂಬಿರುವುದೇ ಅಂತಿಮ ಸತ್ಯ ಎಂದು ಭಾವಿಸುವ ಒಂದು ಬೃಹತ್ ಜನಸಂಖ್ಯೆಯನ್ನು ಈ ದೇಶದ ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸಿದೆ. ಹಾಗಾಗಿಯೇ ಪೇಶ್ವೆ ಆಡಳಿತದಲ್ಲಿ ಅಸ್ಪೃಶ್ಯ ಶೋಷಿತ ಸಮುದಾಯಗಳು ಎದುರಿಸಿದಂತಹ ಅಮಾನುಷತೆ ಮತ್ತು ಮೃಗೀಯ ದೌರ್ಜನ್ಯಗಳನ್ನು ತಾತ್ವಿಕವಾಗಿಯಾದರೂ ಒಪ್ಪಿಕೊಳ್ಳಲು ನಿರಾಕರಿಸುವ ಬೃಹತ್ ಜನಸಮೂಹ, ಡಿಜಿಟಲ್ ಯುಗದ ಉತ್ಪನ್ನಗಳಾದ ಉರಿಗೌಡ-ನಂಜೇಗೌಡರನ್ನು ಸುಲಭವಾಗಿ ಒಪ್ಪಿಕೊಳ್ಳುತ್ತದೆ.
ವರ್ತಮಾನದ ಸಿಕ್ಕುಗಳ ನಡುವೆ
ಈ ಹಾದಿಯಲ್ಲಿ ಸಾಗುತ್ತಲೇ ವರ್ತಮಾನದ ರಾಜಕಾರಣದಲ್ಲಿ ಕ್ಯಾನ್ಸರ್ ಕೋಶದಂತೆ ವ್ಯಾಪಿಸುತ್ತಿರುವ ಮತದ್ವೇ಼ಷ, ಮತಾಂಧತೆ ಮತ್ತು ಜಾತಿ ದ್ವೇಷಗಳನ್ನು ಸಮರ್ಥಿಸಿಕೊಳ್ಳಲು, ಚರಿತ್ರೆಯಲ್ಲಿ ನಡೆದಿರಬಹುದಾದ ಅಮಾನುಷ ಘಟನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಇಲ್ಲಿಯೂ ಸಹ ದಾಖಲಿತ ಅಥವಾ ಲಿಖಿತ ಚರಿತ್ರೆಯಿಂದ ಹೊರಗಿನ ಐತಿಹ್ಯಗಳನ್ನೇ ಚಾರಿತ್ರಿಕ ಸತ್ಯಗಳಂತೆ ಬಿಂಬಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಬಲಿಯಾಗುತ್ತಿರುವುದು ಮುಘಲರು ಮತ್ತು ಕರ್ನಾಟಕದ ಟಿಪ್ಪು ಸುಲ್ತಾನ. ಬೌದ್ಧಿಕವಾಗಿ ಆಧುನಿಕ ಭಾರತದ ಯುವ ಜನತೆ ಇತಿಹಾಸ ಪ್ರಜ್ಞೆಯನ್ನು ಕಳೆದುಕೊಂಡಿದೆ ಎನಿಸುವುದಾದರೂ, ಈ ಪ್ರಜ್ಞೆಯನ್ನು ನಿರಂತರವಾದ ಉಳಿಪೆಟ್ಟಿನ ಮೂಲಕ ಭ್ರಷ್ಟಗೊಳಿಸಲಾಗಿದೆ ಎನ್ನುವುದು ಸೂಕ್ತ. ಶಹಜಹಾನ್ ನಿರ್ಮಿಸಿದ ತಾಜಮಹಲ್ ಒಂದು ಕಾಲದಲ್ಲಿ ಶಿವದೇವಾಲಯವಾಗಿತ್ತು ಎಂಬ ಕಲ್ಪಿತ ಚರಿತ್ರೆಯನ್ನು ಅಪಾರವಾಗಿ ನಂಬುವ ಬೃಹತ್ ಯುವ ಸಮೂಹ, ಇದೇ ಶಹಜಹಾನ್ ಆಳ್ವಿಕೆಯಲ್ಲೇ, ಅವನ ಪ್ರೇರಣೆಯಿಂದಲೇ ಭಾರತದ ಪ್ರಾಚೀನ ಗ್ರಂಥಗಳಾದ ಉಪನಿಷತ್ತುಗಳು ಮತ್ತು ಭಗವದ್ಗೀತೆ ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಅನುವಾದವಾಗಿದ್ದು ಎನ್ನುವ ಚಾರಿತ್ರಿಕ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಶಹಜಹಾನನ ಪುತ್ರ ದಾರಾ ಶಿಕೋಹ್‌ನಿಂದ. ಅನುವಾದಿತವಾದ ನಂತರವೇ ಈ ಗ್ರಂಥಗಳು ವಿಶ್ವದ ಇತರ ಭಾಷೆಗಳಿಗೆ ಅನುವಾದವಾಗಿದ್ದವು. ಚರಿತ್ರೆಯನ್ನು ವರ್ತಮಾನದ ಮಸೂರಗಳ ಮೂಲಕ ನೋಡುವ ಮೂಲಕ ಚಾರಿತ್ರಿಕ ಸತ್ಯಗಳನ್ನು ಸುಳ್ಳಾಗಿಸುವ, ಸುಳ್ಳುಗಳನ್ನು ಸತ್ಯವೆಂದು ವೈಭವೀಕರಿಸುವ ಒಂದು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುತ್ತಿದ್ದೇವೆ. ಉರಿಗೌಡ-ನಂಜೇಗೌಡರೂ ಈ ವ್ಯಾಪ್ತಿಗೊಳಪಡುವ ಕಲ್ಪಿತ ವ್ಯಕ್ತಿಗಳೇ ಆಗಿದ್ದಾರೆ.
ಹೀಗೆ ಸೃಷ್ಟಿಸಲಾದ ಸುಳ್ಳುಗಳ ಮೂಲಕ ಮತ್ತು ನಿರಾಕರಿಸಲಾದ ವಾಸ್ತವಗಳ ಮೂಲಕ ವರ್ತಮಾನದ ಬದುಕನ್ನು ನಿಯಂತ್ರಿಸುವ ಒಂದು ರಾಜಕೀಯ ಪರಂಪರೆಯನ್ನೂ ನಾವು ಪೋಷಿಸಿಕೊಂಡು ಬಂದಿದ್ದೇವೆ. ಹಿಂದಿನ ಸಾಧನೆಗಳನ್ನು ನಿರಾಕರಿಸುತ್ತಲೇ ಇಂದಿನ ವೈಫಲ್ಯಗಳನ್ನು ಮರೆಮಾಚಲು ಈ ಮನಸ್ಥಿತಿ ಮತ್ತು ಆಲೋಚನಾ ವಿಧಾನ ನೆರವಾಗುತ್ತದೆ. ನವ ಉದಾರವಾದದ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ, ಹಣಕಾಸು ಬಂಡವಾಳದ ಆಧಿಪತ್ಯ ಮತ್ತು ಇದಕ್ಕೆ ಪೂರಕವಾದ ಆಪ್ತ ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಸಾಕಾರಗೊಳಿಸಲು ನೆಹರೂ ಆರ್ಥಿಕತೆಯ ನೆಲೆಯಲ್ಲಿ ಸೃಷ್ಟಿಯಾದ ಸಾರ್ವಜನಿಕ ಔದ್ಯಮಿಕ ಸಂಪತ್ತನ್ನು ಮತ್ತು ಈ ಸಂಪತ್ತಿನ ಸುಸ್ಥಿತಿಗೆ ಮೂಲಾಧಾರವಾಗಿರುವ ನೈಸರ್ಗಿಕ ಸಂಪನ್ಮೂಲಗಳನ್ನು “ ನಗದೀಕರಣ ” ಎಂಬ ಸುಂದರ ಹೆಸರಿನಲ್ಲಿ ಖಾಸಗಿ ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸುತ್ತಿರುವುದು ಭವಿಷ್ಯದ ಯುವ ಪೀಳಿಗೆಗೆ ಎಷ್ಟು ಸಂಕೀರ್ಣ ಪರಿಸ್ಥಿತಿಗಳನ್ನು ಉಂಟುಮಾಡುತ್ತದೆ ಎಂಬ ಪರಿಜ್ಞಾನವೇ ಇಲ್ಲದಂತೆ, ಈ ದೇಶದ ಬೃಹತ್ ಯುವ ಸಮೂಹ ಸಂಭ್ರಮಿಸುತ್ತಿದೆ. ಈ ಸಂಭ್ರಮಕ್ಕೆ ಬೇಕಾಗುವ ತಳಪಾಯವನ್ನು ನಿರ್ಮಿಸಲೆಂದೇ ಬ್ಯಾಂಕ್-ವಿಮಾ ಕ್ಷೇತ್ರದ ರಾಷ್ಟ್ರೀಕರಣವನ್ನೂ ಒಳಗೊಂಡಂತೆ, ಸಾರ್ವಜನಿಕ ಉದ್ದಿಮೆಯ ತಾತ್ವಿಕ ನೆಲೆಗಳನ್ನೇ ಒಂದು ಮಿಥ್ಯೆ ಎನ್ನುವಂತೆ ಬಿಂಬಿಸಲಾಗುತ್ತಿದೆ.
ಹಾಗಾಗಿಯೇ ಯುವ ಸಮುದಾಯದ ಭವಿಷ್ಯವನ್ನೇ ಮಸುಕಾಗಿಸುವ ನಿರುದ್ಯೋಗ ಸಮಸ್ಯೆ ಸಾರ್ವಜನಿಕ ಸಂಕಥನದಲ್ಲಿ ಪ್ರಧಾನ ವಿಷಯವಾಗಿ ಚರ್ಚೆಗೊಳಗಾಗುತ್ತಿಲ್ಲ. ಇತ್ತೀಚಿನ ನಿದರ್ಶನವೆಂದರೆ, ಮಧ್ಯಪ್ರದೇಶ ಸರ್ಕಾರವು 6000 ಭೂ ಕಂದಾಯ ಅಧಿಕಾರಿ (ಇದನ್ನು ಸ್ಥಳೀಯ ಭಾಷೆಯಲ್ಲಿ ಪಟ್ವಾರಿ ಎನ್ನಲಾಗುತ್ತದೆ) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು 12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ವರದಿಯಾಗಿದೆ. ಕೇವಲ ಪದವಿ ಅರ್ಹತೆಯನ್ನು ಅಪೇಕ್ಷಿಸುವ ಈ ಹುದ್ದೆಯ ಅರ್ಜಿದಾರರ ಪೈಕಿ ಇಂಜಿನಿಯರ್‌ಗಳು, ಡಾಕ್ಟರೇಟ್ ಪಡೆದಿರುವವರು, ಸ್ನಾತಕೋತ್ತರ ಪದವೀಧರರು ಸಹ ಇರುವುದು ,ನವ ಭಾರತ ಎದುರಿಸುತ್ತಿರುವ ನಿರುದ್ಯೋಗದ ಒಂದು ಚಿತ್ರಣವನ್ನು ನೀಡುತ್ತದೆ. ಆದರೂ ಇಂದು ಜನಾಭಿಪ್ರಾಯ ಸಂಗ್ರಹ ಮಾಡಿದರೆ, ಭಾರತ ಪ್ರಗತಿಯತ್ತ ಸಾಗುತ್ತಿದೆ ಎಂದೇ ಫಲಿತಾಂಶ ಬರುತ್ತದೆ. ಏಕೆಂದರೆ ಈ ಅಭಿಪ್ರಾಯ ಸಂಗ್ರಹದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಲ್ಲಿ ತಂತ್ರಜ್ಞಾನದ ನೆರವು ಹೊಂದಿರುವ ಯುವ ಪೀಳಿಗೆಯೇ ಇರುತ್ತದೆ. ಈ ಯುವ ಪೀಳಿಗೆಗೆ ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿ ಹಾಗೂ ಅದರ ಸಾಮಾಜಿಕ-ಸಾಂಸ್ಕೃತಿಕ ಸಂಬಂಧಗಳ ಪರಿವೆ ಇರುವುದಿಲ್ಲ. ಆರ್ಥಿಕ ಬೆಳವಣಿಗೆಯ ಸಾಮಾಜಿಕ ಹೊರೆಯ (Soಛಿiಚಿಟ ಅosಣs oಜಿ ಇಛಿoಟಿomiಛಿ Pಡಿogಡಿess) ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಂತೂ ಇದೆ. ಹಾಗೆಯೇ ನೆಹರೂ ಆರ್ಥಿಕತೆಯ ವಾಸ್ತವಗಳನ್ನೂ ಅರ್ಥಮಾಡಿಸಬೇಕಿದೆ.
ಕಲ್ಪಿತ ಇತಿಹಾಸವನ್ನೇ ಸತ್ಯ ಎಂದು ಪರಿಭಾವಿಸುವ ಮನಸ್ಥಿತಿ ಸಮಾಜದಲ್ಲಿ ಬೇರೂರಿದಷ್ಟೂ ಕಣ್ಣೆದುರಿನ ವಾಸ್ತವಗಳು ನಿರ್ಲಕ್ಷ್ಯಕ್ಕೊಳಗಾಗುತ್ತಲೇ ಹೋಗುತ್ತವೆ. ಇದನ್ನು ಸಾಂಸ್ಕೃತಿಕ ನೆಲೆಯಲ್ಲಿಟ್ಟು ನೋಡಿದಾಗ, ಪುನಃ ಟಿಪ್ಪು ನೆನಪಾಗುತ್ತಾನೆ. ವರ್ತಮಾನದ ರಾಜಕಾರಣದಲ್ಲಿ ಹಾಸುಹೊಕ್ಕಾಗಿರುವ ಮತಾಂಧತೆಯನ್ನು ಸಮರ್ಥಿಸಿಕೊಳ್ಳಲು ಟಿಪ್ಪೂ ಸುಲ್ತಾನನನ್ನು ಮತಾಂಧನಂತೆ ಬಿಂಬಿಸುವ ಪ್ರಯತ್ನಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಆದರೆ ಎರಡು ಶತಮಾನದ ಹಿಂದೆ ನಿರಂಕುಶ ಪ್ರಭುತ್ವದ ಪ್ರತಿನಿಧಿಯೊಬ್ಬ ಮಾಡಿದ ತಪ್ಪುಗಳನ್ನೇ 21ನೆಯ ಶತಮಾನದಲ್ಲಿ ನಾವೂ ಮಾಡುತ್ತೇವೆ ಎಂದರೆ, ನಮ್ಮ ಸಮಾಜವನ್ನು ʼ ನಾಗರಿಕ ಸಮಾಜ ʼ ಎಂದು ಹೇಗೆ ವ್ಯಾಖ್ಯಾನಿಸಲು ಸಾಧ್ಯ ? ಟಿಪ್ಪೂ ತನ್ನ ಆಳ್ವಿಕೆಯಲ್ಲಿ ಕೊಡಗಿನ, ಮಲಬಾರ್ ಪ್ರಾಂತ್ಯದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗಿದ್ದ ಎಂಬ ಐತಿಹ್ಯಗಳ ಸತ್ಯಾಸತ್ಯತೆಗಳು ಏನೇ ಇದ್ದರೂ ಅದನ್ನು ದಾಖಲಿತ ಇತಿಹಾಸದಲ್ಲಿ ಶೋಧಿಸಬೇಕಾದ್ದು ನಮ್ಮ ಬೌದ್ಧಿಕ ಜವಾಬ್ದಾರಿಯಾಗಬೇಕು. ಹಾಗೊಮ್ಮೆ ಇದು ವಾಸ್ತವವೇ ಆಗಿದ್ದರೂ ಎರಡು ಶತಮಾನಗಳ ಹಿಂದಿನ ಅತ್ಯಾಚಾರಗಳಿಗಿಂತಲೂ ನಮ್ಮನ್ನು ತೀವ್ರವಾಗಿ ಬಾಧಿಸಬೇಕಿರುವುದು ಇಂದು ನಮ್ಮ ಕಣ್ಣೆದುರಿನಲ್ಲೇ ನಡೆಯುತ್ತಿರುವ ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯಗಳಲ್ಲವೇ ?
ದಿನನಿತ್ಯ ಶೈಕ್ಷಣಿಕ/ಔದ್ಯೋಗಿಕ/ಆಧ್ಯಾತ್ಮಿಕ ಕೇಂದ್ರಗಳಲ್ಲೂ ಸೇರಿದಂತೆ ಸಮಾಜದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿರುವುದರ ಬಗ್ಗೆ ಹಾಗೂ ಹಾಥ್ರಸ್ ಮತ್ತು ಕಂಬಾಲಪಲ್ಲಿಯ ಬಗ್ಗೆ ಮೌನ ವಹಿಸುವವರಿಗೆ ಟಿಪ್ಪು ಸುಲ್ತಾನನ ಅಥವಾ ಔರಂಗಜೇಬನ ದೌರ್ಜನ್ಯಗಳ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕು ಇರಲು ಸಾಧ್ಯ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಸಮಾಜ ಇನ್ನೂ ನಾಗರಿಕತೆಯ ಬೆಳವಣಿಗೆಯ ಹಂತದಲ್ಲಿದ್ದಾಗ ನಡೆದಿರಬಹುದಾದ ದೌರ್ಜನ್ಯಗಳನ್ನು ನೆನಪಿಸಿಕೊಂಡು ದುಃಖಿಸುವ ಸಮಾಜದ ಒಂದು ಬೃಹತ್ ವರ್ಗವು, ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಅಣ್ಣಾವಾಸಲ್ ವಿಭಾಗದ ವೆಂಗೈವಯಲ್ ಗ್ರಾಮದಲ್ಲಿ ದಲಿತರು ಬಳಸುವ ಕುಡಿಯುವ ನೀರಿನ ಟ್ಯಾಂಕಿಗೆ ಮಲ ಸುರಿದ ಘಟನೆಯ ಬಗ್ಗೆ, ಮಧ್ಯಪ್ರದೇಶದಲ್ಲಿ ಶಿವರಾತ್ರಿಯ ದಿನ ದೇವಾಲಯ ಪ್ರವೇಶ ಮಾಡಿದ ದಲಿತರ ಮೇಲೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ, ಮೌನ ವಹಿಸುವುದನ್ನು ಹೇಗೆ ಅರ್ಥೈಸಲು ಸಾಧ್ಯ ? ಚರಿತ್ರೆಯಲ್ಲಿ ಸಂಭವಿಸಿದ ಅಸ್ಪೃಶ್ಯತೆಯ ಹೀನಾಚರಣೆಯ ಬಗ್ಗೆ ತೋರುವ ನಿರ್ಲಿಪ್ತತೆಯನ್ನೇ ವರ್ತಮಾನದ ಹೆಗ್ಗೋಠಾರ, ವೆಂಗೈವಯಿಲ್ ಘಟನೆಗಳ ಬಗ್ಗೆಯೂ ತೋರುವುದನ್ನು ಗಮನಿಸಿದಾಗ, ನಮ್ಮ ನಾಗರಿಕತೆಯ ಮುನ್ನಡೆಯ ಹಾದಿಯಲ್ಲಿ ಮನುಜ ಸೂಕ್ಷ್ಮತೆಗಳನ್ನು ಅಳವಡಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಅಲ್ಲವೇ ?
ಸ್ವತಃ ತನ್ನನ್ನು ಬಾಧಿಸದ ಅಥವಾ ತನ್ನ ಅಸ್ತಿತ್ವ-ಗೌರವ ಮತ್ತು ಅಸ್ಮಿತೆಗಳಿಗೆ ಧಕ್ಕೆ ಉಂಟುಮಾಡದ ಯಾವುದೇ ಬೆಳವಣಿಗೆಗೆ ವಿಮುಖವಾಗುವ ಒಂದು ವ್ಯಕ್ತಿಗತ ಪ್ರವೃತ್ತಿಯನ್ನು ಇಲ್ಲಿ ಗಮನಿಸಬೇಕಿದೆ. ಇಲ್ಲಿ ವ್ಯಕ್ತಿಯ ನೆಲೆಯನ್ನು ಮತ-ಧರ್ಮ-ಜಾತಿಯ ನೆಲೆಗಳು ಆಕ್ರಮಿಸಿಕೊಂಡಾಗ, ಈ ಪ್ರವೃತ್ತಿಯು ಸಾಮುದಾಯಿಕವಾಗಿಯೂ ಹೆಚ್ಚಾಗುತ್ತಲೇ ಹೋಗುತ್ತದೆ. ಈ ವಿಸೃತ ನೆಲೆಗಳನ್ನು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುವ ಸಲುವಾಗಿಯೇ ಚಾರಿತ್ರಿಕ ಸುಳ್ಳುಗಳನ್ನು ಸೃಷ್ಟಿಸಲಾಗುತ್ತದೆ ಅಥವಾ ಐತಿಹಾಸಿಕ ಸತ್ಯಗಳನ್ನು ನಿರಾಕರಿಸಲಾಗುತ್ತದೆ. ಈ ನಿರಾಕರಣೆಯ ಅಥವಾ ಮುರಿದುಕಟ್ಟುವ ಪ್ರಕ್ರಿಯೆಯಲ್ಲೇ ದೌರ್ಜನ್ಯ, ತಾರತಮ್ಯ, ಅಸಮಾನತೆ, ಅತ್ಯಾಚಾರ ಮತ್ತು ಅಸ್ಪೃಶ್ಯತೆಯಂತಹ ಹೀನಾಚರಣೆಗಳೂ ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತವೆ. ವರ್ತಮಾನದ ಸಾಂಸ್ಕೃತಿಕ-ಸಾಮಾಜಿಕ ಅವಶ್ಯಕತೆಗೆಗಳಿಗನುಗುಣವಾಗಿ ನಾವೇ ರೂಪಿಸಿಕೊಳ್ಳುವ ಅಸ್ಮಿತೆಗಳು ಚರಿತ್ರೆಯ ಘಟನೆಗಳ ನಿರ್ವಚನೆ/ಮರುನಿರ್ವಚನೆಗೂ ಭೂಮಿಕೆಯಾಗುವುದರಿಂದ, ಚರಿತ್ರೆಯಲ್ಲಿ ದಾಳಿಕರೋರರನ್ನೂ /ದಾಳಿಗೊಳಗಾದವರನ್ನೂ/ಸಂತ್ರಸ್ತರನ್ನೂ ಸಹ ಇದೇ ಸಾಪೇಕ್ಷ ನೆಲೆಯಲ್ಲಿಟ್ಟು ನೋಡುತ್ತೇವೆ. ಈ ಸಾಪೇಕ್ಷತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಅಧಿಕಾರ ರಾಜಕಾರಣದ ಮೆಟ್ಟಿಲುಗಳನ್ನು ಏರುವ ಅದ್ಭುತ ಕಲೆ ಭಾರತದ ರಾಜಕಾರಣದಲ್ಲಿ ತನ್ನದೇ ಆದ ಪ್ರಶಸ್ತ ಸ್ಥಾನ ಪಡೆದುಕೊಂಡಿದೆ.
ಹಾಗಾಗಿಯೇ ಇಡೀ ಸಮಾಜ ಕಲ್ಪಿತ ಸತ್ಯಗಳ ಸಂಕೋಲೆಗಳಲ್ಲಿ ಬಂದಿಯಾಗಿರುವಂತೆ ಕಾಣುತ್ತದೆ.