ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಸತತ ಆರನೇ ಬಾರಿಗೆ ಮುಸ್ಲಿಂ ಸಮುದಾಯದಿಂದ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗಕ್ಕೆ ಅತಿ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಮಾತ್ರವಲ್ಲದೆ ಈ ಎರಡೂ ರಾಜ್ಯಗಳಲ್ಲೇ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಂದ ಅತಿ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.
ಸಂಸದ ಡಿ.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರವಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ಈ ಡೇಟಾವನ್ನು ಒದಗಿಸಿದ್ದಾರೆ. ರಾಜ್ಯ ಮತ್ತು ಧರ್ಮದ ಆಧಾರದ ಮೇಲೆ ಕಳೆದ ಐದು ವರ್ಷಗಳಲ್ಲಿ ಆಯೋಗಕ್ಕೆ ಬಂದ ಒಟ್ಟು ದೂರುಗಳ ಸಂಖ್ಯೆಯನ್ನು ಸಂಸದರು ಕೇಳಿದ್ದರು. ಅಲ್ಲದೆ ಆಯೋಗವು ಕೇವಲ 2011 ರವರೆಗೆ ಕ್ರಮ ತೆಗೆದುಕೊಂಡ ವರದಿಗಳನ್ನು ಮಾತ್ರ ಸಲ್ಲಿಸಿದೆಯೇ ಮತ್ತು ಕಳೆದ ಹತ್ತು ವರ್ಷಗಳಿಂದ ಅವುಗಳನ್ನು ಸಲ್ಲಿಸದೇ ಇರಲು ಕಾರಣವೇನು ಎಂದು ಅವರು ಕೇಳಿದ್ದರು.
ಈ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಇರಾನಿ “ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು 2021-22 ರವರೆಗಿನ ವಾರ್ಷಿಕ ವರದಿಗಳನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದೆ.” “1992 ರ NCM ಕಾಯಿದೆಯ ಸೆಕ್ಷನ್ 12 ಮತ್ತು 13 ರ ಪ್ರಕಾರ, ಆಯೋಗವು ಪ್ರತಿ ಹಣಕಾಸು ವರ್ಷಕ್ಕೆ, ಅದರ ವಾರ್ಷಿಕ ವರದಿಯನ್ನು ಸಿದ್ಧಪಡಿಸುತ್ತದೆ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಹಿಂದಿನ ಹಣಕಾಸು ವರ್ಷದಲ್ಲಿನ ಚಟುವಟಿಕೆಗಳ ವಿವರಗಳನ್ನು ಒಕ್ಕೂಟ ಸರ್ಕಾರಕ್ಕೆ ರವಾನಿಸುತ್ತದೆ” ಎಂದು ಹೇಳಿದ್ದಾರೆ. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಕಾಯ್ದೆಯ ಪ್ರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಿಲ್ಲಾ ಮಟ್ಟದ ಸಮಿತಿಗಳ ರಚನೆಗೆ ಯಾವುದೇ ಅವಕಾಶವಿಲ್ಲ ಎಂದೂ ಹೇಳಿದ್ದಾರೆ.
ಅಂಕಿಅಂಶಗಳ ಪ್ರಕಾರ ಅಲ್ಪಸಂಖ್ಯಾತರ ಆಯೋಗವು 2017-18 ರಲ್ಲಿ ಒಟ್ಟು 1,498 ದೂರುಗಳನ್ನು ಸ್ವೀಕರಿಸಿದೆ, 2018-19 ರಲ್ಲಿ 1,871, 2019-20 ರಲ್ಲಿ 1,670, 2020-21 ರಲ್ಲಿ 1,463, 2021-22 ರಲ್ಲಿ 2,076 ಮತ್ತು ಪ್ರಸಕ್ತ ಹಣಕಾಸು ವರ್ಷವಾದ 2022-23ರ ಮೊದಲ ಹತ್ತು ತಿಂಗಳಲ್ಲಿ 1984 ದೂರುಗಳು ದಾಖಲಾಗಿವೆ . ಈ ಡಾಟಾಗಳ ಪ್ರಕಾರವೇ ಹೇಳುವುದಾದರೆ ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಂದ ದಾಖಲಾದ ದೂರುಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ.
ಒಟ್ಟಾರೆಯಾಗಿ, ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಹೆಚ್ಚಿನ ದೂರುಗಳು ಬಂದಿವೆ ಎಂದು ಅಂಕಿಅಂಶಗಳು ತೋರಿಸಿವೆ. ಮತ್ತು ಕಳೆದ ಎರಡು ವರ್ಷಗಳಲ್ಲಿ, ಮಹಾರಾಷ್ಟ್ರದಿಂದಲೂ ದೂರುಗಳ ಸಂಖ್ಯೆ ಹೆಚ್ಚಾಗಿದೆ. 2020-21ರಲ್ಲಿ ಉತ್ತರ ಪ್ರದೇಶದಲ್ಲಿ 732 ದೂರುಗಳು ದಾಖಲಾಗಿವೆ. ಇದು ರಾಷ್ಟ್ರವ್ಯಾಪಿ ದಾಖಲಾದ ಒಟ್ಟು ದೂರುಗಳ ಅರ್ಧಕ್ಕಿಂತ ಹೆಚ್ಚು. ದೆಹಲಿಯಲ್ಲಿ 106 ಮತ್ತು ಮಹಾರಾಷ್ಟ್ರದಲ್ಲಿ 60 ದೂರುಗಳು ಸಲ್ಲಿಕೆಯಾಗಿವೆ. ಈ ಮೂರು ರಾಜ್ಯಗಳಲ್ಲಿ ಹೆಚ್ಚಿನ ದೂರುದಾರರು ಮುಸ್ಲಿಮರು.

2020-21ರಲ್ಲಿ ಮುಸ್ಲಿಂ ಸಮುದಾಯದಿಂದ ಒಟ್ಟು 1,105 ದೂರುಗಳನ್ನು ಸಲ್ಲಿಕೆಯಾಗಿದ್ದು, ಈ ಪ್ರಮಾಣ 2021-22ರಲ್ಲಿ 1,420ಕ್ಕೆ ಏರಿಕೆಯಾಗಿದೆ. ಜನವರಿ 31 ರವರೆಗೆ ಕನಿಷ್ಠ 1,279 ದೂರುಗಳನ್ನು ದಾಖಲಾಗಿದ್ದು, ಇದು ಕಿರುಕುಳ ಮತ್ತು ತಾರತಮ್ಯದ ಘಟನೆಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಸೂಚಿಸುತ್ತದೆ. ಇವುಗಳಲ್ಲೂ ಹೆಚ್ಚಿನ ದೂರುಗಳು ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಿಂದ ದಾಖಲಾಗಿವೆ ಎಂದು ಅಂಕಿಅಂಶಗಳು ತೋರಿಸಿವೆ.
ಅಲ್ಲದೆ ಕ್ರಿಶ್ಚಿಯನ್ನರು 2020-21ರಲ್ಲಿ 103 ಮತ್ತು 2021-22ರಲ್ಲಿ 137 ದೂರುಗಳನ್ನು ದಾಖಲಿಸಿದ್ದಾರೆ. ಜನವರಿ 31 ರ ಹೊತ್ತಿಗೆ, ಅವರು 107 ದೂರುಗಳನ್ನು ದಾಖಲಿಸಿದ್ದಾರೆ ಎಂದು ಡೇಟಾ ತೋರಿಸುತ್ತದೆ. 2020-21ರಲ್ಲಿ ಹೆಚ್ಚಿನ ದೂರುಗಳು ತಮಿಳುನಾಡು, ಉತ್ತರ ಪ್ರದೇಶ ಮತ್ತು ಕೇರಳದಿಂದ ಬಂದಿದ್ದವು. ಆದರೆ ನಂತರದ ವರ್ಷದಲ್ಲಿ, ದೆಹಲಿ ಮತ್ತು ಮಹಾರಾಷ್ಟ್ರ ಈ ಪಟ್ಟಿಯಲ್ಲಿ ಸೇರಿಕೊಂಡವು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕ್ರೈಸ್ತರು ಸಲ್ಲಿಸಿರುವ 107 ದೂರುಗಳಲ್ಲಿ 21 ಉತ್ತರ ಪ್ರದೇಶದಿಂದ ಬಂದಿದ್ದು, 10 ತಮಿಳುನಾಡಿನಿಂದ ಬಂದಿವೆ. 2020-21ರಲ್ಲಿ ಸಿಖ್ಖರು 99 ದೂರುಗಳನ್ನು ದಾಖಲಿಸಿದ್ದಾರೆ, ಇದು 2021-22ರಲ್ಲಿದ್ದುದಕ್ಕಿಂತ 120% ಕ್ಕಿಂತ ಹೆಚ್ಚಾಗಿ 222 ದೂರುಗಳಿಗೆ ಏರಿದೆ. ಅವರು ಈ ವರ್ಷ ಈಗಾಗಲೇ 270 ದೂರುಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.
ಎರಡು ವರ್ಷಗಳ ಹಿಂದೆ, ಸಿಖ್ ಸಮುದಾಯದಿಂದ ಹೆಚ್ಚಿನ ದೂರುಗಳು ದೆಹಲಿ ಮತ್ತು ಯುಪಿ (ತಲಾ 21), ನಂತರ ಪಂಜಾಬ್ (13), ಮತ್ತು ಉತ್ತರಾಖಂಡ (12) ನಿಂದ ಬಂದಿದ್ದವು. ಆದರೆ, ಕಳೆದ ಹಣಕಾಸು ವರ್ಷದಲ್ಲಿ ದೆಹಲಿ ಮತ್ತು ಪಂಜಾಬ್‌ಗಳು ಅತಿ ಹೆಚ್ಚು ದೂರುಗಳನ್ನು ದಾಖಲಿಸಿವೆ (ತಲಾ 46), ನಂತರದ ಸ್ಥಾನದಲ್ಲಿ ಯುಪಿ (26) ಮತ್ತು ಹರಿಯಾಣ (19) ಇವೆ. ಈ ವರ್ಷ, ಸಮುದಾಯದಿಂದ ಹೆಚ್ಚಿನ ದೂರುಗಳು ಪಂಜಾಬ್ (73), ಯುಪಿ (45), ದೆಹಲಿ (37), ಮತ್ತು ಜಮ್ಮು ಮತ್ತು ಕಾಶ್ಮೀರ (17) ನಿಂದ ಬಂದಿವೆ.
2020-21 ರಲ್ಲಿ 78 ರಷ್ಟಿದ್ದ ಜೈನರು, ಬೌದ್ಧರು ಮತ್ತು ಪಾರ್ಸಿಗಳ ದೂರುಗಳು 100% ರಷ್ಟು ಏರಿಕೆಯಾಗಿ 2021-22 ರಲ್ಲಿ ಒಟ್ಟು 156 ಕ್ಕೆ ತಲುಪಿದೆ ಎಂದು ಡೇಟಾ ತೋರಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳುಗಳಲ್ಲಿ, ಈ ದೂರುಗಳು ಈಗಾಗಲೇ 173ಕ್ಕೆ ತಲುಪಿವೆ.






