ಕೋಲಾರ: ಕೃಷಿ, ಗುಡಿ ಕೈಗಾರಿಕೆ ಮೇಲೆ ಅವಂಬಿತವಾಗಿರುವ ಮಹಿಳೆಯರು, ಸ್ವಸಹಾಯ ಸಂಘಗಳ ಸದಸ್ಯರಿಗೆ 50 ಸಾವಿರ ರೂ. ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು. ಮುಂದಿನ ದಿನಗಳಲ್ಲಿ ಬಡ್ಡಿ ರಹಿತ ಸಾಲವನ್ನು 1 ಲಕ್ಷವರೆಗೆ ಹೆಚ್ಚಿಸಲಾಗುತ್ತೆ. ನಮ್ಮ ಸರ್ಕಾರ ಬರುವವರೆಗೆ ಕಂತುಗಳನ್ನು ಕಟ್ಟುತ್ತಿರಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಉಳಿಕೆ ಕಂತುಗಳನ್ನು ಮನ್ನಾ ಮಾಡುತ್ತೇವೆ ಎಂದು ಸ್ತ್ರೀ ಶಕ್ತಿ ಸಂಘಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.
ರೈತರಿಗೆ 5 ಲಕ್ಷ ರೂ ವರೆಗೂ ಬಡ್ಡಿ ರಹಿತ ಸಾಲ:
ಕೋಲಾರ ತಾಲೂಕಿನ ವೇಮಗಲ್ ನಲ್ಲಿ ಸೋಮವಾರ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಮಹಿಳೆಯರಿಗೆ ಹಾಗೂ ರೈತರಿಗೆ ಬಂಪರ್ ಆಫರ್ ಗಳನ್ನು ಘೋಷಿಸಿದ್ದಾರೆ. ರೈತರಿಗೆ ಸಹಕಾರಿ ಸಂಸ್ಥೆಗಳ ಮೂಲಕ 3 ಲಕ್ಷದ ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುತ್ತಿದ್ದೆವು, ಇದನ್ನು 5 ಲಕ್ಷದ ವರೆಗೆ ಏರಿಕೆ ಮಾಡುವ ಕೆಲಸ ಮಾಡುತ್ತೇವೆ. 10 ಲಕ್ಷದ ವರೆಗೆ 3% ಮಾತ್ರ ಬಡ್ಡಿ ವಸೂಲಿ ಮಾಡಲಾಗುತ್ತಿತ್ತು, ಇದನ್ನು 20 ಲಕ್ಷದ ವರೆಗೆ ಹೆಚ್ಚಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಇದನ್ನು ಕೂಡ ನಮ್ಮ ಪ್ರಣಾಳಿಕೆ ಸಮಿತಿಯವರ ಜೊತೆ ಚರ್ಚೆ ಮಾಡಿ ಪ್ರಣಾಳಿಕೆಯಲ್ಲಿ ಸೇರಿಸುವ ಕೆಲಸ ಮಾಡುತ್ತೇನೆ. ಹೈನುಗಾರಿಕೆ ಉದ್ದೇಶಕ್ಕೆ ಸಾಲ ಪಡೆಯಲು ಸಹಕಾರಿಯಾಗಲು ಪಶುಭಾಗ್ಯ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಕೋಲಾರದ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಮೀನು:
ಕೋಲಾರದ ಎಪಿಎಂಸಿ ಯಲ್ಲಿ 18 ಎಕರೆ ಜಮೀನು ಮಾತ್ರ ಇದೆ, ನೂರು ಎಕರೆ ಭೂಮಿ ಬೇಕು ಎಂದು ಮನವಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ 100 ಎಕರೆ ಜಮೀನು ನೀಡುತ್ತೇವೆ. ಕೋಲಾರದಲ್ಲಿ ಮುಖ್ಯವಾಗಿ ಟೊಮೆಟೋ ಮತ್ತು ಮಾವು ಕೃಷಿ ಮಾಡುತ್ತಾರೆ, ಹೀಗಾಗಿ ಇಲ್ಲಿ ಈ ಬೆಳೆಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ, ಇದನ್ನು ಮಾಡಿಕೊಡುತ್ತೇವೆ. ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಜಾರಿಗೆ ತಂದಿರುವುದರಿಂದ ಎಪಿಎಂಸಿಗಳು ಹಾಳಾಗಿ ಮುಚ್ಚಿಹೋಗುವ ಹಂತದಲ್ಲಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಈ ಕಾಯ್ದೆಗಳನ್ನು ವಾಪಾಸು ಪಡೆಯುವ ಕೆಲಸ ಮಾಡುತ್ತೇವೆ ಎಂದರು.

ಕೆಸಿ ವ್ಯಾಲಿ ಯೋಜನೆಯ 3ನೇ ಹಂತದ ಶುದ್ಧೀಕರಣ ಘಟಕ:
ಈಗ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಇದನ್ನು 6 ರೂ.ಗೆ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಕೆಸಿ ವ್ಯಾಲಿ ಮಾಡಿಕೊಡಬೇಕು ಎಂದು ಈ ಜಿಲ್ಲೆಯ ಎಲ್ಲ ಮುಖಂಡರು ಮನವಿ ಮಾಡಿದ್ದರು. ಇದಕ್ಕೆ 1400 ಕೋಟಿ ರೂ. ಖರ್ಚು ಮಾಡಿ ಯೋಜನೆ ಜಾರಿ ಮಾಡಿದ್ದರಿಂದ ಇಂದು ಜಿಲ್ಲೆಯ ಕೆರೆಗಳು ತುಂಬಿವೆ. ಜೆಡಿಎಸ್ ನವರು ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸಿದ್ರೆ ಬೆಳೆ ಹಾಳಾಗುತ್ತದೆ, ಈ ನೀರಿನಲ್ಲಿ ವಿಷ ಇರುತ್ತದೆ ಎಂದು ಅಪಪ್ರಚಾರ ಮಾಡಿದ್ದರು. ಈ ನೀರಿಗೆ 3ನೇ ಹಂತರ ಶುದ್ಧೀಕರಣ ಘಟಕವನ್ನು ಸ್ಥಾಪನೆ ಮಾಡಿ ಈಗ ಇರುವುದಕ್ಕಿಂತ ಇನ್ನೂ ಹೆಚ್ಚಿನ ಶುದ್ಧ ನೀರನ್ನು ಕೊಡುವ ಕೆಲಸ ಮಾಡುತ್ತೇವೆ. ನಾವು ಎತ್ತಿನಹೊಳೆ ಯೋಜನೆಯನ್ನು ಆರಂಭ ಮಾಡಿದ್ದೆವು, ಈಗ ಯೋಜನೆಯ ಕಾಮಗಾರಿ ನಿಂತು ಹೋಗಿದೆ. ನಾವು ಅಧಿಕಾರಕ್ಕೆ ಬಂದ ನಂತರ ಮತ್ತೆ ಯೋಜನೆಗೆ ಚಾಲನೆ ನೀಡಿ, 2 ವರ್ಷಗಳಲ್ಲಿ ಕಾಮಗಾರಿ ಮುಗಿಸಿ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡುತ್ತೇವೆ.
200 ಯುನಿಟ್ ಉಚಿತ ವಿದ್ಯುತ್, ತಿಂಗಳಿಗೆ 10 ಕೆಜಿ ಅಕ್ಕಿ ಫ್ರೀ:
ಬೆಲೆಯೇರಿಕೆಯಿಂದ ಮಹಿಳೆಯರು ಮತ್ತು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ಮೇಲೆ ಪ್ರತೀ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಹಾಗೂ ಪ್ರತೀ ಮನೆಯ ಯಜಮಾನಿಗೆ ಕುಟುಂಬ ನಿರ್ವಹಣೆಗಾಗಿ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ. ಈ ಎರಡೇ ಕಾರ್ಯಕ್ರಮಗಳಿಂದ ವರ್ಷಕ್ಕೆ 40,000 ಕೋಟಿ ರೂ. ಬೊಕ್ಕಸಕ್ಕೆ ಖರ್ಚು ಬರುತ್ತದೆ. ನಾವು ಇದ್ದಾಗ 7 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದೆವು, ಈಗದನ್ನು 5 ಕೆ.ಜಿ ಮಾಡಿದ್ದಾರೆ, ನಾವು ಅಧಿಕಾರಕ್ಕೆ ಬಂದ ಕೂಡಲೇ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ.
ನೀವು ಮುಂಬರುವ ಚುನಾವಣೆಯಲ್ಲಿ ನಮಗೆ ಮತ ನೀಡಬೇಕು. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ, ಇದಕ್ಕೆ ತಪ್ಪಿದರೆ ಒಂದು ಕ್ಷಣ ರಾಜಕೀಯದಲ್ಲಿ ಇರುವುದಿಲ್ಲ. ನನ್ನನ್ನು ಕೋಲಾರದಿಂದ ಸ್ಪರ್ಧೆ ಮಾಡುವಂತೆ ಸ್ಥಳೀಯ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ, ತಾವೆಲ್ಲ ನನಗೆ ಆಶೀರ್ವಾದ ಮಾಡುವ ಭರವಸೆ ನೀಡಿದರೆ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಪುನರುಚ್ಚರಿಸಿದರು.











