ಆರ್ಥಿಕ ಮುನ್ನಡೆಗೆ ಸಾರ್ವಜನಿಕ ಆರೋಗ್ಯದ ಗುಣಮಟ್ಟವೂ ಮುಖ್ಯವಾಗುತ್ತದೆ
ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಅತಿ ಕಡಿಮೆ ವೆಚ್ಚ ಮಾಡುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಇತ್ತೀಚೆಗೆ ಪ್ರಕಟವಾದ ಆಕ್ಸ್’ಫಾಮ್ ವರದಿಯಲ್ಲಿ ಹೇಳಲಾಗಿದೆ. ಸರ್ಕಾರಗಳು ಜನಸಾಮಾನ್ಯರಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದಕ್ಕೂ, ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವುದಕ್ಕೂ ಹಾಗೂ ತಳಮಟ್ಟದಲ್ಲಿ ದೇಶದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆಯನ್ನು ಒದಗಿಸುವುದಕ್ಕೂ ಬಹಳಷ್ಟು ಅಂತರ ಇರುವುದನ್ನು ಯಾವುದೇ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಾಣಬಹುದು. ಭಾರತವೂ ಹೊರತಾದುದಲ್ಲ. ಆಕ್ಸ್ಫಾಮ್ ವರದಿಯ ಅನುಸಾರ ಭಾರತದಲ್ಲಿ ಸರ್ಕಾರದ ಆರೋಗ್ಯ ವೆಚ್ಚ ಜಿಡಿಪಿಯ ಶೇ 2.1ರಷ್ಟಿದೆ. ಇದು ಅಪೇಕ್ಷಿತ ಶೇ 2.5ಕ್ಕಿಂತಲೂ ಕಡಿಮೆ ಇರುವುದಲ್ಲದೆ, ಜಾಗತಿಕ ಸರಾಸರಿ ಶೇ 6ಕ್ಕೆ ಹೋಲಿಸಿದರೆ ಅತಿಕಡಿಮೆ ಎನ್ನಬಹುದು. ವಾರ್ಷಿಕ ಬಜೆಟ್’ಗಳಲ್ಲಿ ಆರೋಗ್ಯ ವಲಯಕ್ಕೆ ಕಡಿಮೆ ಹಣ ವಿನಿಯೋಗ ಮಾಡುವುದರಿಂದ ದೇಶದ ಒಟ್ಟಾರೆ ಆರೋಗ್ಯ ವ್ಯವಸ್ಥೆಯಲ್ಲಿ ಅಸಮಾನತೆಗಳು ಹೆಚ್ಚಾಗುವುದಷ್ಟೇ ಅಲ್ಲದೆ ಅವಕಾಶವಂಚಿತರೂ ಹೆಚ್ಚಾಗುತ್ತಾರೆ.
ಭಾರತದಲ್ಲಿ ಅರ್ಥವ್ಯವಸ್ಥೆಯೂ ಜಾತಿ ಶ್ರೇಣೀಕರಣದ ನೆಲೆಯಲ್ಲೇ ರೂಪುಗೊಳ್ಳುವುದರಿಂದ ಸಹಜವಾಗಿಯೇ ಅವಕಾಶವಂಚಿತರ ಪೈಕಿ ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ್ಗಗಳೇ ಹೆಚ್ಚಾಗಿ ಕಂಡುಬರುತ್ತಾರೆ. ವಿಶಾಲ ಭೂಪ್ರದೇಶ, ಅಪಾರ ಜನಸಂಖ್ಯೆ ಮತ್ತು ವೈವಿಧ್ಯಮಯ ಹವಾಮಾನಗಳಿಂದ ಕೂಡಿದ ಭಾರತದಲ್ಲಿ ಜನಸಾಮಾನ್ಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಮಾಪನ ಮಾಡುವಾಗಲೂ ಆಯಾ ಪ್ರದೇಶಗಳ ಭೌಗೋಳಿಕ/ಹವಾಮಾನ ಲಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಇಂದಿಗೂ ನಗರ-ಗ್ರಾಮಗಳ ನಡುವಿನ ಅಸಮಾನತೆಗಳು ಹೆಚ್ಚಾಗುತ್ತಲೇ ಇರುವುದರಿಂದ ಆರೋಗ್ಯ ರಕ್ಷಣೆಯ ವಲಯದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಹಣ ವಿನಿಯೋಗ ಮಾಡಬೇಕಾಗುತ್ತದೆ. ದೇಶದ ಶೇ 75 ರಷ್ಟು ಜನತೆ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದರೂ ಶೇ 31.5ರಷ್ಟು ಆಸ್ಪತ್ರೆಗಳು, ಶೇ 16ರಷ್ಟು ಹಾಸಿಗೆಗಳು ಗ್ರಾಮಗಳಲ್ಲಿ ಲಭ್ಯವಿದೆ. ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ 21.8ರಲ್ಲಿ ವೈದ್ಯರ ಕೊರತೆ ಇದ್ದರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಶೇ 67.96ರಷ್ಟಿದೆ ಎಂದು ಆಕ್ಸ್ಫಾಮ್ ಸಮೀಕ್ಷೆ ಹೇಳುತ್ತದೆ.
ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಸಂಶೋಧನೆಯೊಂದರ ಅನುಸಾರ ಜಿಡಿಪಿಯ ಶೇ 3.8ರಷ್ಟನ್ನು ಖರ್ಚು ಮಾಡಿದರೆ, ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಎಲ್ಲರಿಗೂ ಒದಗಿಸಲು ಸಾಧ್ಯ. ದೇಶದಲ್ಲಿರುವ ಮೊದಲ ನೂರು ಕೋಟ್ಯಧಿಪತಿಗಳಿಗೆ ಶೇ 10ರಷ್ಟು ವಾರ್ಷಿಕ ತೆರಿಗೆ ವಿಧಿಸಿದರೆ ಈ ಕೊರತೆಯನ್ನು ನೀಗಿಸಬಹುದು ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ. ದೇಶದ ಕೋಟ್ಯಧಿಪತಿಗಳ ಸಂಪತ್ತಿನ ಮೇಲೆ ಶೇ 3ರಷ್ಟು ಸಂಪತ್ತು ತೆರಿಗೆ ವಿಧಿಸಿದರೆ, ಭಾರತದ ಅತಿ ದೊಡ್ಡ ಆರೋಗ್ಯ ಯೋಜನೆಯಾದ ರಾಷ್ಟ್ರೀಯ ಆರೋಗ್ಯ ಮಿಷನ್’ವನ್ನು ಸರಿದೂಗಿಸಲು ಸಾಧ್ಯವಾಗುತ್ತದೆ. ಸರ್ಕಾರವು ಐದು ವರ್ಷಗಳ ಈ ಯೋಜನೆಗೆ 37800 ಕೋಟಿ ರೂಗಳನ್ನು ನಿಯೋಜಿಸಿದ್ದು ಇದು ಅಸಮಪರ್ಕವಾಗಿದೆ. ಆರೋಗ್ಯ ವಲಯಕ್ಕೆ ಕಡಿಮೆ ಪ್ರಮಾಣದ ಹಣ ವಿನಿಯೋಗದಿಂದ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಅಪೌಷ್ಟಿಕತೆ ಭಾರತವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು ಶೇ 42ರಷ್ಟು ಆದಿವಾಸಿ ಮಕ್ಕಳು ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಆದಿವಾಸಿಗಳ ಆರೋಗ್ಯ ರಕ್ಷಣೆಗೆ ಸರ್ಕಾರವೇ ನೇಮಿಸಿರುವ ಸಮಿತಿಯು ತಲಾ 2447 ರೂಗಳನ್ನು ನಿಯೋಜಿಸಿದರೆ ಈ ವಲಯದಲ್ಲಿ ಗರಿಷ್ಠ ಸಾಧನೆ ಮಾಡಲು ಸಾಧ್ಯವಾಗುತ್ತದೆ. ದೇಶದ ಮೊದಲ ಹತ್ತು ಕೋಟ್ಯಧಿಪತಿಗಳಿಗೆ ಶೇ 5ರಷ್ಟು ತೆರಿಗೆ ವಿಧಿಸಿದರೆ ಈ ಮೊತ್ತವನ್ನು ನೀಗಿಸಲು ಸಾಧ್ಯವಾಗುತ್ತದೆ ಎಂದು ಆಕ್ಸ್’ಫಾಮ್ ವರದಿ ಹೇಳುತ್ತದೆ.
ಆರೋಗ್ಯ ರಕ್ಷಣೆಗಾಗಿ ತಮ್ಮ ಆದಾಯವನ್ನು ಮೀರಿ ಕೈಯ್ಯಿಂದ ಖರ್ಚು ಮಾಡಬೇಕಾಗಿರುವುದರಿಂದಲೇ ದುರ್ಬಲ ವರ್ಗಗಳು ಹೆಚ್ಚಿನ ಪ್ರಮಾಣದಲ್ಲಿ ಬಡತನದ ಕೂಪಕ್ಕೆ ತಳ್ಳಲ್ಪಡುತ್ತಿವೆ. ಒಂದು ಸಮೀಕ್ಷೆಯ ಪ್ರಕಾರ ದೇಶದ ಜನತೆ ತಮ್ಮ ಒಟ್ಟು ವೈದ್ಯಕೀಯ ವೆಚ್ಚದ ಶೇ 63ರಷ್ಟನ್ನು ಕೈಯ್ಯಿಂದಲೇ, ಸ್ವಂತ ಆದಾಯವನ್ನು ಮೀರಿ ಭರಿಸುತ್ತಾರೆ. ಆರೋಗ್ಯ ರಕ್ಷಣೆಯ ವೆಚ್ಚಗಳ ಪರಿಣಾಮದಿಂದಲೇ ದೇಶದ ಶೇ 7ರಷ್ಟು ಜನರು ಪ್ರತಿ ವರ್ಷ ಬಡತನದ ಕೂಪಕ್ಕೆ ತಳ್ಳಲ್ಪಡುತ್ತಾರೆ ಎಂದು ಸಮೀಕ್ಷೆಯೊಂದರಲ್ಲಿ ಹೇಳಲಾಗಿದೆ. ಸರ್ಕಾರವು ಜಿಡಿಪಿಯ ಶೇ 3ರಷ್ಟನ್ನು ಆರೋಗ್ಯ ರಕ್ಷಣೆಗೆ ವಿನಿಯೋಗಿಸಿದರೂ, ಜನರು ಕೈಯ್ಯಿಂದಲೇ ಮಾಡುವ ವೆಚ್ಚದ ಪ್ರಮಾಣವನ್ನು ಶೇ 30ಕ್ಕೆ ಇಳಿಸಲು ಸಾಧ್ಯವಾಗುತ್ತದೆ. ಹಾಗೆಯೇ ದೇಶದ ಎಲ್ಲ ಕೋಟ್ಯಧಿಪತಿಗಳಿಗೆ ಶೇ 2ರಷ್ಟು ವಾರ್ಷಿಕ ತೆರಿಗೆ ವಿಧಿಸಿದರೂ, ಅಪೌಷ್ಟಿಕತೆಯನ್ನು ನಿವಾರಿಸಲು ಮೂರು ವರ್ಷಗಳಿಗೆ ತಗಲುವ ವೆಚ್ಚವನ್ನು ಭರಿಸಬಹುದು ಎಂದು ಸಮೀಕ್ಷೆಗಳು ಹೇಳುತ್ತವೆ.
ವಾರ್ಷಿಕ ಬಜೆಟ್’ಗಳ ಆದ್ಯತೆಗಳು
ಪ್ರತಿವರ್ಷ ಸರ್ಕಾರಗಳು ಮಂಡಿಸುವ ಬಜೆಟ್ಗಳನ್ನು ಕೇವಲ ಹಣಕಾಸು ವಿನಿಯೋಗ ದೃಷ್ಟಿಯಿಂದಲೇ ನೋಡಿದರೆ ಕೆಲವು ಕುತೂಹಲಗಳನ್ನು ಮೂಡಿಸಲಷ್ಟೇ ಸಾಧ್ಯ. ಆದರೆ ಈ ಬಜೆಟ್’ಗಳಲ್ಲಿ ನಿಯೋಜಿಸಲಾಗುವ ಅನುದಾನ ಮತ್ತು ಹಣದ ಮೊತ್ತವೇ ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ಮಾಪನಗಳೂ ಆಗುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮೂಲ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ತಳಮಟ್ಟದ ಕಟ್ಟಕಡೆಯ ವ್ಯಕ್ತಿಗೂ ತಲುಪಲು ಸರ್ಕಾರವು ಎಷ್ಟು ಉತ್ಸುಕವಾಗಿದೆ ಎನ್ನುವುದನ್ನು ಈ ಬಜೆಟ್ಗಳು ಸೂಚಿಸುತ್ತವೆ. ಎರಡನೆ ಮಹಾಯುದ್ಧ ನಂತರ ಬ್ರಿಟನ್ನಿನಲ್ಲಿ ಆರೋಗ್ಯ ವಲಯದಲ್ಲಿ ಉಂಟಾಗಿದ್ದ ಕ್ಷೋಭೆಯ ಸಂದರ್ಭದಲ್ಲಿ ಸಾಮಾಜಿಕ ಅರ್ಥಶಾಸ್ತ್ರಜ್ಞ ವಿಲಿಯಂ ಬೆವರಿಡ್ಜ್ ಐದು ಪ್ರಮುಖ ಸವಾಲುಗಳನ್ನು ಗುರುತಿಸುತ್ತಾರೆ. ಕೊರತೆ, ರೋಗಗಳು, ಅಜ್ಞಾನ, ಹೀನಾವಸ್ಥೆ ಮತ್ತು ಆಲಸ್ಯ . ಇವುಗಳನ್ನು ನೀಗಿಸುವಲ್ಲಿ ಪ್ರಭುತ್ವ ಕಲ್ಯಾಣ ರಾಜ್ಯಗಳು ಹೆಚ್ಚು ಗಮನ ನೀಡಬೇಕು ಎಂದು ಹೇಳುತ್ತಾರೆ. ಈ ದೃಷ್ಟಿಯಿಂದ ನೋಡಿದಾಗ ಭಾರತದಲ್ಲಿ ಸರ್ಕಾರಗಳು ವಿಮಾನ ನಿಲ್ದಾಣ, ಹೆದ್ದಾರಿಗಳು, ಅತಿವೇಗದ ರೈಲುಗಳಿಗಿಂತಲೂ ಮುಖ್ಯವಾಗಿ, ಮೂಲತಃ ಪೌಷ್ಟಿಕತೆ, ಆರೋಗ್ಯ, ಶಿಕ್ಷಣ, ಪರಿಸರ ಸ್ವಚ್ಚತೆ ಮತ್ತು ನೈರ್ಮಲ್ಯ ಈ ಐದು ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.
ಈ ವರ್ಷದ ಕೇಂದ್ರ ಬಜೆಟ್’ನಲ್ಲಿ ಕೆಲವು ನ್ಯಾಯಯುತವಾದ ಯೋಜನೆಗಳಿಗೆ ಸರ್ಕಾರ ನೆರವು ನೀಡಿರುವುದನ್ನು ಗಮನಿಸಬಹುದು. 80 ಕೋಟಿ ಜನರಿಗೆ ಉಚಿತ ಪಡಿತರ, 500 ಹಿಂದುಳಿದ ಬ್ಲಾಕ್ಗಳ ಅಭಿವೃದ್ಧಿ, ವಸತಿ ಶುದ್ದ ಕುಡಿವ ನೀರು ಮತ್ತು ಶೌಚಾಲಯ ಸೌಲಭ್ಯಗಳ ವಿಸ್ತರಣೆ, ನರೇಗಾ ಯೋಜನೆಯ ಮೂಲಕ ಉದ್ಯೋಗಾವಕಾಶಗಳು, ಕೌಶಲಾಭಿವೃದ್ಧಿಗೆ ಉತ್ತೇಜನ ಇವೆಲ್ಲವೂ ಸಹ ಸ್ವಾಗತಾರ್ಹ ಕ್ರಮಗಳೇ ಆಗಿವೆ. ಆದರೆ ಈ ಕ್ರಮಗಳಿಂದಲೇ ದೇಶದಲ್ಲಿ ತಾಂಡವಾಡುತ್ತಿರುವ ಅಸಮಾನತೆಯನ್ನು ನೀಗಿಸಲು ಸಾಧ್ಯವಾಗುವುದಿಲ್ಲ. ಉನ್ನತ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಮತ್ತು ಪೌಷ್ಟಿಕತೆಯನ್ನು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ವಿಸ್ತರಿಸಿದಲ್ಲಿ ದೀರ್ಘಕಾಲಿಕ ಸುಸ್ಥಿರ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗುತ್ತದೆ. ಅನಕ್ಷರತೆ, ಅಪೌಷ್ಟಿಕತೆ ಮತ್ತು ಅನಾರೋಗ್ಯ ಹೆಚ್ಚಾಗಿರುವ ಯಾವುದೇ ದೇಶವೂ ಮಹತ್ತರ ಅಭಿವೃದ್ಧಿ ಸಾಧಿಸಲಾಗುವುದಿಲ್ಲ. ಇಂದು ಅಭಿವೃದ್ಧಿ ಹೊಂದಿರುವ ಎಲ್ಲ ದೇಶಗಳಲ್ಲೂ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆಯ ಉನ್ನತಿಗಾಗಿ ಹೆಚ್ಚಿನ ಬಂಡವಾಳ ಹೂಡಿರುವುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. ಆದರೆ ಭಾರತದಲ್ಲಿ ಸ್ವಾತಂತ್ರ್ಯ ಬಂದ ದಿನದಿಂದಲೂ ಸಾರ್ವತ್ರಿಕ ಶಿಕ್ಷಣ ಮತ್ತು ಆರೋಗ್ಯಕ್ಕೂ ದೇಶದ ಅಭಿವೃದ್ಧಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿರುವುದು ವಾಸ್ತವ.
ಈ ದೃಷ್ಟಿಯಿಂದ ನೋಡಿದಾಗ ಪ್ರಸ್ತುತ ಬಜೆಟ್ ನಿರಾಶಾದಾಯಕ ಎನ್ನಬಹುದು. ಒಂದು ಅಧ್ಯಯನದ ಪ್ರಕಾರ ಕೋವಿದ್ 19 ಸಾಂಕ್ರಾಮಿಕದ ಪರಿಣಾಮ ಭಾರತದಲ್ಲಿ 23 ಕೋಟಿ ಜನರು ದಾರಿದ್ರ್ಯತೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ. ಎಎಸ್ಇಆರ್ ಸಮೀಕ್ಷೆಯ ಅನುಸಾರ ಐದನೆ ತರಗತಿಯ ಬಹುಪಾಲು ಮಕ್ಕಳಿಗೆ 2ನೆ ತರಗತಿಯ ಪಠ್ಯವನ್ನು ಓದಲೂ ಕಷ್ಟವಾಗುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರಲ್ಲಿ ನೀಡಿರುವ ದತ್ತಾಂಶಗಳ ಅನುಸಾರ, ಐದು ವರ್ಷಕ್ಕೂ ಕೆಳಗಿನ ಶೇ 35.5ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯ ಸಮಸ್ಯೆ ಎದುರಿಸುತ್ತಿವೆ. ಇದೇ ವಯೋಮಾನದ ಶೇ 32.1ರಷ್ಟು ಮಕ್ಕಳ ತೂಕ ಅಗತ್ಯಕ್ಕಿಂತಲೂ ಕಡಿಮೆ ಇದೆ. ಆದರೂ ಬಜೆಟ್ಗಳಲ್ಲಿ ವಿನಿಯೋಗಿಸಲಾದ ಹಣದ ಮೊತ್ತ ಯಥಾಸ್ಥಿತಿಯಲ್ಲಿದೆ. ದೇಶಾದ್ಯಂತ ಖಾಸಗಿ ಶಾಲೆಗಳು ದುಬಾರಿಯಾಗುತ್ತಿರುವುದರಿಂದ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದರೂ, ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ವಿನಿಯೋಗಿಸಿದ ಬಜೆಟ್ ಮೊತ್ತವನ್ನು ಶೇ 9ರಷ್ಟು ಕಡಿಮೆ ಮಾಡಲಾಗಿದೆ.
ದೇಶದ ವಿವಿಧೆಡೆಗಳಲ್ಲಿ ಸೋಂಕು ರೋಗಗಳಷ್ಟೇ ಅಲ್ಲದೆ , ಸೋಂಕಿಲ್ಲದ ರೋಗಗಳು, ಮಾನಸಿಕ ಕಾಯಿಲೆ ಮತ್ತು ಮುಪ್ಪಿನ ಕಾಯಿಲೆಗಳು ಹೆಚ್ಚಾಗುತ್ತಿದ್ದರೂ ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದ್ದು, ಮೂಲ ಸೌಕರ್ಯಗಳು, ಕೈಗೆಟುಕುವ ಚಿಕಿತ್ಸೆ ಮತ್ತು ತಪಾಸಣೆಯ ಹಾದಿಗಳೂ ಸಹ ಹೆಚ್ಚಿನ ಜನಸಂಖ್ಯೆಗೆ ಅಲಭ್ಯವಾಗುತ್ತಿವೆ. ಕೋವಿದ್ 19 ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಮೂರು ಪ್ರಮುಖ ಒಳಬಿರುಕುಗಳನ್ನು ಬಹಿರಂಗಪಡಿಸಿತ್ತು. ಈ ಸಮಯದಲ್ಲಿ ಸಾಮಾನ್ಯ ಜನತೆಯ ಆದಾಯದಲ್ಲಿ ಕುಸಿತ ಉಂಟಾಗುತ್ತಿರುವಂತೆಯೇ ಆರೋಗ್ಯ ಸೇವೆಯ ವೆಚ್ಚವೂ ಹೆಚ್ಚಾಗಿತ್ತು. ಉತ್ತರಭಾರತದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯ ಕೊರತೆಯಿಂದಾಗಿಯೇ ಸಾಕಷ್ಟು ಸಾವುಗಳೂ ಉಂಟಾಗಿದ್ದವು. ಸೂಕ್ತ ವೈದ್ಯಕೀಯ ಉಪಕರಣಗಳು ಮತ್ತು ಸೌಲಭ್ಯಗಳು ಇಲ್ಲದ ಕಾರಣ ಸಾವಿನ ಪ್ರಮಾಣವೂ ಹೆಚ್ಚಾಗಿತ್ತು. (ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 35 ಸಾವುಗಳು ಸಂಭವಿಸಿದ್ದನ್ನು ಸ್ಮರಿಸಬಹುದು).
ಇದೇ ಸಂದರ್ಭದಲ್ಲಿ ವೈದ್ಯಕೀಯ ಸೇವೆಗಳ ನಿಯಂತ್ರಣದಲ್ಲೂ ಸಾಕಷ್ಟು ನ್ಯೂನತೆಗಳು ಮುನ್ನೆಲೆಗೆ ಬಂದಿದ್ದವು. ಆರೋಗ್ಯ ವಲಯವನ್ನು ಮಾರುಕಟ್ಟೆ ಶಕ್ತಿಗಳಿಗೆ ಮುಕ್ತಗೊಳಿಸುವುದರಿಂದ ಅಪಾಯಗಳು ಕೋವಿದ್ ಸಂದರ್ಭದಲ್ಲೇ ನಿಚ್ಚಳವಾಗಿ ಗೋಚರಿಸಿದ್ದವು. ಕೋವಿದ್ 19 ಬಿಕ್ಕಟ್ಟಿನ ಸಂದರ್ಭದಲ್ಲೇ ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸರ್ಕಾರಗಳು ಹೆಚ್ಚಿನ ಬಂಡವಾಳ ಹೂಡುವುದು ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಅತ್ಯವಶ್ಯ ಎಂದು ಮನದಟ್ಟಾಗಿತ್ತು. ಈ ಎಲ್ಲ ಸಮಸ್ಯೆಗಳನ್ನೂ ನಿವಾರಿಸುವುದು ಇಂದಿನ ಸರ್ಕಾರಗಳ ಆದ್ಯತೆಯಾಗಬೇಕಿದೆ. ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಭದ್ರಗೊಳಿಸುವುದೇ ಅಲ್ಲದೆ ಸಾಮಾನ್ಯ ಜನತೆಗೆ ಒಂದು ರಕ್ಷಣಾ ಕವಚದಂತೆ ನಿರ್ಮಿಸುವುದೂ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸದೃಢಗೊಳಿಸಲು ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ಉತ್ತೇಜಿಸಿ , ಆರೋಗ್ಯ ರಕ್ಷಣೆಯನ್ನು ವಿಸ್ತರಿಸಲು ಸರ್ಕಾರಗಳು ವಾರ್ಷಿಕ ಬಜೆಟ್ಗಳಲ್ಲಿ ಹೆಚ್ಚಿನ ಹಣ ವಿನಿಯೋಗ ಮಾಡಬೇಕಾಗುತ್ತದೆ.
2023-24 ವಾರ್ಷಿಕ ಬಜೆಟ್ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಹಣವನ್ನು ನಿಯೋಜಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿರುವ 86,175 ಕೋಟಿ ರೂಗಳು ಮತ್ತು ಆರೋಗ್ಯ ಕ್ಷೇತ್ರದ ಸಂಶೋಧನೆಗೆ 2,980 ಕೋಟಿ ರೂಗಳನ್ನು ವಿನಿಯೋಗಿಸಲಾಗಿದ್ದು, ಕಳೆದ ಬಜೆಟ್ಗೆ ಹೋಲಿಸಿದರೆ ಸೇ 3.82ರಷ್ಟು ಹೆಚ್ಚಳವನ್ನು ಗುರುತಿಸಬಹುದು. ಆದರೂ ಒಟ್ಟಾರೆ ಬಜೆಟ್ ಮೊತ್ತಕ್ಕೆ ಹೋಲಿಸಿದರೆ ಕೇವಲ ಶೇ 2.06ರಷ್ಟು ಮಾತ್ರವೇ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲ್ಪಟ್ಟಿದೆ. ಇದು ಜಿಡಿಪಿಯ ಶೇ 0.35ರಷ್ಟಾಗುತ್ತದೆ. ದೇಶಾದ್ಯಂತ 157 ನರ್ಸಿಂಗ್ ಶಾಲೆಗಳನ್ನು ನಿರ್ಮಿಸುವ ಯೋಜನೆ ಆಶಾದಾಯಕವೂ, ಸ್ವಾಗತಾರ್ಹವೂ ಆದರೂ ಅದರಿಂದ ಮೂಲಭೂತ ಆರೋಗ್ಯ ಸಮಸ್ಯೆಗಳು ಬಗೆಹರಿಯವುದಿಲ್ಲ. 2025ರ ವೇಳೆಗೆ ಭಾರತದಲ್ಲಿ ಜಿಡಿಪಿಯ ಶೇ 2.5ರಷ್ಟನ್ನು ಆರೋಗ್ಯ ರಕ್ಷಣೆಗಾಗಿ ವಿನಿಯೋಗಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಈಗಿನ ಬಜೆಟ್ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಗುರಿಯನ್ನು ತಲುಪಲು ಭಾರತ ಬಹುದೂರ ಕ್ರಮಿಸಬೇಕಿದೆ ಎನಿಸುತ್ತದೆ.
ಕೇವಲ ರಾಜಕೀಯ ಉದ್ದೇಶಗಳನ್ನೇ ಗಮನದಲ್ಲಿರಿಸಿಕೊಂಡು ಬಜೆಟ್ಗಳಲ್ಲಿ ಹಣ ವಿನಿಯೋಗಿಸುವುದು ಮತ್ತು ಆಡಳಿತ ನೀತಿಗಳನ್ನು ರೂಪಿಸುವುದು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರಲು ಸಾಧ್ಯವಿಲ್ಲ. ಸರ್ಕಾರಗಳ ಈ ನೀತಿಗಳು ವಿಫಲವಾದರೆ ಅತಿಹೆಚ್ಚು ಸಂಕಷ್ಟಗಳನ್ನು ಅವಕಾಶವಂಚಿತರು, ಬಡ ಜನತೆಯೇ ಎದುರಿಸಬೇಕಾಗುತ್ತದೆ. ಮತ್ತೊಂದೆಡೆ ಸಾಂಕ್ರಾಮಿಕವಾಗಲೀ, ಇತರ ರೋಗಗಳಾಗಲೀ ಕೇವಲ ಬಡಜನತೆಯನ್ನು ಮಾತ್ರವೇ ಕಾಡುವುದಿಲ್ಲ. ಕೋವಿದ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯ ಶ್ರೀಮಂತರೂ, ಮಧ್ಯಮ ವರ್ಗಗಳ ಜನತೆಯೂ ಆಸ್ಪತ್ರೆಯಲ್ಲಿ ಹಾಸಿಗೆಗಳಿಲ್ಲದೆ, ಆಮ್ಲಜನಕ ಪೂರೈಕೆ ಇಲ್ಲದೆ ಸಾವಿಗೀಡಾಗಿರುವುದನ್ನು ಕಂಡಿದ್ದೇವೆ. ಈ ಸಂದರ್ಭದಲ್ಲಿ ಕಲಿತ ಪಾಠಗಳನ್ನು ಸದಾ ನೆನಪಿನಲ್ಲಿಡಬೇಕಾಗುತ್ತದೆ. ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸುವುದಾಗಲೀ, ನಿರ್ಣಾಯಕವಾದ ಬಂಡವಾಳ ಹೂಡಿಕೆಯಿಂದ ಹಿಂತೆಗೆಯುವುದಾಗಲೀ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಭಾರತದ ಆರೋಗ್ಯ ವಲಯದಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ.
( ಈ ಲೇಖನದಲ್ಲಿ ಒದಗಿಸಲಾಗಿರುವ ಅಂಕಿಅಂಶಗಳಿಗೆ ಅಧಾರ ಆಕ್ಸ್’ಫಾಮ್ ವರದಿ ಮತ್ತು ಬಜೆಟ್ ಕುರಿತ ವಿಶ್ಲೇಷಣೆಗೆ ಮೂಲ ಆಧಾರ : ಭಾರತ ಸರ್ಕಾರದ ಕೇಂದ್ರ ಆರೋಗ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ಕೆ. ಸುಜಾತಾ ರಾವ್ ಅವರ ಲೇಖನ Neglecting the health Sector has consequences ̲ The Hindu 8th Feb 2023)