ಬೆಂಗಳೂರು: ಸ್ಯಾಂಟ್ರೊ ರವಿಯನ್ನು ಪೊಲೀಸ್ ವಶಕ್ಕೆ ನೀಡಲು ನಿರಾಕರಿಸಿರುವ ಕೋರ್ಟ್ ಜನವರಿ 25ರ ವರಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಿವಿಧ ಪ್ರಕರಣಗಳಲ್ಲಿ ಆರೋಪ ಹೊತ್ತಿರುವ ಸ್ಯಾಂಟ್ರೋ ರವಿಯನ್ನ ಜನವರಿ 25ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.ಪ್ರಕರಣ ಸಂಬಂಧ ಸೋಮವಾರ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೇಳಲು ಪೊಲೀಸರು ಸ್ಯಾಂಟ್ರೋ ರವಿಯನ್ನ ಕೋರ್ಟ್ ಗೆ ಹಾಜರುಪಡಿಸಿದ್ದರು. ಸ್ಯಾಂಟ್ರೊ ರವಿ ಜೊತೆ ರಾಮ್ ಜಿ ಹಾಗೂ ಶೃಜಿತ್ ರನ್ನ ಪೋಲಿಸರು ಕರೆ ತಂದಿದ್ದರು.ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ಮುಂದುವರಿಕೆ ಮಾಡಲಾಗಿದ್ದು, ಜನವರಿ 25ರಂದು ಮತ್ತೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕೋರ್ಟ್ ಸೂಚನೆ ನೀಡಿದೆ. ಮೈಸೂರಿನ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಈ ಕುರಿತು ಆದೇಶ ಹೊರಡಿಸಿದ್ದು ಜನವರಿ 18ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದರು.
ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ, ಜಾತಿನಿಂದನೆ, ವಂಚನೆ ಆರೋಪವಿದೆ. ವರ್ಗಾವಣೆ ಸೇರಿದಂತೆ ಬೇರಾವುದೇ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ. ಸ್ಯಾಂಟ್ರೋ ರವಿಗೆ ಬೆದರಿಕೆಯೂ ಇದೆ ಎಂದು ಸ್ಯಾಂಟ್ರೋ ರವಿ ಪರ ವಕೀಲರು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಜನವರಿ18 ರಂದು ತರಕಾರು ಅರ್ಜಿ ಸಲ್ಲಿಸಲು ಸರ್ಕಾರಿ ವಕೀಲರಿಗೆ ಸೂಚನೆ ನೀಡಿತು.
ಸಿಐಡಿ ಗೆ ಪ್ರಕರಣ..
ಸ್ಯಾಂಟ್ರೋ ರವಿಯ ಸಮಗ್ರ ಪ್ರಕರಣಗಳನ್ನು ಸಿಐಡಿಗೆ ರಾಜ್ಯ ಸರ್ಕಾರ ವಹಿಸಿದೆ. ಸದ್ಯ ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನ ಮುಂದುವರಿದಿದೆ. ಪ್ರಕರಣವನ್ನು ಒಮ್ಮೆ ಸಿಐಡಿಗೆ ವಹಿಸಿದ ಮೇಲೆ ಮೈಸೂರಿನ ವಿಜಯನಗರ ಠಾಣೆ ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಿಲ್ಲ.ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಿಐಡಿಗೆ ವಿಜಯನಗರ ಠಾಣೆ ಪೊಲೀಸರು ನೀಡಲಿದ್ದಾರೆ.ತನಿಖಾಧಿಕಾರಿ ಎಸಿಪಿ ಶಿವಶಂಕರ್ ಅವರಿಂದ ಸಿಐಡಿಗೆ ಇದುವರೆಗೂ ಆಗಿರುವ ತನಿಖೆಯ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.ಮುಂದಿನ ತನಿಖೆಗಾಗಿ ಸಿಐಡಿ ಅಧಿಕಾರಿಗಳು ಸ್ಯಾಂಟ್ರೋ ರವಿಯನ್ನು ವಶಕ್ಕೆ ಪಡೆಯಬೇಕು.
ಪೊಲೀಸರಿಗೆ ಕ್ಲಾಸ್..
ಜಡ್ಜ್ ಮುಂದೆ ಹಾಜರುಪಡಿಸಲು ಸ್ಯಾಂಟ್ರೋ ರವಿಯನ್ನ ಪೊಲೀಸರು ಕೋರ್ಟ್ ಗೆ ಕರೆ ತಂದಿದ್ದರು. ಈ ಸಮಯದಲ್ಲಿ ಸ್ಯಾಂಟ್ರೋ ರವಿ ಇದ್ದ ವಾಹನದ ಜೊತೆ ಪೊಲೀಸರ ವಾಹನ ಕೋರ್ಟ್ ಆವರಣದೊಳಗೆ ಪ್ರವೇಶಿಸಿತ್ತು. ಇದರಿಂದಾಗಿ ನ್ಯಾಯಾಧೀಶರ ವಾಹನಗಳು ಓಡಾಡಲು ತೊಂದರೆಯಾಗಿತ್ತು.ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪೊಲೀಸರನ್ನ ಕರೆದು , ಕೋರ್ಟ್ ಅವರಣದೊಳಗೆ ಬರಲು ನಿಮಗೆ ಹೇಳಿದ್ದು ಯಾರು ಎಂದು ತರಾಟೆ ತೆಗೆದುಕೊಂಡರು