ಬೆಂಗಳೂರು: ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನಿಸ್ವಾರ್ಥ ಸೇವೆ ಹಾಗೂ ಅಪಾರ ಜ್ಞಾನವು ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಕ್ಷಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಶ್ರೀಗಳ ಅಗಲಿಕೆಯ ಕುರಿತು ಮಾತನಾಡಿದ ಅವರು, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸಿದ್ದೇಶ್ವರ ಸ್ವಾಮೀಜಿಯವರು ಮನುಕುಲವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಜೀವನ ಪರ್ಯಂತ ಶ್ರಮಿಸಿದ್ದಾರೆ. ಅವರ ನಿಸ್ವಾರ್ಥ ಸೇವೆ ಹಾಗೂ ಜ್ಞಾನ ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ. ಅತ್ಯಂತ ಸರಳ ಜೀವನವನ್ನು ಅನುಸರಿಸಿದ ಅವರು ನಡೆ ಹಾಗೂ ನುಡಿಗೂ ಅಂತರವಿಲ್ಲದಂತೆ ಬದುಕಿದ್ದರು. ಆ ಮೂಲಕ ಸಮಾಜಕ್ಕೆ ಸ್ಫೂರ್ತಿಯಾಗುವಂತೆ ಜೀವನದ ಪ್ರತಿಕ್ಷಣವನ್ನೂ ಕಳೆದ ಸ್ವಾಮೀಜಿಯವರು ನಮ್ಮೊಂದಿಗೆ ಹಲವು ವರ್ಷಗಳು ಇರಬೇಕಿತ್ತು ಎಂದು ಹೇಳಿದರು.
ಕಠಿಣ ವಿಷಯಗಳನ್ನೂ ಸರಳವಾಗಿ ಜನರಿಗೆ ಅರ್ಥವಾಗುವಂತೆ ಹೇಳುವ ಕೌಶಲ್ಯತೆ ಸಿದ್ದೇಶ್ವರ ಸ್ವಾಮೀಜಿಯವರಿಗೆ ಇತ್ತು. ಅವರ ಮಧುರ ಮಾತು, ಪ್ರಖರ ವಿಷಯ ಹಾಗೂ ಪ್ರಬುದ್ಧ ಚಿಂತನೆ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಅಧ್ಯಾತ್ಮದ ಜೊತೆಗೆ ವಿಜ್ಞಾನ, ಕೃಷಿ, ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಲ್ಲೂ ಅವರು ಆಸಕ್ತಿ ಹೊಂದಿದ್ದರು. ಗಿಡಗಳಿಂದ ಹೆಚ್ಚು ಹೂವುಗಳನ್ನು ಕೀಳಬಾರದೆಂದು ಕೇವಲ ಒಂದೇ ಹೂವಿನಿಂದ ದೇವರನ್ನು ಪೂಜಿಸುತ್ತಿದ್ದ ಅವರದ್ದು ಹೂವಿನಷ್ಟೇ ಸೂಕ್ಷ್ಮವಾದ ಮನಸ್ಸಾಗಿತ್ತು ಎಂದರು.
ಅಲ್ಲದೇ ಸಿದ್ದೇಶ್ವರ ಸ್ವಾಮೀಜಿಯವರು ಜೀವನದುದ್ದಕ್ಕೂ ಅದ್ಭುತ ಸಾಧನೆ ಮಾಡಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಯಾವುದೇ ಐಷಾರಾಮಿ ಜೀವನ ನಡೆಸದ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುತ್ತಿದ್ದರು. ತಮಗೆ ಬರುತ್ತಿದ್ದ ಪ್ರಶಸ್ತಿಗಳನ್ನು ತಿರಸ್ಕರಿಸಿ ಬದುಕಿದ್ದ ಅವರು ನಿಜಕ್ಕೂ ನಡೆದಾಡುವ ದೇವರು. ಅವರ ಅಪಾರ ಸಂಖ್ಯೆಯ ಭಕ್ತರು, ಅಭಿಮಾನಿಗಳಿಗೆ ಅವರ ನಿಧನದ ದುಃಖವನ್ನು ನೀಗಿಸಿಕೊಳ್ಳುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.