ಮುಸ್ಲಿಂ ಸಮುದಾಯವನ್ನ ಗುರಿಯಾಗಿಸಿಕೊಂಡು ದ್ವೇಷಪೂರಿತ ಸಂಪಾದಕೀಯ ಪ್ರಕಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಪ್ರತಿಷ್ಠಿತ ಸ್ಟಾರ್ ಆಫ್ ಮೈಸೂರು ಇಂಗ್ಲೀಷ್ ದಿನ ಪ್ರತಿಕೆ ವಿರುದ್ದ ಪ್ರೆಸ್ ಕೌನ್ಸಿಲ್ ಅಫ್ ಇಂಡಿಯಾ ಕಿಡಿಕಾರಿದೆ ಮತ್ತು ಮೂರು ತಿಂಗಳ ಕಾಲ ಯಾವುದೇ ಜಾಹೀರಾತು ನೀಡದಂತೆ ಆದೇಶ ಹೊರಡಿಸಿದೆ.
ಎಪ್ರಿಲ್ 6 2020ರಂದು ಪ್ರಕಟಿಸಿದ ಸಂಪಾದಕೀಯದಲ್ಲಿ ದೇಶದಲ್ಲಿ ಒಂದು ಸಮುದಾಯದ ಜನರು ಕೊಳೆತ ಸೇಬಿನಂತೆ ಎಂದು ಬರೆದಿದ್ದಲ್ಲದೆ ಅವುಗಳನ್ನು ಸಿಂಗಾಪುರ್ ದೇಶದ ಹಿಂದಿನ ಮುಖಂಡ ಅಥವಾ ಇಸ್ರೇಲ್‌ನ ಪ್ರಸಕ್ತ ಸರ್ಕಾರಾದ ಮಾದರಿಯಲ್ಲಿ ಹೊರಗೆ ಎಸೆಯಬೇಕು ಎಂದು ಅಂದಿನ ಸಂಪಾದಕೀಯದಲ್ಲಿ ಪ್ರಕಟಿಸಲಾಗಿತ್ತು.
ಕೋವಿಡ್ ಕುರಿತು ಜಾಗೃತಿ ಮೂಡಿಸುವ ನೆಪದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಕೋಮುದ್ವೇಷ ಮೂಡಿಸುವ ಸಂಪಾದಕೀಯವೊಂದು ಈ ಪತ್ರಿಕೆಯಲ್ಲಿ ಪ್ರಕಟವಾಗಿ ಭಾರೀ ಟೀಕೆಗೆ ಒಳಗಾಗಿತ್ತು. ಸಂಪಾದಕೀಯದಲ್ಲಿ ಮುಸ್ಲಿಂ ಸಮುದಾಯದ ಹೆಸರನ್ನು ಎಲ್ಲಿಯೂ ನೇರವಾಗಿ ತೆಗೆದುಕೊಳ್ಳದಿದ್ದರೂ, ದೇಶದ 18% ಜನರನ್ನು ಎಂದು ಉಲ್ಲೇಖಿಸಿ ದೂಷಿಸಿದ್ದ ಸಂಪಾದಕೀಯದ ನಿಲುವು ಮುಸ್ಲಿಮರ ವಿರುದ್ಧವಾಗಿದೆ ಎಂದು ಸ್ಪಷ್ಟವಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸಿದ್ದವು.
ಆಗ ಸ್ಟಾರ್ ಆಫ್ ಮೈಸೂರು ಪತ್ರಿಕೆ ಕ್ಷಮಾಪಣೆಯನ್ನು ಪ್ರಕಟಿಸಿತ್ತು. ಕೋವಿಡ್-19 ಹೋರಾಟಕ್ಕೆ ಸಂಬಂಧಿಸಿದಂತೆ ಬರೆದ ಈ ಲೇಖನ ಯಾವುದಾದರೂ ಸಮುದಾಯಕ್ಕೆ ನೋವುಂಟು ಮಾಡಿದ್ದರೆ ಕ್ಷಮಿಸುವುಂತೆ ಕೇಳಿಕೊಂಡಿದ್ದು ಸಂಪಾದಕ ಮಂಡಳಿಯಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿತ್ತು. ಆದರೆ 400 ಪದದ ಸಂಪಾದಕೀಯ ಬರೆದು ಕೇವಲ 50 ಪದದ ಕ್ಷಮಾಪಣೆಯನ್ನು ಈ ಪತ್ರಿಕೆ ಪ್ರಕಟಿಸಿದೆ. ಇದರಿಂದ ಉಳಿದ ಮಾಧ್ಯಮಗಳು ಪಾಠ ಕಲಿಯುವಂತಾಗಲಿ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.






