ರಾಜ್ಯದಲ್ಲಿ ಲಿಂಗಾಯತ ಸಮುದಾಯವನ್ನು ಬತ್ತಳಿಕೆಯನ್ನಾಗಿ ಮಾಡಿಕೊಂಡು ಅಧಿಕಾರ ಅನುಭವಿಸಿದ ಪಕ್ಷ ಎಂದರೆ ಬಿಜೆಪಿ ಎಂದು ಧೈರ್ಯವಾಗಿ ಹೇಳಬಹುದು. ಆದರೆ ಅದೇ ಬಿಜೆಪಿಗೆ ಇದೀಗ ಲಿಂಗಾಯತರನ್ನು ಕಂಡರೆ ಅಷ್ಟಕ್ಕೆ ಅಷ್ಟೆ ಎನ್ನುವಂತಾಗಿದೆ. 75 ವರ್ಷ ದಾಟಿದ ಮೇಲೂ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದ ಬಿಜೆಪಿ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವಾಗ ತುಸು ಖಾರವಾಗಿಯೇ ನಡೆದುಕೊಂಡಿತ್ತು. ಬಹಿರಂಗವಾಗಿ ಏನನ್ನೂ ಹೇಳಿಕೊಳ್ಳಲಾಗದ ಯಡಿಯೂರಪ್ಪ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಣ್ಣೀರು ಸುರಿಸಿ ರಾಜೀನಾಮೆ ವಿಚಾರ ಘೋಷಣೆ ಮಾಡಿದ್ದರು. ಆ ಬಳಿಕ ಯಡಿಯೂರಪ್ಪ ಅವರನ್ನು ನೆಪಮಾತ್ರಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದ್ಯಾ ಅನ್ನೋ ಅನುಮಾನ ಲಿಂಗಾಯತ ಸಮುದಾಯದಲ್ಲೇ ಮೂಡುವಂತಾಗಿದೆ.
ಯಡಿಯೂರಪ್ಪ ಹಿಂದೆ ಗನ್ಮ್ಯಾನ್ ವೇಷದಲ್ಲಿ ಇರೋದ್ಯಾರು..?
ಯಡಿಯೂರಪ್ಪ ಯಾವುದನ್ನೂ ಬಹಿರಂಗವಾಗಿ ಹೇಳದೆ ಇರಲು ಕಾರಣವನ್ನು ಕಾಂಗ್ರೆಸ್ ನಾಯಕ ಲಕ್ಷ್ಮಣ್ ಬಿಚ್ಚಿಟ್ಟಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹಿಂದೆ ಗನ್ ಮ್ಯಾನ್ ವೇಷದಲ್ಲಿ ಒಬ್ಬರು ಇಡಿ ಅಧಿಕಾರಿ ಇರ್ತಾರೆ. ಯಡಿಯೂರಪ್ಪ ಅವರು ಎಲ್ಲೇ ಇರಲಿ ಅಲ್ಲಿ ಇಡಿ ಅಧಿಕಾರಿ ಹಾಜರಿ ಇರ್ತಾರೆ. ಗನ್ ಮ್ಯಾನ್ ಧಿರಿಸಿನಲ್ಲೇ ಅವರು ಇರ್ತಾರೆ, ಅವರೇ ಯಡಿಯೂರಪ್ಪ ಅವರ ಬಾಯಿಂದ ಹೇಳಿಕೆ ಕೊಡಿಸ್ತಾರೆ ಎಂದಿದ್ದಾರೆ. ಯಡಿಯೂರಪ್ಪ ಅವರ ಪ್ರತಿ ಭಾಷಣದ ವೇಳೆ ಅವರು ಇರ್ತಾರೆ. ಅವರು ಯಾರು ಅಂತ ನಾನು ತೋರಿಸ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅದೇ ಕಾರಣಕ್ಕೆ ಯಡಿಯೂರಪ್ಪ ಬಿಜೆಪಿ ಬೆಳವಣಿಗೆ ಬಗ್ಗೆ ಏನನ್ನೂ ಮಾತನಾಡಲ್ಲ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗಂಭೀರವಾದ ಆರೋಪ ಮಾಡಿದ್ದಾರೆ.
ಜೆಪಿ ನಡ್ಡಾ ಕಾರ್ಯಕ್ರಮಕ್ಕೆ BSYಗೆ ಆಹ್ವಾನವೇ ಇರಲಿಲ್ಲ..!
ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರ ಆರೋಪ ಸತ್ಯವೋ ಅಲ್ಲವೋ ಅನ್ನೋದನ್ನು ಸ್ವತಃ ಬಿ.ಎಸ್ವ ಯಡಿಯೂರಪ್ಪ ಬಹಿರಂಗ ಮಾಡಬೇಕಿದೆ. ಒಂದು ವೇಳೆ ಆ ರೀತಿ ಯಡಿಯೂರಪ್ಪ ಅವರನ್ನು ಬಿಜೆಪಿ ಕಟ್ಟಿಹಾಕಿದ್ರೆ ಇದು ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ. ಆದರೆ ಇವತ್ತು ಕೊಪ್ಪಳದಲ್ಲಿ ಬಿಜೆಪಿ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಿದ್ದು, ಮಾಜಿ ಸಿಎಂ ಯಡಿಯೂರಪ್ಪಗೆ ಆಹ್ವಾನವೇ ಇರಲಿಲ್ಲ. ಕೊನೇ ಕ್ಷಣದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಕಾವೇರಿ ನಿವಾಸಕ್ಕೆ ತೆರಳಿ ಆಹ್ವಾನ ನೀಡಿದ್ದಾರೆ. ಜೆಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಮಾತ್ರವೇ ಆಹ್ವಾನ ನೀಡಲಾಗಿತ್ತು. ಲಿಂಗಾಯತ ಮತಗಳು ಕೈತಪ್ಪುವ ಆತಂಕದಲ್ಲಿ ಕೊನೆ ಕ್ಷಣದಲ್ಲಿ ಕರೆಸಿಕೊಳ್ಳಲಾಗ್ತಿದೆ ಎನ್ನಲಾಗಿದೆ.

ಮತಕ್ಕಾಗಿ ಮಾತ್ರವೇ ಯಡಿಯೂರಪ್ಪ ಅವರನ್ನು ಬಳಸ್ತಿದೆಯಾ ಬಿಜೆಪಿ..?
ಯಡಿಯೂರಪ್ಪ ಬಗ್ಗೆ ಬಿಜೆಪಿಯಲ್ಲಿ ಕಿಂಚಿತ್ತು ಗೌರವವಿಲ್ಲ, ಆದರೆ ಯಡಿಯೂರಪ್ಪ ಬಿಜೆಪಿ ಬಿಟ್ಟು ಬೇರೆ ಪಕ್ಷ ಕಟ್ಟುವಂತಿಲ್ಲ ಜೊತೆಗೆ ಬೇರೆ ಪಕ್ಷ ಸೇರಲೂ ಬಾರದು ಅನ್ನೋದು ಬಿಜೆಪಿ ರಾಷ್ಟ್ರೀಯ ನಾಯಕರ ಲೆಕ್ಕಾಚಾರ. ಇದೇ ಕಾರಣದಿಂದ ಹಾವು ಸಾಯಬಾರದು ಕೋಲು ಮುರಿಯಬಾರದು ಅನ್ನೋ ಸೂತ್ರ ಅಳವಡಿಸಿಕೊಂಡಿರುವ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡುವಂತೆ ಮಾಡಿದ್ದಾರೆ. ಆದರೆ ಎಲ್ಲಿಯೂ ಯಡಿಯೂರಪ್ಪ ಅವರ ಮಾತು ನಡೆಯುವುದಿಲ್ಲ, ಇದೊಂದು ಚುನಾವಣೆಯನ್ನು ಯಡಿಯೂರಪ್ಪ ಮುಖ ತೋರಿಸಿಕೊಂಡು ಲಿಂಗಾಯತರ ಮತಗಳನ್ನು ಪಡೆಯುವುದು ಬಿಜೆಪಿ ಅಷ್ಟೆ ಎನ್ನಲಾಗ್ತಿದೆ. ಇದೊಂದು ಚುನಾವಣೆ ಕಳೆದರೆ ಯಡಿಯೂರಪ್ಪ ದಾರಿ ಬೇರೆ, ಬಿಜೆಪಿ ದಾರಿಯೂ ಬೇರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ವಿಜಯೇಂದ್ರ ಸ್ಪರ್ಧೆ ಬಗ್ಗೆಯೂ ನೋ ಕಮೆಂಟ್ಸ್..!
ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿದಿದ್ದ ಯಡಿಯೂರಪ್ಪ ಶಿಕಾರಿಪುರದಲ್ಲಿ ಕೆರೆಯೊಂದಕ್ಕೆ ಬಾಗಿನ ಅರ್ಪಿಸಲು ತೆರಳಿದ್ದರು. ಈ ವೇಳೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಹೀಗಾಗಿ ನನ್ನ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದಿದ್ದರು. ಇದೊಂದು ಸಹಜವಾದ ಪುತ್ರ ಪ್ರೇಮ ಎನ್ನಬಹುದು. ಆದರೆ ಅದನ್ನೂ ಸಹಿಸದ ಬಿಜೆಪಿ ಹೈಕಮಾಂಡ್, ಒಂದೇ ದಿನದಲ್ಲಿ ಹೇಳಿಕೆ ಹಿಂಪಡೆಯುವಂತೆ ಮಾಡಿತ್ತು. ಹೇಳಿಕೆ ಕೊಟ್ಟ ಮಾರನೆ ದಿನವೇ ಮರು ಹೇಳಿಕೆ ನೀಡಿದ್ದ ಯಡಿಯೂರಪ್ಪ, ನನ್ನ ಆಸೆಯನ್ನು ನಾನು ಹೇಳಿದ್ದೆ, ಆದರೆ ಬಿಜೆಪಿ ಹೈಕಮಾಂಡ್ ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನುತ್ತದೆಯೋ ಅಲ್ಲಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದಿದ್ದರು. ಇದೊಂದು ಹೇಳಿಕೆ, ಯಡಿಯೂರಪ್ಪ ಬಿಜೆಪಿಯಲ್ಲಿ ಎಷ್ಟು ಸ್ವತಂತ್ರರಾಗಿದ್ದಾರೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ ಅಲ್ಲವೇ..?
ಕೃಷ್ಣಮಣಿ






