ಎನ್ಡಿಟಿವಿ ಮಾಲಕತ್ವ ಅದಾನಿ ಸಮೂಹದ ತೆಕ್ಕೆಗೆ ಬಿದ್ದ ಬೆನ್ನಲ್ಲೇ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಎನ್ಡಿಟಿವಿಗೆ ರಾಜಿನಾಮೆ ನೀಡಿದ್ದಾರೆ. ಆ ಮೂಲಕ ಅದಾನಿ ಎನ್ಡಿಟಿವಿಯನ್ನು ಖರೀದಿಸಿದರೆ ಏನಾಗಬಹುದು ಎಂದು ಅಂದಾಜಿಸಲಾಗಿತ್ತೋ ಅದು ನಡೆದಿದೆ.
ಎನ್ಡಿಟಿವಿಯ ಪ್ರಮೋಟರ್ ಕಂಪನಿಯನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.
ಎನ್ಡಿಟಿವಿ ಗ್ರೂಪ್ ಅಧ್ಯಕ್ಷೆ ಸುಪರ್ಣಾ ಸಿಂಗ್ ಅವರು ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಿರುವ ಮೇಲ್ನಲ್ಲಿ, ರವೀಶ್ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.
“ರವೀಶ್ ಅವರಂತಹ ಕೆಲವೇ ಪತ್ರಕರ್ತರು ಮಾತ್ರ ಜನರ ಮೇಲೆ ಪ್ರಭಾವ ಬೀರಲು ಸಮರ್ಥರಾಗಿದ್ದಾರೆ. ರವೀಶ್ ದಶಕಗಳಿಂದ NDTV ಯ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಕೊಡುಗೆ ಅಪಾರವಾಗಿದೆ ಮತ್ತು ಅವರ ಹೊಸ ಪ್ರಾರಂಭದಲ್ಲಿ ಅವರು ಅತ್ಯಂತ ಯಶಸ್ವಿಯಾಗುತ್ತಾರೆ ಎಂದು ನಮಗೆ ತಿಳಿದಿದೆ.” ಎಂದು ಸುಪರ್ಣಾ ಸಿಂಗ್ ಮೇಲ್ನಲ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಎನ್ಡಿಟಿವಿಯ ಪ್ರವರ್ತಕ ಕಂಪನಿಯಾದ ಆರ್ಆರ್ಪಿಆರ್ನ ನಿರ್ದೇಶಕರ ಹುದ್ದೆಗೆ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ನೀಡಿದ್ದರು.
ರವೀಶ್ ಕುಮಾರ್ ರಾಜಿನಾಮೆಯೊಂದಿಗೆ ಎನ್ಡಿಟಿವಿಯ ಬಹುಮುಖ್ಯ ಭಾಗವೇ ಕಳಚಿಕೊಂಡಂತಾಗಿದೆ. ಎನ್ಡಿಟಿವಿ ಎಂದರೆ ರವೀಶ್, ರವೀಶ್ ಎಂದರೆ ಎನ್ಡಿಟಿವಿ ಅನ್ನುವಂತಹ ವಾತಾವರಣದಿಂದ ರವೀಶ್ ಈಗ ಹೊರ ಹೋಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರವೀಶ್ ಅವರ ಮುಂದಿನ ನಡೆಯೇನು ಎನ್ನುವುದರ ಬಗ್ಗೆ ಅವರ ಅಭಿಮಾನಿಗಳು ಈಗಾಗಲೇ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ರಾಮನ್ ಮ್ಯಾಗಸೆಸೆ ಪ್ರಶಸ್ತಿ ವಿಜೇತ ಸುದ್ದಿ ನಿರೂಪಕ ಹಮ್ ಲೋಗ್, ರವೀಶ್ ಕಿ ವರದಿ, ದೇಶ್ ಕಿ ಬಾತ್ ಮತ್ತು ಪ್ರೈಮ್ ಟೈಮ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
ಸರ್ಕಾರವನ್ನು ಟೀಕಿಸಲು, ಪ್ರಶ್ನಿಸಲು ಎಂದೂ ಹಿಂಜರಿಯದಿದ್ದ ರವೀಶ್ ಕುಮಾರ್ ಅವರ ಜರ್ನಲಿಸಂ ಶೈಲಿಗಾಗಿಯೇ ಅವರಿಗೆ ಅಪಾರ ಅಭಿಮಾನಿ ವರ್ಗಗಳಿವೆ. ಕಾಸು ಕೊಟ್ಟು ಎನ್ಡಿಟಿವಿಯನ್ನಷ್ಟೇ ಖರೀದಿಸಬಹುದು , ರವೀಶ್ ಕುಮಾರ್ ರನ್ನಲ್ಲ ಎಂದು ಅವರ ಅಭಿಮಾನಿಗಳು ರವೀಶ್ ಕುಮಾರ್ ಅವರ ರಾಜಿನಾಮೆಯನ್ನು ಸಂಭ್ರಮಿಸುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಎನ್ಡಿಟಿವಿಯನ್ನು ಹೇಗಾದರೂ ಖರೀದಿಸಬೇಕೆಂದು ಹರಸಾಹಸ ಪಟ್ಟಿದ್ದ ಅದಾನಿ ಸಮೂಹವು ಕೊನೆಗೂ ತನ್ನ ಪ್ರಯತ್ನದಲ್ಲಿ ಗೆಲುವು ಸಾಧಿಸಿಕೊಂಡಿದೆ. RRPR ಶೇ.99.9 ರಷ್ಟು ಷೇರುಗಳನ್ನು ಅದಾನಿ ಗ್ರೂಪ್ನ ವಿಶ್ವಪ್ರಧನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ಗೆ (VCPL) ವರ್ಗಾಯಿಸಿದ ಬೆನ್ನಲ್ಲೇ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜಿನಾಮೆ ವರದಿಯಾಗಿತ್ತು. ಅದರ ನಂತರ ಅದಾನಿ ಗ್ರೂಪ್ ಎನ್ಡಿಟಿವಿಯಲ್ಲಿ 29.18 ಶೇಕಡಾ ಪಾಲನ್ನು ಪಡೆದುಕೊಂಡಿತು.
ಇದರ ಹೊರತಾಗಿ, ಅದಾನಿ ಗ್ರೂಪ್ 26 ರಷ್ಟು ಷೇರುಗಳಿಗೆ ಮುಕ್ತ ಕೊಡುಗೆಯೊಂದಿಗೆ ಬಂದಿದ್ದು, ಅದರ ಅಡಿಯಲ್ಲಿ ಕಂಪನಿಯು ಎನ್ಡಿಟಿವಿಯ ಒಂದು ಕೋಟಿ 67 ಲಕ್ಷ ಷೇರುಗಳನ್ನು ಖರೀದಿಸಲು ಉಪಕ್ರಮವನ್ನು ತೆಗೆದುಕೊಂಡಿದೆ. ಓಪನ್ ಆಫರ್ಗೆ ಕೊನೆಯ ದಿನಾಂಕ ಡಿಸೆಂಬರ್ 5 ಆಗಿದೆ. ಈ ಮುಕ್ತ ಕೊಡುಗೆಗಾಗಿ ಅದಾನಿ ಗ್ರೂಪ್ ಪ್ರತಿ ಷೇರಿಗೆ 294 ರೂ. ನಿಗದಿ ಪಡಿಸಿದ್ದಾರೆ.
ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಕಳೆದ ಆಗಸ್ಟ್ನಲ್ಲಿ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು. ಮಹೇಂದ್ರ ನಹತಾ ಎಂಬುವವರಿಗೆ ಸೇರಿದ ವಿಸಿಪಿಎಲ್ ಸಂಸ್ಥೆ 2009-10ರಲ್ಲಿ ಆರ್ಆರ್ಪಿಆರ್ಗೆ 404 ಕೋಟಿ ರೂ ಸಾಲ ನೀಡಿತ್ತು. ತನ್ನ ಗಮನಕ್ಕೆ ಬಾರದೆಯೇ ವಿಸಿಪಿಎಲ್ ಸಂಸ್ಥೆಯನ್ನು ಅದಾನಿ ಗ್ರೂಪ್ಗೆ ಮಾರಾಟ ಮಾಡಲಾಗಿದೆ ಎಂಬುದು ಎನ್ಡಿಟಿವಿ ಸಂಸ್ಥಾಪಕರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದರು.