ಮತದಾರರ ಮಾಹಿತಿ ಕಳವು ಹಗರಣ ಈಗ ಜನರ ಮುಂದಿದೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಈ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತ್ರವಲ್ಲ ಕೇಂದ್ರದ ನರೇಂದ್ರ ಮೋದಿ ಸರ್ಕಾರವೂ ಭಾಗಿಯಾಗಿದೆ. ಕೇವಲ ಮತದಾರರ ಮಾಹಿತಿ ಕಳವು ಮಾತ್ರವಲ್ಲ ದೇಶ ಹಾಗೂ ರಾಜ್ಯದ ಹಣ ಲೂಟಿ ಮಾಡುತ್ತಿವೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರನದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಸಿಟಿಜನ್ ಸರ್ವೀಸಸ್ ಸೆಂಟರ್ ನಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರಿಗೂ ಪಾವತಿಯಾಗಿದೆ. ಇದರಿಂದ ಈ ಹಗರಣದ ಸ್ವರೂಪ ಬೃಹದಾಕಾರವಾಗಿರುವುದು ಸ್ಪಷ್ಟವಾಗಿದೆ. ಜನರ ಹಣ ಲೂಟಿ ಮಾಡಿ, ಅವ್ಯವಹಾರ ನಡೆಸಲಾಗಿದೆ. ಬೊಮ್ಮಾಯಿ ಅವರ ಜತೆಗೆ ರವಿಕುಮಾರ್ ಅವರು ಹಾಗೂ ಅವರ ಆಪ್ತರ ಖಾತೆಗಳಿಗೆ ಕೇಂದ್ರ ಸರ್ಕಾರದ ಸಂಸ್ಥೆಯಿಂದ ಎಷ್ಟು ಕೋಟಿ ಹಣ ವರ್ಗಾವಣೆ ಮಾಡಲಾಗಿದೆ? ಈ ಹಣ ಪಡೆದವರು ಯಾರು ಎಂಬುದು ತನಿಖೆ ಮೂಲಕ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.
ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೊಮ್ಮಾಯಿ ಅವರು ಪ್ರಮುಖ ಕಿಂಗ್ ಪಿನ್ ಆಗಿದ್ದು, ಈ ವಿಚಾರವಾಗಿ ಜನರು ಹಾಗೂ ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಸಂಸ್ಥೆಯಿಂದ ಆರೋಪಿ ಹಾಗೂ ಆತನ ಆಪ್ತರ ಖಾತೆಗಳಿಗೆ ಹಣ ವರ್ಗಾವಣೆ ಹೇಗಾಯಿತು? ಇದೆಲ್ಲದರ ಸತ್ಯಾಂಶ ಹೊರಬರಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು. ನಾವು ಈ ವಿಚಾರವನ್ನು ಪ್ರತಿ ಕ್ಷೇತ್ರ ಹಾಗೂ ಬೂತ್ ಗಳಿಗೆ ಈ ವಿಚಾರವನ್ನು ಕೊಂಡೊಯ್ಯುತ್ತೇವೆ ಎಂದು ಹೇಳಿದ್ದಾರೆ.
