ಎಂಟು ವರ್ಷದ ಬಾಲಕಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ 34 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮದರಸಾದ ಹೊರಗೆ ನಿಂತಿದ್ದ ಎಂಟು ವರ್ಷದ ಬಾಲಕಿಯ ಕಡೆಗೆ ಆರೋಪಿ ಹೋದಾಗ, ಬಾಲಕಿ ಅವನಿಂದ ಒಂದು ಹೆಜ್ಜೆ ದೂರ ಸರಿಯುತ್ತಾಳೆ. ಆತ ಆಕೆಯನ್ನು ಎತ್ತಿ, ನೆಲಕ್ಕೆ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನವೆಂಬರ್ 17 ರಂದು ಕಾಸರಗೋಡಿನ ಮಂಜೇಶ್ವರದಲ್ಲಿರುವ ಇಶಾ-ಅತುಲ್ ಉಲೂಮ್ ಮದರಸಾದ ಹೊರಗೆ ಈ ಘಟನೆ ನಡೆದಿದೆ. ಈ ವ್ಯಕ್ತಿಯನ್ನು ಆಕೆಯ ನೆರೆಹೊರೆಯವನಾದ ಅಬೂಬಕರ್ ಸಿದ್ದೀಕ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡಿರುವ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ವ್ಯಕ್ತಿಯ ಅಮಾನುಷ ಕೃತ್ಯದ ಹಿಂದಿನ ಕಾರಣವನ್ನು ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ. ವರದಿಗಳ ಪ್ರಕಾರ, ಹುಡುಗಿಯ ತಂದೆ ಕತಾರ್‌ನಲ್ಲಿದ್ದಾರೆ. ಘಟನೆಯ ವೇಳೆ ಆಕೆಯ ತಾಯಿ ಅವರ ಮನೆಯಲ್ಲಿದ್ದರು. ಸಾಮಾನ್ಯವಾಗಿ ಚಿಕ್ಕಪ್ಪನ ಜೊತೆಗೆ ಬರುವ ಬಾಲಕಿ ಗುರುವಾರ ಬೆಳಗ್ಗೆ ಪರೀಕ್ಷೆ ಬರೆದು ಮದರಸಾದ ಹೊರಗೆ ಒಬ್ಬಳೇ ನಿಂತಿದ್ದಳು. ಘಟನೆಯ ನಂತರ ಬಾಲಕಿ ಅಳುತ್ತಾ ಮನೆಗೆ ಹಿಂದಿರುಗಿ ಮದರಸಾ ಎದುರು ವ್ಯಕ್ತಿಯೊಬ್ಬ ಹೊಡೆದಿದ್ದಾನೆ ಎಂದು ಹೇಳಿದ್ದಾಳೆ.
ಆಕೆಯ ಚಿಕ್ಕಪ್ಪ ಮದರಸಾಕ್ಕೆ ಹಿಂತಿರುಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಏನಾಯಿತು ಎಂದು ನೋಡಿ ಆಘಾತಕ್ಕೊಳಗಾದರು. ತಕ್ಷಣ ಆ ವ್ಯಕ್ತಿಯನ್ನು ಅಬೂಬಕರ್ ಸಿದ್ದೀಕ್ ಎಂದು ಗುರುತಿಸಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಯ ಹೇಳಿಕೆಯನ್ನು ಆಧರಿಸಿ, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323, 354 ಮತ್ತು 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೋಕ್ಸೋ ಕಾಯಿದೆಯಡಿಯಲ್ಲಿಯೂ ಆತನ ವಿರುದ್ಧ ಪ್ರಕರಣ ದಾಖಲಾಗಿ.
“ಆತ ಹುಡುಗಿಯ ಮೇಲೆ ಏಕೆ ದಾಳಿ ಮಾಡಿದನೆಂದು ನಮಗೆ ಇನ್ನೂ ತಿಳಿದಿಲ್ಲ. ಆತನನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.






