ಆಸ್ಟ್ರೇಲಿಯಾದಲ್ಲಿ ಹಾಲಿ ನಡೆಯುತ್ತಿರುವ T-20 ವಿಶ್ವಕಪ್ ಪಂದ್ಯಾವಳಿಯೂ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿಯೇ ನಡೆದಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಟ್ಟಿಂಗ್ ಭರಟೆ ಜೋರಾಗಿ ನಡೆಯುತ್ತಿದ್ದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ವಾರ ಭಾರತ ಹಾಗೂ ಪಾಕಿಸ್ತಾನದ ವಿರುದ್ದ ನಡೆದ ಪಂದ್ಯ ಹಾಗೂ ಪಾಕಿಸ್ತಾನ-ಜಿಂಬಾಬ್ವೆ ನಡುವಿನ ಪಂದ್ಯಗಳ ವೇಳೆ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಈಗಾಗಲೇ ಪಶ್ಚಿಮ ವಿಭಾಗದಲ್ಲಿ ಪೊಲೀಸರು ಬೆಟ್ಟಿಂಗ್ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದು ಇಲ್ಲಿಯವರೆಗೆ 18 ಬುಕ್ಕಿಗಳನ್ನು ಬಂಧಿಸಿದ್ದಾರೆ ಮತ್ತು 4.68ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ನಗರದ ವಿಜಯನಗರ, ಚಂದ್ರಾ ಲೇಔಟ್, ಬ್ಯಾಟರಾಯನಪುರ, ಬಸವೇಶ್ವರನಗರ, ಕೆ.ಆರ್.ಮಾರ್ಕೆಟ್, ಕಾಮಾಕ್ಷಿ ಪಾಳ್ಯ, ಗೋವಿಂದರಾಜನಗರ, ರಾಜರಾಜೇಶ್ವರಿ ನಗರ ಹಾಗೂ ಉಪ್ಪಾರಪೇಟೆಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬೆಟ್ಟಿಂಗ್ ದಂಧೆ ನಡೆಸುವ ವೇಳೆ ಬುಕ್ಕಿಗಳು ಲಾಡ್ಜ್‌ಗಳಲ್ಲಿ ಉಳಿದುಕೊಂಡು ತಮ್ಮ ಕೆಲಸವನ್ನ ನಡೆಸುತ್ತಾರೆ. ಇಂತಹ ವಸತಿ ಗೃಹಗಳ ಮೇಲೆ ಮುಖ್ಯವಾಗಿ ಗಾಂಧಿನಗರ, ಶಿವಾಜಿನಗರ, ಉಪ್ಪಾರಪೇಟೆ ಹಾಗೂ ಚಿಕ್ಕಪೇಟೆಯಲ್ಲಿರುವ ಲಾಡ್ಜ್‌ಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬೆಟ್ಟಿಂಗ್ ಕಟ್ಟುವ ಕ್ರಿಕೆಟ್ ಪ್ರೇಮಿಗಳು ಮನೆಯಲ್ಲಿರುವ ಚಿನ್ನವನ್ನ ಅಡ್ಡವಿಟ್ಟು, ಸಾಲ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಪಂದ್ಯದ ಮೇಲಲ್ಲದೆ ಪ್ರತಿ ಬಾಲಿನ ಮೇಲೆ ಬೆಟ್ಟಿಂಗ್ ಕಟ್ಟಲಾಗುತ್ತದೆ ಎಂದು ಹೇಳಿದ್ದಾರೆ.






