ಶಿವಮೊಗ್ಗ ನಗರ ಅಪರಾಧ ಪ್ರಕರಣಗಳಿಗೆ ಪದೇ ಪದೇ ನಲುಗುತ್ತಿದೆ. ಪ್ರತಿದಿನ ಕೊಲೆ, ಸುಲಿಗೆ, ದರೋಢೆ ಪ್ರಕರಣಗಳು ಪೊಲೀಸ್ ಇಲಾಖೆಯನ್ನ ನಿದ್ದೆಗೆಡಿಸಿದೆ. ಕಳೆದೊಂದು ವರ್ಷದಲ್ಲಿ ಶಿವಮೊಗ್ಗದಲ್ಲಿ ನಡೆದ ಅಹಿತ ಘಟನೆಗಳು ದೇಶವ್ಯಾಪಿ ಸದ್ದು ಮಾಡಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಾಕ್ರೋಶವನ್ನೂ ಸಹಿಸಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಶಿವಮೊಗ್ಗ ಪೊಲೀಸ್ ಸಿಬ್ಬಂದಿ ಗೋಳು ಹೇಳ ತೀರದು. ಓರ್ವ ಕಿಡಿಗೇಡಿ ಕೆಲಸಕ್ಕೆ ಇಡೀ ಶಿವಮೊಗ್ಗ ನೆಮ್ಮದಿ ಕಳೆದುಕೊಳ್ಳುತ್ತೆ. ಪೊಲೀಸರು ಬೀದಿಯಲ್ಲೇ ಕಾಲಕಳೆಯಬೇಕಾಗುತ್ತೆ. ಶಿವಮೊಗ್ಗ ಪೊಲೀಸ್ ಸಿಬ್ಬಂದಿ ದೀಪಾವಳಿಯನ್ನ ರಸ್ತೆಯ ಮೇಲೆ ಆಚರಿಸಿ ಖುಷಿ ಪಟ್ಟಿದ್ದಾರೆ. ಇವರೊಂದಿಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಕೂಡ ಭಾಗಿಯಾಗಿದ್ದರು.
ಗಣೇಶ ಚತುರ್ಥಿ, ದಸರಾ ಹಬ್ಬಗಳಿಗೂ ಮನೆ ಸೇರದ ಶಿವಮೊಗ್ಗ ಪೊಲೀಸ್ ಸಿಬ್ಬಂದಿ ದೀಪಾವಳಿಯಲ್ಲಾದರೂ ಕುಟುಂಬದ ಜೊತೆ ಕಾಲ ಕಳೆಯೋಣ ಎಂದುಕೊಂಡರು ಅಷ್ಟರಲ್ಲೇ ಕಳೆದ ಶನಿವಾರ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಬೈಕ್ ರ್ಯಾಲಿಯಲ್ಲೇ ಸಣ್ಣದೊಂದು ಕಿಡಿ ಹೊತ್ತಿಕೊಂಡಿತ್ತು. ಒಂದೇ ದಿನಕ್ಕೆ ಯುವಕನ ಮೇಲೆ ಕಲ್ಲುಗಳಿಂದ ದಾಳಿ ನಡೆದು ಅಶಾಂತಿ ತಲೆದೋರಿತು. ಮರು ದಿನ ಬೆಳಗ್ಗೆ ಪ್ರತ್ಯೇಕ ಪ್ರಕರಣದಲ್ಲಿ ಜನನಿಬಿಡ ಪ್ರದೇಶದಲ್ಲಿ ದರೋಢೆಗಾಗಿ ಕೊಲೆ ಮಾಡಲಾಯ್ತು. ಇವೆಲ್ಲಾ ಬೆಳವಣಿಗೆಯಿಂದ ದೀಪಾವಳಿ ಹಬ್ಬಕ್ಕೆ ನಿರೀಕ್ಷೆ ಇಟ್ಟಿದ್ದ ಪೊಲೀಸರು ಬೀದಿಯಲ್ಲೇ ಕಾಲಕಳೆಯುವಂತಾಯ್ತು.
ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಜಿಕೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನ ಕೋರಿದರು.ನಿಮಗೆಲ್ಲಾ ಗೊತ್ತಿರುವ ಹಾಗೆ ಪೊಲೀಸ್ ಇಲಾಖೆಯಲ್ಲಿ 24 hours ಡ್ಯೂಟಿ ಇರುತ್ತೆ. ನಮ್ಮ ಸಿಬ್ಬಂದಿ ಯಾರಿಗೂ ಮನೆಗೆ ಹೋಗಲು ಸಾಧ್ಯವಾಗಿಲ್ಲ. ನಮಗೂ ಕೂಡ ದೀಪಾವಳಿ ಹಬ್ಬ ಖುಷಿ ಇದೆ ಆದರೆ ಎಲ್ಲರೂ ರಸ್ತೆ ಮೇಲೆ ಹಬ್ಬ ಆಚರಿಸಿದ್ದಾರೆ. ಈ ತರಹನೂ ಹಬ್ಬದ ಆಚರಣೆ ಮಾಡಬೇಕಾಗುತ್ತೆ. ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಸಂತೋಷ್, ಡಿವೈಎಸ್ ಪಿ ಬಾಲ್ ರಾಜ್ ಸೇರಿ ಶಿವಮೊಗ್ಗದ ಶಿವಪ್ಪ ನಾಯಕ ಸರ್ಕಲ್ ಲ್ಲೇ ಸಣ್ಣದಾಗಿ ದೀಪಾವಳಿ ಹಬ್ಬವನ್ನ ಅಚ್ಚುಕಟ್ಟಾಗಿ ಅಣಿಮಾಡಿದ್ದಾರೆ. ದೀಪಗಳನ್ನಿಟ್ಟು, ಹೂವುಗಳಿಂದ ಶಿವಪ್ಪ ನಾಯಕ ಸರ್ಕಲ್ ಸಿಂಗರಿಸಿ, ಸಿಹಿ ಹಂಚಿ ಹಬ್ಬವನ್ನ ಸಂಭ್ರಮಿಸಿದ್ದು ಖುಷಿ ತಂದಿದೆ ಎಂದು ಎಸ್ ಪಿ ಹೇಳಿದರು.







