ದಿಪಾವಳಿ ಪರ್ವ ಕಾಲದಲ್ಲೇ ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಿತು. ಗ್ರಹಣ ಹಿನ್ನಲೆ ದೇವಾಲಯಗಳ ನಿತ್ಯ ಪೂಜಾಕೈಂಕರ್ಯದಲ್ಲಿ ಹಲವು ಬದಲಾವಣೆ ಮಾಡಲಾಗಿತ್ತು. ಸಂಜೆ ಬಳಿಕ ದೇವಾಲಯ ಶುದ್ಧ ಮಾಡಿ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯ್ತು.
ದೀಪಾವಳಿ ಹಬ್ಬದ ನಡುವೆಯೇ ಇಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಸಂಭವಿಸಿದ ಕೇತು ಖಗ್ರಾಸ ಸೂರ್ಯಗ್ರಹಣ ಇದಾಗಿದೆ. ಈ ಗ್ರಹಣ ಭಾರತದ ಹಲವು ಭಾಗಗಳಲ್ಲಿ ಗೋಚರಿಸಿದೆ. ಉತ್ತರದಲ್ಲಿ ಹೆಚ್ಚು ಗ್ರಹಣ ಗೋಚರವಾದ್ರೆ ದಕ್ಷಿಣದಲ್ಲಿ ಕಡಿಮೆ ಪ್ರಮಾಣದಲ್ಲಿ ಗ್ರಹಣ ಗೋಚರಿಸಿತು. ಸೂರ್ಯಾಸ್ತದ ಸಂದರ್ಭದಲ್ಲಿ ಗ್ರಹಣ ಸಂಭವಿಸಿದ್ರಿಂದ ಬೆಂಗಳೂರಿನಲ್ಲಿ ಗ್ರಹಣ ಅಷ್ಟಾಗಿ ಗೋಚರಿಸಲಿಲ್ಲ.

ಈ ಹಿನ್ನೆಲೆ ನಗರದ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಬೆಳಗ್ಗೆ 6ರಿಂದ 8 ರವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಈ ವೇಳೆಯೇ ಶಿವನಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ನಡೆಸಲಾಯ್ತು. ಅಭಿಷೇಕ ಪೂಜೆ ಬಳಿಕ ಗ್ರಹಣ ಹಿನ್ನಲೆ ಬೆಳಿಗ್ಗೆ 9 ಗಂಟೆಗೆ ಶಿವನನ್ನು ದರ್ಭಾ ಬಂಧನದಲ್ಲಿಟ್ಟು, ದೇವಾಲಯದ ಬಾಗಿಲನ್ನು ಹಾಕಲಾಯಿತು. ಬಳಿಕ ಸಂಜೆ 6.30 ಕ್ಕೆ ದೇವಾಲಯ ಬಾಗಿಲು ತೆರೆದಿದ್ದು ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಂಜೆ 6.30 ರಿಂದ ರಾತ್ರಿ 9 ಗಂಟೆವರೆಗೂ ದೇವಸ್ಥಾನದಲ್ಲಿ ಪೂಜೆ ನಡೆದಿದ್ದು, ನಿತ್ಯದಂತೆ ಶಿವನಿಗೆ ನೈವೇದ್ಯ ಅಭಿಷೇಕ ಮಾಡಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದರು. ಈ ಮಧ್ಯೆ ಸೂರ್ಯಗ್ರಹಣಕ್ಕೂ ಮುನ್ನ ಶಾಂತಿ ನೆಮ್ಮದಿಗಾಗಿ ಶಾಂತಿ ಹೋಮವನ್ನು ಸಹ ಗವಿಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಮಾಡಲಾಯ್ತು.
ನವೆಂಬರ್ 8ಕ್ಕೆ ಪಾರ್ಶ್ವ ಚಂದ್ರ ಗ್ರಹಣ ಗೋಚರಿಸೋದು ಅನುಮಾನ
ಇನ್ನು ನವೆಂಬರ್ 8 ರಂದು ಚಂದ್ರ ಗ್ರಹಣ ಸಂಭವಿಸಲಿದೆ. ಅಂದು ಮಧ್ಯಾಹ್ನ 2.39ಕ್ಕೆ ಪಾರ್ಶ್ವ ಗ್ರಹಣ ಪ್ರಾರಂಭವಾಗಿ 3.46ಕ್ಕೆ ಖಗ್ರಾಸ ರೂಪ ತಳೆದು, ಸಂಜೆ 6.19ಕ್ಕೆ ಅಂತ್ಯವಾಗಲಿದೆ. ಚಂದ್ರೋದಯವಾದ 19 ನಿಮಿಷ ಮಾತ್ರ ಗ್ರಹಣ ಇರೋದ್ರಿಂದ ಈ ಗ್ರಹಣವನ್ನ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ತಜ್ಞರು. ಒಟ್ಟಾರೆ ಇಂದು ದೀಪಾವಳಿ ಹಬ್ಬದ ನಡುವೆ ಸೂರ್ಯಗ್ರಹಣ ಸಂಭವಿಸಿದ್ದು ಬಹಳ ವಿಶೇಷವೆನಿಸಿತ್ತು. ಕೆಲವರು ಇದನ್ನ ಆಧ್ಯಾತ್ಮಿಕ ಹಿನ್ನಲೆಯಲ್ಲಿ ನೋಡಿ, ಭಕ್ತಿ ಭಾವದಿಂದ ಆಚರಣೆ ಮಾಡಿದ್ರೆ, ಮತ್ತೆ ಕೆಲವ್ರು ವೈಜ್ಞಾನಿಕ ಹಿನ್ನಲೆಯಲ್ಲಿ ಗ್ರಹಣ ವೀಕ್ಷಿಸಿದ್ರು. ಖಗೋಳದಲ್ಲಿ ನಡೆಯುವ ಈ ಕೌತುಕವನ್ನ ಕಣ್ತುಂಬಿಕೊಂಡರು.











