ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾದ ಆರೋಪಿಯನ್ನು ಪೊಲೀಸರು ಬಂಧಿಸಿ ಸ್ಕಾರ್ಪಿಯೊ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಹರೀಶ್ ಪೂಂಚಾ ಸಂಬಂಧಿಕರ ಕಾರಿನಲ್ಲಿ ತೆರಳುತ್ತಿದ್ದ ಅಡ್ಡಗಟ್ಟಿದ ವ್ಯಕ್ತಿ ತಲವಾರು ಝಳಪಿಸಿ ಬೆದರಿಕೆ ಹಾಕಿದ ಘಟನೆ ಮಂಗಳೂರು ಹೊರ ವಲಯದ ಫರಂಗಿಪೇಟೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿತ್ತು ಎಂದು ಆರೋಪಿಸಲಾಗಿತ್ತು.
ಆದರೆ ಬಂಧಿಸಲಾದ ವ್ಯಕ್ತಿ ಬಳಿಯಿಂದ ಪೊಲೀಸರು ಯಾವುದೇ ಮಾರಕಾಸ್ತ್ರ ವಶಪಡಿಸಿಕೊಂಡಿಲ್ಲ. ಅಲ್ಲದೇ ವ್ಯಕ್ತಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲದೇ ಇರುವುದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.
ಗುರುವಾರ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಬೆಳ್ತಂಗಡಿಗೆ ತೆರಳುತ್ತಿದ್ದ ಶಾಸಕ ಹರೀಶ್ ಪೂಂಜಾ ಅವರ ತಮ್ಮ ಕಾರನ್ನು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತೆರಳುತ್ತಿದ್ದರು.
ಹರೀಶ್ ಪೂಂಜಾ ತಮ್ಮ ಗೆಳೆಯರ ಕಾರಿನಲ್ಲಿ ಮುಂದೆ ಹೋಗುತ್ತಿದ್ದರೆ, ಶಾಸಕರ ಅಧಿಕೃತ ಕಾರು ಆ ಕಾರನ್ನು ಹಿಂಬಾಲಿಸುತ್ತಿತ್ತು. ಹರೀಶ್ ಪೂಂಜಾ ಅವರ ಅಧಿಕೃತ ವಾಹನ ಚಾಲಕ ಶಾಸಕರ ಕಾರನ್ನು ಚಲಾಯಿಸುತ್ತಿದ್ದರು. ಈ ಕಾರನ್ನು ತಡೆಗಟ್ಟಿದ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಪಡೀಲ್ನಿಂದ ಫರಂಗಿಪೇಟೆಯವರೆಗೆ ದುಷ್ಕರ್ಮಿಗಳ ತಂಡ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಬೆನ್ನಟ್ಟಿದೆ. ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯವಾಗಿ ಬೈದು ತಲವಾರು ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶಾಸಕ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






