ಬಿಬಿಎಂಪಿಯ ಡೆಮಾಲಿಷನ್ ಡ್ರೈವ್ ಗೆ ಕೆಆರ್ ಪುರಂ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ರಾಜಕಾಲುವೆ ಅಕ್ಕಪಕ್ಕ ಇದ್ದ ಬಾಡಿಗೆ ನಿವಾಸಿಗಳು ಮನೆ ಖಾಲಿ ಮಾಡ್ತಿದ್ದಾರೆ. ರಾಜಕಾಲುವೆ ತೆರವು ಕಾರ್ಯಚರಣೆಯಿಂದ ಬದುಕು ಬೀದಿಗೆ ಬಂತು ಅಂತ ಅಳಲು ತೊಡಿಕೊಳ್ತಿದ್ದಾರೆ. ಇದರ ಜೊತೆಗೆ ಕಳೆದರಡು ದಿನದಿಂದ ಬಿಬಿಎಂಪಿ ಬುಲ್ಡೋಜರ್ ಆಪರೇಷನ್ ಥಂಡಾ ಹೊಡೆದಿದೆ.
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ನೆನೆಗುದಿಗೆ ಬೀಳ್ತಿದೆ. ಬಿಬಿಎಂಪಿ ವ್ಯಾಪ್ತಿಯ ಮಹಾದೇಪುರ ಹಾಗೂ ಕೆಆರ್ ಭಾಗದಲ್ಲಿ ಡೆಮಾಲಿಷನ್ ಕಾರ್ಯಾ ನಡೆಯುತ್ತಿತ್ತು. ಆದರೆ ಕಳೆದೆರಡು ದಿನದಿಂದ ಅದೂ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ.
ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್, ಈಗಾಗಲೇ ಗುರುತು ಮಾಡಿದಷ್ಟು ಒತ್ತುವರಿ ತೆರವು ಮಾಡಲಾಗಿದೆ. ಇನ್ನು ಕಂದಾಯ ಇಲಾಖೆ ಜೊತೆ ಜಂಟಿಯಾಗಿ ಸರ್ವೇ ಮಾಡಬೇಕಿದೆ. ಹೀಗಾಗಿ ಇದಕ್ಕೆ ಕಾಲಾವಕಾಶ ಬೇಕು. ನಾವು ಕಂದಾಯ ಇಲಾಖೆ ಜೊತೆ ಚರ್ಚೆ ಮಾಡಿದ್ದೇವೆ. ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತಂದವರ ಒತ್ತುವರಿ ಮರು ಸರ್ವೇ ಮಾಡ್ತೇವೆ. ಎಲ್ಲೂ ಕೂಡ ಒತ್ತುವರಿ ತೆರವು ಕಾರ್ಯಾಚರಣೆ ನಿಂತಿಲ್ಲ, ಪ್ರಿಪರೇಷನ್ ಆಗಬೇಕಿದೆ. ಹ್ಯೂಮನ್ ಹಾಗೂ ಮೆಕಾನಿಕಲ್ ಸೋರ್ಸ್ ಬೇಕಿದೆ, ಈ ಹಿನ್ನಲೆ ಸ್ವಲ್ಪ ತಡವಾಗ್ತಿದೆ ಎಂದರು.

ಡೆಮಾಲಿಷನ್ ಬೆನ್ನಲ್ಲೇ ಮನೆ ಮಾಲೀಕರಿಗೆ ಶಾಕ್ ಕೊಡ್ತಿರೋ ಬಾಡಿಗೆದಾರರು
ಕೆಆರ್ ಪುರದ ಕೇಂಬ್ರಿಡ್ಜ್ ಕಾಲೇಜು ಹಿಂಭಾಗದಲ್ಲಿ ನಡೆಯುತ್ತಿರುವ ಡೆಮಾಲಿಷನ್ ಡ್ರೈವ್ ನಿಂದಾಗಿ ಈ ಭಾಗದಲ್ಲಿ ಈಗಾಗಲೇ 25ಕ್ಕೂ ಹೆಚ್ಚಿನ ಮನೆ ತೆರವು ಹಿನ್ನೆಲೆಯಲ್ಲಿ ಡ್ಯಾಮೇಜ್ ಆಗಿದೆ. ಈ ಹಿನ್ನೆಲೆ ಈ ಭಾಗದಲ್ಲಿ ಮನೆ ಖಾಲಿ ಮಾಡಿ ಬಾಡಿಗೆದಾರರು ಹೊರಡುತ್ತಿದ್ದಾರೆ. ಕೇಂಬ್ರಿಡ್ಜ್ ಕಾಲೇಜು ಹಿಂಭಾಗದ ಏರಿಯಾದಲ್ಲಿ ಸುಮಾರು 30ಕ್ಕೂ ಅಧಿಕ ಮನೆಗಳು ಖಾಲಿ ಬಿದ್ದಿವೆ. ಈ ಏರಿಯಾದ ಸಹವಾಸನೆ ಬೇಡ ಅಂತ ಮನೆ ಖಾಲಿ ಮಾಡ್ತಿದ್ದಾರೆ ಜನರು. ಸಾಲು ಸಾಲು ಮನೆಗಳು ಖಾಲಿಯಿಂದಾಗಿ ಬೀಗ ಜಡಿದು ಮನೆ ಮಾಲಕರು ಕಂಗಾಲಾಗಿ ಹೋಗಿದ್ದಾರೆ. ಲಕ್ಷ ಲಕ್ಷ ಬಂಡವಾಳ ಹೂಡಿ ಮನೆ ಕಟ್ಟಿ ಬರುವ ಬಾಡಿಗೆಯಿಂದ ಸಾಲ ತೀರಿಸಿಕೊಳ್ಳುತ್ತಿದ್ದ ಮಾಲಕರಿಗೆ ಈ ಡೆಮಾಲಿಷನ್ ಡ್ರೈವ್ ನಿಂದ ಏಕಾಏಕಿ ಖಾಲಿ ಮಾಡಿಸಿದರೆ ಎಲ್ಲಿಗೆ ಹೋಗೋದು ಎಂದು ಪ್ರಶ್ನೆ ಮೂಡಿದೆ. ಇಲ್ಲಿ ಒಂದೇ ಲೇನ್ ನಲ್ಲಿ ಎರಡ್ಮೂರು ಅಂತಸ್ತಿನ ಮನೆಗಳು ಖಾಲಿ ಬಿದ್ದಿವೆ ಈಗ.
ಒಟ್ಟಾರೆ ಬಿಬಿಎಂಪಿ ಡೆಮಾಲಿಷನ್‌ಗೆ ಕೆಆರ್ ಪುರಮ್‌ನ ಕೇಂಬ್ರಿಡ್ಜ್ ಕಾಲೇಜಿನ ಹಿಂಭಾಗದ ಏರಿಯಾದಲ್ಲಿ ಮನೆಗಳು ಖಾಲಿಯಾಗತೊಡಗಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಸುರಿದು ಮನೆ ಕಟ್ಟಿರುವ ಮನೆ ಮಾಲೀಕರು ಈಗ ಆಕಾಶ ನೋಡಿ ಕೂಡುವಂತ ಸ್ಥಿತಿ ಎದುರಾಗಿದೆ. ಇದರ ಜೊತೆಗೆ ಕಳೆದರಡು ದಿನದಿಂದ ಪಾಲಿಕೆಯೂ ಸೈಲೆಂಟ್ ಆಗಿ ಕೂತಿರುವ ಬಿಬಿಎಂಪಿ ನಡೆಗೆ ಭಾರೀ ಆಕ್ರೋಶ ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.






