ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಸಿಡಿಸಿದ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ 16 ರನ್ ನಿಂದ ಭಾರತ ವಿರುದ್ಧ ವೀರೋಚಿತ ಸೋಲುಂಡಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಟಿ-20 ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿತು.
ಗುವಾಹತಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 3 ವಿಕೆಟ್ ಗೆ 237 ರನ್ ಗಳಿಸಿತು. ಅಗಾಧ ಮೊತ್ತ ಬೆಂಬತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 3 ವಿಕೆಟ್ ಗೆ 221 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಠಿಣ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ 1 ರನ್ ಗೆ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಏರಿಯನ್ ಮರ್ಕರಂ (33) ಮತ್ತು ಕ್ವಿಂಟನ್ ಡಿ ಕಾಕ್ (ಅಜೇಯ 69) ಮೂರನೇ ವಿಕೆಟ್ ಗೆ 46 ರನ್ ಜೊತೆಯಾಟದ ಮೂಲಕ ಕುಸಿತ ತಪ್ಪಿಸಿದರು.
ನಾಲ್ಕನೇ ವಿಕೆಟ್ ಗೆ ಜೊತೆಯಾಟದ ಡೇವಿಡ್ ಮಿಲ್ಲರ್ ಮತ್ತು ಡಿಕಾಕ್ 13.4 ಓವರ್ ಗಳಲ್ಲಿ 174 ರನ್ ಜೊತೆಯಾಟದ ಮೂಲಕ ಹೋರಾಟ ನಡೆಸಿದರು. ಅದರಲ್ಲೂ ಮಿಲ್ಲರ್ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ಸೇರಿದ ಅಜೇಯ 106 ರನ್ ಬಾರಿಸಿದರು. ಆದರೆ ಅವರ ಹೋರಾಟ ವ್ಯರ್ಥವಾಯಿತು.
ದಕ್ಷಿಣ ಆಫ್ರಿಕಾ ಕೊನೆಯ ಓವರ್ ನಲ್ಲಿ 37 ರನ್ ಗಳಿಸಬೇಕಿತ್ತು. ಆದರೆ ಮೂರು ಸಿಕ್ಸರ್ ನೊಂದಿಗೆ 20 ರನ್ ಗಳಿಸಲಷ್ಟೇ ಶಕ್ತವಾಯಿತು.
ಸೂರ್ಯ-ರಾಹುಲ್ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.
ರಾಹುಲ್ ಮತ್ತು ರೋಹಿತ್ ಮೊದಲ ವಿಕೆಟ್ ಗೆ 96 ರನ್ ಜೊತೆಯಾಟದ ಮೂಲಕ ಭರ್ಜರಿ ಆರಂಭ ನೀಡಿದರು. ರೋಹಿತ್ 37 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಔಟಾದರು. ರಾಹುಲ್ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 57 ರನ್ ಬಾರಿಸಿದರು.
ನಂತರ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಮೂರನೇ ವಿಕೆಟ್ ಗೆ 102 ರನ್ ಪಾಲುದಾರಿಕೆ ನಡೆಸಿದದರು. ಸೂರ್ಯಕುಮಾರ್ 22 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 61 ರನ್ ಚಚ್ಚಿದರು. ಸೂರ್ಯಕುಮಾರ್ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ದಾಖಲೆ ಬರೆದರು.
ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 49 ರನ್ ಬಾರಿಸಿ ಅರ್ಧಶತಕದ ಹೊಸ್ತಿಲಲ್ಲಿ ಅಜೇಯರಾಗಿ ಉಳಿದರೆ, ದಿನೇಶ್ ಕಾರ್ತಿಕ್ 7 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 17 ರನ್ ಬಾರಿಸಿ ಅಜೇಯರಾಗಿ ಉಳಿದರು.