ಆರಂಭಿಕ ಯಶಸ್ವಿ ಜೈಸ್ವಾಲ್ ಸಿಡಿಸಿದ ಅಜೇಯ ದ್ವಿಶತಕದ ನೆರವಿನಿಂದ ಪಶ್ಚಿಮ ವಲಯ ತಂಡ ದುಲೀಪ್ ಟ್ರೋಫಿ ಫೈನಲ್ ನಲ್ಲಿ ದಕ್ಷಿಣ ವಲಯ ವಿರುದ್ಧ ಎರಡನೇ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.
ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ ದಕ್ಷಿಣ ವಲಯ ತಂಡ ಮೊದಲ ಇನಿಂಗ್ಸ್ ನಲ್ಲಿ 372 ರನ್ ಗಳಿಗೆ ಆಲೌಟಾಯಿತು.

57 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯ ದಿನದಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 376 ರನ್ ಗಳಿಸಿದೆ. ಇದರೊಂದಿಗೆ ಪಶ್ಚಿಮ ವಲಯ ಒಟ್ಟಾರೆ 319 ರನ್ ಗಳ ಮುನ್ನಡೆ ಪಡೆದಿದೆ.
ಯಶಸ್ವಿ ಜೈಸ್ವಾಲ್ 244 ಎಸೆತಗಳಲ್ಲಿ 23 ಬೌಂಡರಿ ಮತ್ತು 3 ಸಿಕ್ಸರ್ ನೆರವಿನೊಂದಿಗೆ ಅಜೇಯ 209 ರನ್ ಗಳಿಸಿ ತಂಡವನ್ನು ಪಾರು ಮಾಡಿದರು. ಅಲ್ಲದೇ ಮೊದಲ ವಿಕೆಟ್ ಗೆ ಪ್ರಿಯಾಂಕ್ ಪಂಚಾಲ್ (40) ಜೊತೆ 110 ರನ್ ಜೊತೆಯಾಟ ನಿಭಾಯಿಸಿ ಭರ್ಜರಿ ಆರಂಭ ನೀಡಿದರು.
ನಂತರ ಶ್ರೇಯಸ್ ಅಯ್ಯರ್ ಜೊತೆ ಜೈಸ್ವಾಲ್ ಮೂರನೇ ವಿಕೆಟ್ ಗೆ 169 ರನ್ ಜೊತೆಯಾಟ ನಿಭಾಯಿಸಿದರು. ಶ್ರೇಯಸ್ 113 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 71 ರನ್ ಬಾರಿಸಿ ಔಟಾದರು.