ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ ನಾವಲ್ಲ. ಮೊಟ್ಟೆ ಎಸೆಯೋದು ಮತ್ತು ಕಪ್ಪು ಬಾವುಟ ಪ್ರದರ್ಶಿಸುವದರ ಹಿಂದೆ ನಿಮ್ಮದು ಕುಮ್ಮಕ್ಕು ಎಂಬುದು ನಮಗೆ ಗೊತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.
ವಿಧಾನಸಭೆಯಲ್ಲಿ ಸೋಮವಾರ ನಡೆದ ಕಲಾಪದ ವೇಳೆ ಮೊಟ್ಟೆ ಎಸೆತ ಪ್ರಕರಣ ಪ್ರತಿಧ್ವನಿಸಿದ್ದರಿಂದ ಕೆಲವು ನಿಮಿಷಗಳ ಕಾಲ ಉಭಯ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಕೊಡಗಿನಲ್ಲಿ ತಮ್ಮ ಮೇಲೆ ಮೊಟ್ಟೆ ಎಸೆತ ಪ್ರಕರಣವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಕಪ್ಪುಬಾವುಟ ಪ್ರದರ್ಶಿಸುವುದು, ಮೊಟ್ಟೆ, ಕಲ್ಲು ಎಸೆಯುವ ನೀವು ವೀರರೂ ಅಲ್ಲ, ಶೂರರೂ ಅಲ್ಲ ಎಂದು ಅವರು ಹೇಳಿದರು.

ನಾನು ಕೊಡಗಿಗೆ ಭೇಟಿ ನೀಡಿದ ವೇಳೆ ಕೆಲವು ಗುಂಪುಗಳು ಒಂದೆರಡು ಕಡೆ ಪ್ರತಿಭಟನೆ ನಡೆಸಿದವು. ಈ ವೇಳೆ ಮುಂಜಾಗೃತೆ ವಹಿಸಬೇಕಾದ ಪೊಲೀಸರು ಮೂಕಪ್ರೇಕ್ಷಕರಂತೆ ನಿಂತಿದ್ದರು. ನಾನು ಜಿಲ್ಲಾಧಿಕಾರಿ ಅವರನ್ನು ನೀವು ಹೀಗಾ ಕೆಲಸ ಮಾಡೋದು ಎಂದು ತರಾಟೆಗೆ ತೆಗೆದುಕೊಂಡೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷ ಸದಸ್ಯರ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪೊಲೀಸರು ನಿಷ್ಕ್ರಿಯರಾಗಿದ್ದರು ಎಂದು ಆರೋಪಿಸುತ್ತಿದ್ದಾರೆ ಉತ್ತರ ಕೊಡಿ ಸಚಿವರೇ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸೂಚಿಸಿದರು.
ಘಟನೆಗೆ ಕಾರಣರಾದವರನ್ನು ನಾವು ಬಂಧಿಸಿದ್ದೇವೆ ಎಂದರು. ಆದರೆ ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ ನಾವು ಅಲ್ಲಿಂದ ಹೋದ ಮೇಲೆ ನಾನು ಆಗ್ರಹಿಸಿದ ಮೇಲೆ ಬಂಧಿಸಿದ್ದೀರಿ. ನಂತರ ನಿಮ್ಮವರೇ ಹೋಗಿ ಅವರನ್ನು ಬಿಟ್ಟು ಕಳಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.






