ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 8 ಮಂದಿ ಮೃತಪಟ್ಟ ಘಟನೆ ತೆಲಂಗಾಣದ ಸಿಕಂದರಾಬಾದ್ ನಲ್ಲಿ ಸಂಭವಿಸಿದೆ.
ಸೋಮವಾರ ತಡರಾತ್ರಿ ಕಟ್ಟಡದ ನೆಲಮಳಿಗೆಯಲ್ಲಿದ್ದ ಎಲೆಕ್ಟ್ರಿಕ್ ಶೂನಲ್ಲಿ ಸ್ಫೋಟ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಮೇಲಿನ ಮಹಡಿಯಲ್ಲಿದ್ದ ಹೋಟೆಲ್ ರೂಬಿಗೆ ವಿಸ್ತರಿಸಿದೆ. ಇದರಿಂದ ದುರಂತ ಪ್ರಮಾಣ ಹೆಚ್ಚಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹೋಟೆಲ್ ರೂಬಿಯಲ್ಲಿ ಕನಿಷ್ಠ 25 ಗ್ರಾಹಕರು ತಂಗಿದ್ದರು ಎಂದು ಹೇಳಲಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜಿಂಗ್ ಗೆ ಇರಿಸಲಾಗಿದ್ದು, ಅತಿಯಾದ ಚಾರ್ಜಿಂಗ್ ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಫೋಟದಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ದಟ್ಟ ಹೊಗೆ ಹೋಟೆಲ್ ಪೂರ್ತಿ ಆವರಿಸಿಕೊಂಡಿದ್ದು, ಉಸಿರುಗಟ್ಟಿ 8 ಮಂದಿ ಸಾವಿಗೀಡಾಗಿದ್ದು, ಇನ್ನು ಹಲವರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.






