ಹಣದುಬ್ಬರವನ್ನು ಕೇಂದ್ರದಿಂದ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಬೆಲೆ ಏರಿಕೆ ಹಾಗೂ ಕೇಂದ್ರದ ವಿರುದ್ಧ ಹೆಚ್ಚುತ್ತಿರುವ ಆಕ್ರೋಶದ ಹಿನ್ನೆಲೆಯಲ್ಲಿ ಸಚಿವರು ಹೀಗೆ ಹೇಳಿದ್ದಾರೆ. ಆ ಮೂಲಕ ಹಣದುಬ್ಬರವನ್ನು ತಗ್ಗಿಸುವ ಜವಾಬ್ದಾರಿಯನ್ನು ರಾಜ್ಯಗಳ ಹೆಗಲಿಗೂ ಹಾಕಿದ್ದಾರೆ.
ಹಣದುಬ್ಬರದ ವಿಷಯಗಳನ್ನು ನಿರ್ವಹಿಸಲು ರಾಜ್ಯಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಮಾರ್ಗಗಳನ್ನು ಕಂಡುಕೊಳ್ಳಬೇಕು. ಹಣದುಬ್ಬರದ ನಿರ್ವಹಣೆಯಲ್ಲಿ ಆರ್ ಬಿಐ ನಿರ್ಣಾಯಕ ಭಾಗವಾಗಿದೆ, ಆದರೆ ಆರ್ಥಿಕತೆಯಲ್ಲಿ ಹಣದುಬ್ಬರದ ಉಲ್ಬಣವನ್ನು ನಿಭಾಯಿಸುವಲ್ಲಿ ಹಣಕಾಸಿನ ನೀತಿಯು ವಿತ್ತೀಯ ನೀತಿಯೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

ಇಂಧನ ಬೆಲೆಯನ್ನು ಕಡಿಮೆ ಮಾಡದ ರಾಜ್ಯಗಳಲ್ಲಿ ಹಣದುಬ್ಬರವು ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಾಗಿದೆ. ಜಿಎಸ್‌ಟಿ, ಮಾರುಕಟ್ಟೆಯ ರಚನೆ, ಟೋಲ್‌ಗಳು ಮತ್ತು ತೆರಿಗೆಗಳನ್ನು ತೆಗೆದುಹಾಕುವುದು, ಸರಕುಗಳ ಚಲನೆಯನ್ನು ಮುಕ್ತಗೊಳಿಸುವುದು ಮೊದಲಾದವನ್ನು ಆಧರಿಸಿ ಹಣದುಬ್ಬರ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಜಾಗತಿಕ ಇಂಧನ ಬೆಲೆಗಳು ಹೆಚ್ಚಾದ ಸಮಯದಲ್ಲಿ, ಎಲ್ಲೆಲ್ಲಿ ಮತ್ತು ಎಷ್ಟು ಸಾಧ್ಯವೋ ಎಂದು ನೋಡಿ ಸರ್ಕಾರ ಎರಡು ಬಾರಿ ಪೆಟ್ರೋಲ್ ಮತ್ತು ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಿತು. ಈಗ, ಲಭ್ಯವಿರುವ ಮಾಹಿತಿಯು ಹಣದುಬ್ಬರವು ರಾಜ್ಯದಿಂದ ರಾಜ್ಯಕ್ಕೆ ಹೇಗೆ ಬದಲಾಗಿದೆ ಎಂಬುದನ್ನು ತೋರಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು…ಆದರೆ, ಇಂಧನ ಬೆಲೆಗಳನ್ನು ಕಡಿಮೆ ಮಾಡದ ರಾಜ್ಯಗಳಲ್ಲಿ ಹಣದುಬ್ಬರವು ರಾಷ್ಟ್ರೀಯ ಮಟ್ಟದ ಹಣದುಬ್ಬರಕ್ಕಿಂತ ಹೆಚ್ಚಿರುವುದನ್ನು ನಾನು ಕಂಡುಕೊಂಡಿದ್ದೇನೆ” ಎಂದು ನಿರ್ಮಲಾ ಸೀತರಾಮನ್ ಹೇಳಿದ್ದಾರೆ.
ಹಣದುಬ್ಬರದ ವಿಷಯಗಳನ್ನು ನಿಭಾಯಿಸಲು ನಾವು ಒಟ್ಟಾಗಿ ಕೆಲಸ ಮಾಡುವ ವಿಧಾನವನ್ನು ನಾವು ಹೊಂದಿರಬೇಕು. ಹಣದುಬ್ಬರವನ್ನು ಕೇಂದ್ರದಿಂದ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ. ರಾಜ್ಯಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದಿದ್ದಾಗ, ಭಾರತದ ಆ ರಾಜ್ಯಗಳಲ್ಲಿ ಹಣದುಬ್ಬರದ ಒತ್ತಡ ಉಂಟಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.