ಬಾಲಿವುಡ್ ಚಿತ್ರಗಳನ್ನು ಒಂದಲ್ಲಾ ಒಂದು ಕಾರಣ ಇಟ್ಟುಕೊಂಡು ಬಲಪಂಥೀಯರು ಬಹಿಷ್ಕರಿಸಲು ಕರೆ ನೀಡುತ್ತಿದ್ದಾರೆ. ಬಹುತೇಕ ಬಾರಿ ಹಿಂದೂ ನಂಬಿಕೆಗಳಿಗೆ ಘಾಸಿ ಎಂಬ ವಾದವನ್ನು ಮುಂದಿಟ್ಟುಕೊಂಡು ಬಲಪಂಥೀಯರು ಬಾಲಿವುಡ್ ಚಿತ್ರಗಳ ಬಾಯ್ಕಾಟ್ ಅಭಿಯಾನವನ್ನು ನಡೆಸುತ್ತಿದ್ದಾರೆ.
ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರಕ್ಕೂ ಇಂತಹದ್ದೇ ಸಂದಿಗ್ಧತೆ ಎದುರಾಗಿದೆ. ಚಿತ್ರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ ಬಾಯ್ಕಾಟ್ ಅಭಿಯಾನ ನಡೆದಿತ್ತು. ಇದೀಗ, ರಣಬೀರ್ ಅವರ ಹಳೆಯ ಸಂದರ್ಶನದ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ತಾನು ಬೀಫ್ ತಿನ್ನುತ್ತೇನೆ ಎಂದು ರಣಬೀರ್ ಅದರಲ್ಲಿ ಹೇಳಿಕೊಂಡಿರುವುದು ಕಾಣುತ್ತದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ರಣಬೀರ್ ಹಾಗೂ ಅವರ ಚಿತ್ರದ ವಿರುದ್ಧ ಪ್ರಚಾರ ನಡೆಯುತ್ತಿದೆ. ಇದು ಚಿತ್ರಕ್ಕೆ ಮಾತ್ರ ಸೀಮಿತವಾಗದೆ, ಅವರ ವೈಯಕ್ತಿಕ ಬದುಕಿಗೂ ಸಮಸ್ಯೆಗಳನ್ನು ತಂದೊಡ್ಡಿದೆ. ಇತ್ತೀಚೆಗೆ ದೇವಸ್ಥಾನವೊಂದಕ್ಕೆ ತೆರಳದಂತೆ ರಣಬೀರ್ ಕಪೂರ್ – ಆಲಿಯಾ ಭಟ್ ದಂಪತಿಗೆ ಹಿಂದುತ್ವ ಸಂಘಟನೆಗಳು ಘೇರಾವ್ ಹಾಕಿತ್ತು.
ಈ ನಡುವೆ, ಬಲಪಂಥೀಯ ಚಿತ್ರ ತಯಾರಕ ಎಂದೇ ಗುರುತಿಸಿಕೊಂಡಿರುವ, ದಿ ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ತಾನು ಬೀಫ್ ತಿನ್ನುವುದಾಗಿ ಹೇಳಿಕೆ ನೀಡಿದ್ದ ವಿಡಿಯೋ ತುಣುಕು ಕೂಡಾ ವೈರಲ್ ಆಗುತ್ತಿದೆ. ರಣಬೀರ್ ಚಿತ್ರಗಳಿಗೆ ಬಹಿಷ್ಕಾರ ಹಾಕುವವರು ಅಗ್ನಿಹೋತ್ರಿ ಚಿತ್ರಗಳಿಗೆ ಯಾಕೆ ಪ್ರಚಾರ ಮಾಡಿದ್ದೀರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.