ಸಂಘಟಿತ ಪ್ರದರ್ಶನ ನೀಡಿದ ಶ್ರೀಲಂಕಾ ತಂಡ ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಭಾರತ ತಂಡದ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ಭಾರತದ ಫೈನಲ್ ಹಾದಿ ಕಠಿಣವಾಗಿದೆ.
ದುಬೈನಲ್ಲಿ ಮಂಗಳವಾರ ನಡೆದ ಸೂಪರ್-4 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗೆ 173 ರನ್ ಸಂಪಾದಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಶ್ರೀಲಂಕಾ 2 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರಂಭಿಕರಾದ ಪಥುಮ್ ನಿಸ್ಸಾಂಕ ಮತ್ತು ಕುಶಾಲ್ ಮೆಂಡಿಸ್ ಅವರ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ತಂಡ ಭರ್ಜರಿ ಆರಂಭ ಪಡೆಯಿತು. ಇವರಿಬ್ಬರು ಮೊದಲ ವಿಕೆಟ್ ಗೆ 97 ರನ್ ಜೊತೆಯಾಟ ನಿಭಾಯಿಸಿದರು.
ನಿಸ್ಸಾಂಕ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿದರೆ, ಮೆಂಡಿಸ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 57 ರನ್ ಗಳಿಸಿದರು. ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಇವರಿಬ್ಬರನ್ನು ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು.
ಒಂದು ಹಂತದಲ್ಲಿ ಶ್ರೀಲಂಕಾ 110 ರನ್ ಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ಭಾನುಕಾ ರಾಜಪಕ್ಸೆ ಮತ್ತು ಡಾಸುನ್ ಸನಕಾ ಮುರಿಯದ 5ನೇ ವಿಕೆಟ್ ಗೆ 64 ರನ್ ಜೊತೆಯಾಟದ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಭಾನುಕಾ ರಾಜಪಕ್ಸೆ 17 ಎಸೆತಗಳಲ್ಲಿ 2 ಸಿಕ್ಸರ್ ಸೇರಿದ 25 ರನ್ ಗಳಿಸಿದರೆ, ಡಾಸುನ್ ಸನಕಾ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಅಜೇಯ 33 ರನ್ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಇದರೊಂದಿಗೆ ಶ್ರೀಲಂಕಾ ಸತತ ಮೂರು ಪಂದ್ಯಗಳಲ್ಲೂ ರನ್ ಚೇಸ್ ಮಾಡಿ ಗೆದ್ದ ದಾಖಲೆ ಬರೆಯಿತು.
ಭಾರತಕ್ಕೆ ರೋಹಿತ್ ನೆರವು
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ನಾಯಕ ರೋಹಿತ್ ಶರ್ಮ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿತು.
13 ರನ್ ಗೆ 2 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾಗ ಒಂದಾದ ರೋಹಿತ್ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್ ಗೆ 97 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು.
ರೋಹಿತ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 72 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿದರು.
ಇವರಿಬ್ಬರು ಔಟಾಗುತ್ತಿದ್ದಂತೆ ತಂಡ ಮತ್ತೊಮ್ಮೆ ಕುಸಿತ ಅನುಭವಿಸಿತು. ಕೆಳ ಕ್ರಮಾಂಕದಲ್ಲಿ ಆರ್.ಅಶ್ವಿನ್ 7 ಎಸೆತಗಳಲ್ಲಿ 1 ಸಿಕ್ಸರ್ ಸಹಾಯದಿಂದ 15 ರನ್ ಬಾರಿಸಿ ತಂಡದ ಮೊತ್ತ 170ರ ಗಡಿ ತಲುಪುವಂತೆ ಮಾಡಿದರು.