ಫಾರ್ಮ್ ಗೆ ಮರಳಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಧೂಳು ಹಿಡಿದಿದ್ದ ದಾಖಲೆ ಪುಟಗಳನ್ನು ಮತ್ತೆ ಕೊಡವಿ ಹೊಸ ದಾಖಲೆಗಳನ್ನು ಬರೆಯಲು ಮುಂದುವರಿಸಿದ್ದಾರೆ.
ಹೌದು, ಪಾಕಿಸ್ತಾನ ವಿರುದ್ಧ ಭಾನುವಾರ ನಡೆದ ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಸಿಡಿಸಿದರು. ಈ ಮೂಲಕ ಟಿ-20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.
ರನ್ ಗಳಿಸಲು ಪರದಾಡುತ್ತಿದ್ದ ವಿರಾಟ್ ಕೊಹ್ಲಿ ಹಾಂಕಾಂಗ್ ವಿರುದ್ಧ ಅರ್ಧಶತಕ ಸಿಡಿಸಿ ಫಾರ್ಮ್ ಗೆ ಮರಳಿದ ಸೂಚನೆ ನೀಡಿದರು. ಆದರೆ ಬಲಿಷ್ಠ ಪಾಕಿಸ್ತಾನ ವಿರುದ್ಧ 44 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 60 ರನ್ ಸಿಡಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ಈ ಮೂಲಕ ಏಷ್ಯಾಕಪ್ ನಲ್ಲಿ ಸತತ 2ನೇ ಅರ್ಧಶತಕ ಗಳಿಸಿದರು.
ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಟಿ-20 ಪಂದ್ಯದಲ್ಲಿ 4ನೇ ಅರ್ಧಶತಕ ದಾಖಲಿಸಿದರು. ಅಲ್ಲದೇ ಟಿ-20 ಕ್ರಿಕೆಟ್ ನಲ್ಲಿ 32ನೇ ಫಿಫ್ಟಿ ಗಳಿಸಿದರು. ಈ ಮೂಲಕ ಟಿ-20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು 31 ಅರ್ಧಶತಕ ಗಳಿಸಿದ ದಾಖಲೆ ಹೊಂದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ದಾಖಲೆ ಮುರಿದರು.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (27) ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (23), ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ (22) ಮತ್ತು ಐರ್ಲೆಂಡ್ ಆರಂಭಿಕ ಪಾಲ್ ಸ್ಟಿರ್ಲಿಂಗ್ (21) ನಂತರದ ಸ್ಥಾನಗಳಲ್ಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಮೊದಲ ಪಂದ್ಯದಲ್ಲಿ ಶತಕದ ಪಂದ್ಯದ ದಾಖಲೆ ಬರೆದಿದ್ದ ವಿರಾಟ್ ಕೊಹ್ಲಿ 102 ಪಂದ್ಯಗಳಲ್ಲಿ 50.91ರ ಸರಾಸರಿಯಲ್ಲಿ 3462 ರನ್ ಗಳಿಸಿದ್ದಾರೆ. ಇದರಲ್ಲಿ 32 ಅರ್ಧಶತಕ ಸೇರಿದ್ದು, 94 ರನ್ ಗಳಿಸಿರುವುದು ಅವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.
ವಿರಾಟ್ ಕೊಹ್ಲಿ ಅರ್ಧಶತದ ಹೊರತಾಗಿಯೂ ಭಾರತ ಸೂಪರ್-4 ಪಂದ್ಯದಲ್ಲಿ 5 ವಿಕೆಟ್ ಗಳಿಂದ ಪಾಕಿಸ್ತಾನ ವಿರುದ್ಧ ಸೋಲುಂಡಿತು.













