2006ರ ಪಟಬಂಧರೆ ನಗರ ಬಾಂಬ್ ಸ್ಫೋಟವನ್ನು ಆರ್ಎಸ್ಎಸ್ ಮಾಡಿತ್ತು ಎಂಬ ಸ್ಪೋಟಕ ಸುದ್ದಿಯನ್ನು ಆರ್ಎಸ್ಎಸ್ ಮಾಜಿ ಪ್ರಚಾರಕ ಯಶವಂತ್ ಶಿಂಧೆ ಅವರು ಬಹಿರಂಗಪಡಿಸಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ತನ್ನ ಬಳಿ ಇರುವುದರಿಂದ ಪ್ರಕರಣದ ಸಾಕ್ಷಿಯಾಗಲು ಸಿದ್ಧ ಎಂದು ಯಶವಂತ್ ಶಿಂಧೆ ಅವರು ನಾಂದೇಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಯಶವಂತ್ ಶಿಂಧೆ ಅವರು 1995 ರಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸದಸ್ಯರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ನಾಂದೇಡ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಹಿಮಾಂಶು ಪಾನ್ಸೆ ಮತ್ತು ಇತರ 20 ಮಂದಿಯೊಂದಿಗೆ ಬಾಂಬ್ ತಯಾರಿಕಾ ತರಬೇತಿಗೆ ಹಾಜರಾಗಿದ್ದರು ಎಂದು ಶಿಂಧೆ ಬಹಿರಂಗಪಡಿಸಿದ್ದಾರೆ. ಹಿಮಾಂಶು ಪನ್ಸೆ ಅವರನ್ನು ಭೇಟಿಯಾಗಲು ನಾಂದೇಡ್ಗೆ ಹಲವು ಬಾರಿ ಹೋಗಿದ್ದು, ಸ್ಪೋಟ ಮಾಡಬೇಡಿ ಎಂದು ಪನ್ಸೆಗೆ ಹೇಳಿದ್ದಾಗಿ ಯಶವಂತ್ ಶಿಂಧೆ ಹೇಳಿದ್ದಾರೆ. ಅಲ್ಲದೆ, ಬಿಜೆಪಿಯ ಗೆಲುವಿಗಾಗಿ ಆರೆಸ್ಸೆಸ್ ಈ ಸ್ಫೋಟಗಳನ್ನು ಮಾಡಿದೆ ಎಂದು ಯಶವಂತ್ ಶಿಂಧೆ ಆರೋಪಿಸಿದ್ದಾರೆ.
5 ಏಪ್ರಿಲ್ 2006 ರಂದು ನಾಂದೇಡ್ನ ಪಟಬಂಧರೆ ನಗರದಲ್ಲಿನ ಮನೆಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಹಿಮಾಂಶು ಪಾನ್ಸೆ ಮತ್ತು ಕೊಂಡವರ್ ಬಾಂಬ್ ತಯಾರಿಸುವ ವೇಳೆ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಆರಂಭದಲ್ಲಿ ಪಟಾಕಿ ಸಿಡಿತ ಎಂದು ಹೇಳಿದ್ದ ಪೊಲೀಸರು ನಂತರ ಬಾಂಬ್ ತಯಾರಿಕೆ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದರು.
ಜುಲೈ 2003 ರಲ್ಲಿ ದಕ್ಷಿಣ ಮುಂಬೈನ ಖೇತ್ವಾಡಿ ಪ್ರದೇಶದಲ್ಲಿ ಪ್ರಮುಖ ಸಭೆಯಿದೆ ಮತ್ತು ಶಿಂಧೆ ಸಭೆಗೆ ಹಾಜರಾಗಬೇಕೆಂದು ಸಂದೇಶವನ್ನು ಶಿಂಧೆ ಸ್ವೀಕರಿಸಿದರು. ಸಭೆಯಲ್ಲಿ ಆರ್ಎಸ್ಎಸ್ ಸದಸ್ಯರಾಗಿದ್ದ ಮತ್ತು ವಿಎಚ್ಪಿ, ಮಹಾರಾಷ್ಟ್ರ ಪ್ರಾಂತದ ನಾಯಕರಾಗಿದ್ದ ಮಿಲಿಂದ್ ಪರಾಂಡೆ ಅವರ ನಿಕಟ ಸಹವರ್ತಿಗಳಾಗಿದ್ದ ಇಬ್ಬರು ಮಾತ್ರ ಹಾಜರಿದ್ದರು. ಈ ಇಬ್ಬರು ವ್ಯಕ್ತಿಗಳು ಬಾಂಬ್ ತಯಾರಿಕೆಯಲ್ಲಿ ತರಬೇತಿ ಶಿಬಿರವನ್ನು ಶೀಘ್ರದಲ್ಲೇ ಆಯೋಜಿಸಲಿದ್ದು, ನಂತರ ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ಉಂಟುಮಾಡುವ ಯೋಜನೆ ಇದೆ ಎಂದು ಶಿಂಧೆಗೆ ತಿಳಿಸಿದರು. ದೇಶದ ವಿವಿಧ ಭಾಗಗಳಲ್ಲಿ ಗರಿಷ್ಠ ಬಾಂಬ್ ಸ್ಫೋಟಗಳನ್ನು ನಡೆಸುವ ಜವಾಬ್ದಾರಿಯನ್ನು ಅವರು ತೆಗೆದುಕೊಳ್ಳಬೇಕು ಎಂಬ ಪ್ರಸ್ತಾಪವನ್ನು ಅವರು ಮುಂದಿಟ್ಟರು. ತಕ್ಷಣಕ್ಕೆ ಶಿಂಧೆ ಆಘಾತಕ್ಕೊಳಗಾಗಿದ್ದರೂ, ಅದನ್ನು ತೋರ್ಪಡಿಸದೆ, 2004 ರ ಲೋಕಸಭೆ ಚುನಾವಣೆಗೆ ಇದು ತಯಾರಿಯೇ ಪ್ರಶ್ನಿಸುತ್ತಾರೆ, ಆದರೆ, ಅವರು ಇದಕ್ಕೆ ಉತ್ತರಿಸಲಿಲ್ಲ ಎಂದು ಶಿಂಧೆ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಸಿಂಹಗಡ ಕೋಟೆಯ ತಪ್ಪಲಿನಲ್ಲಿರುವ ರೆಸಾರ್ಟ್ನಲ್ಲಿ ಮೂರು ದಿನಗಳ ಶಿಬಿರವನ್ನು ಆಯೋಜಿಸಲಾಗಿತ್ತು. ಮಹಾರಾಷ್ಟ್ರದ ಔರಂಗಾಬಾದ್, ಜಲಗಾಂವ್, ನಾಂದೇಡ್ ಮೊದಲಾದ ಜಿಲ್ಲೆಗಳಿಂದ ಸುಮಾರು 20 ಯುವಕರು ತರಬೇತಿಗೆ ಹಾಜರಾಗಿದ್ದರು. ಸ್ಪೋಟದಲ್ಲಿ ಮೃತಪಟ್ಟ ನಾಂದೇಡ್ನ ಹಿಮಾಂಶು ಪಾನ್ಸೆ ಕೂಡಾ ತರಬೇತಿಗೆ ಹಾಜರಿದ್ದ. ಮಿಲಿಂದ್ ಪರಾಂಡೆ ಶಿಬಿರದ ಮಾಸ್ಟರ್ ಮೈಂಡ್ ಮತ್ತು ಮುಖ್ಯ ಸಂಘಟಕರಾಗಿದ್ದ ಎಂದು ಶಿಂಧೆ ಹೇಳಿದ್ದಾರೆ.
“ಮಿಥುನ್ ಚಕ್ರವರ್ತಿ” ಎಂದು ಕರೆದುಕೊಳ್ಳುವ ವ್ಯಕ್ತಿಯಿಂದ ತರಬೇತಿ ನೀಡಲಾಗುತ್ತಿತ್ತು. (ನಂತರ ಅವನ ನಿಜವಾದ ಹೆಸರು ರವಿ ದೇವ್ ಮತ್ತು ಅವನು ಬಜರಂಗದಳದ ಕಾರ್ಯಕರ್ತ ಎಂದು ಶಿಂಧೆಗೆ ತಿಳಿಯಿತು). ರಾಕೇಶ್ ಧಾವಡೆ ಎಂಬಾತ ತರಬೇತಿ ನೀಡುವ ಸ್ಥಳಕ್ಕೆ ಆತನನ್ನು ಕರೆತಂದು ವಾಪಸ್ ಕರೆದುಕೊಂಡು ಹೋಗುತ್ತಿದ್ದ. ನಂತರ ಮಾಲೆಗಾಂವ್ 2008ರ ಸ್ಫೋಟ ಪ್ರಕರಣದಲ್ಲಿ ಅದೇ ಧವಡೆ ಬಂಧಿತನಾದ ಎಂದು ಶಿಂಧೆ ತಿಳಿಸಿದ್ದಾರೆ.
ಶಿಂಧೆ ಬಾಂಬ್ ಸ್ಪೋಟಗಳಲ್ಲಿ ಆರ್ಎಸ್ಎಸ್ ಪಾತ್ರ ಇರುವ ಬಗ್ಗೆ ಆರೋಫಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ನ ಮುಖ್ಯ ವಕ್ತಾರ ಪವನ್ ಖೇರಾ, ಇದಕ್ಕಿಂತ ದೊಡ್ಡ ಬ್ರೇಕಿಂಗ್ ನ್ಯೂಸ್ ಏನಿದೆ ಎಂದು ಪ್ರಶ್ನಿಸಿದ್ದಾರೆ.
“ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಯಶವಂತ್ ಶಿಂಧೆ ಅವರು ಸಂಘದ ದೇಶವಿರೋಧಿ ಕೃತ್ಯಗಳ ಬಗ್ಗೆ ಭಯಾನಕ ಮಾಹಿತಿಯನ್ನು ಬಹಿರಂಗಪಡಿಸುವ ಅಫಿಡವಿಟ್ ಅನ್ನು ಸಲ್ಲಿಸಿದ್ದಾರೆ. ಇಡೀ ದೇಶವನ್ನು ಸ್ಫೋಟಿಸುವ ಸಂಚು ಹೇಗೆ ರೂಪಿಸಲಾಯಿತು, ಅದರಲ್ಲಿ ಭಾಗಿಯಾಗಿರುವವರು ಯಾರು? ಇದಕ್ಕಿಂತ ದೊಡ್ಡ ಬ್ರೇಕಿಂಗ್ ನ್ಯೂಸ್ ಇನ್ನೇನಿದೆ?” ಎಂದು ಪವನ್ ಖೇರಾ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕೂಡ ಟ್ವೀಟ್ ಮೂಲಕ ಬಿಜೆಪಿಯನ್ನು ಗುರಿಯಾಗಿಸಿದ್ದು, “ಯಶವಂತ್ ಶಿಂಧೆ ಅವರು ಅತ್ಯಂತ ಧೈರ್ಯದಿಂದ ಅಫಿಡವಿಟ್ ನೀಡಿದ್ದಾರೆ. ಯಶವಂತ್ ಶಿಂಧೆ ಅವರು ಹೆಸರನ್ನು ಉಲ್ಲೇಖಿಸಿರುವ ಜನರು ಅಪರಾಧ ಸ್ವಭಾವದ ಜನರು. ಈ ಹೇಳಿಕೆಯಿಂದ ಯಶವಂತ್ ಪ್ರಾಣಕ್ಕೆ ಅಪಾಯ ಎದುರಾಗಬಹುದು. ಮುಂಬೈನ ಪೊಲೀಸ್ ಕಮಿಷನರ್ ಅವರು ಯಶವಂತ್ ಅವರ ಭದ್ರತೆಗೆ ತಕ್ಷಣವೇ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಬೇಕು.” ಎಂದು ಬರೆದಿದ್ದಾರೆ.