2021ರಲ್ಲಿ ಭಾರತದ ರಾಜಧಾನಿ ದೆಹಲಿಯಲ್ಲಿ ದಿನವೊಂದಕ್ಕೆ ಇಬ್ಬರಂತೆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಅಲ್ಲದೆ ಎನ್ಸಿಆರ್ಬಿಯ ಇತ್ತೀಚಿನ ವರದಿಯ ಪ್ರಕಾರ ದೆಹಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ಸಿಟಿಯಾಗಿದೆ.
ದೆಹಲಿಯಲ್ಲಿ 2021 ರಲ್ಲಿ ಮಹಿಳೆಯರ ಮೇಲಿನ 13,892 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು 2020 ಕ್ಕೆ ಹೋಲಿಸಿದರೆ 40% ಕ್ಕಿಂತ ಹೆಚ್ಚು . ಈ ಅಂಕಿ ಅಂಶವು 2020ರಲ್ಲಿ 9,782 ಆಗಿತ್ತು. ಎನ್ಸಿಆರ್ಬಿ ಡೇಟಾ ಪ್ರಕಾರ ಎಲ್ಲಾ 19 ಮೆಟ್ರೋಪಾಲಿಟನ್ ನಗರಗಳ ಮಹಿಳೆಯರ ವಿರುದ್ಧದ ದೌರ್ಜನ್ಯದ ಒಟ್ಟು ಅಪರಾಧಗಳಲ್ಲಿ 32.20 ರಷ್ಟು ದೆಹಲಿ ನಗರವೊಂದರಲ್ಲೇ ಘಟಿಸುತ್ತಿದೆ. ದೆಹಲಿಯ ನಂತರದ ಸ್ಥಾನದಲ್ಲಿ 5,543 ಪ್ರಕರಣ ಗಳೊಂದಿಗೆ ಮುಂಬೈ ಮತ್ತು 3,127 ಪ್ರಕರಣಗಳೊಂದಿಗೆ ಬೆಂಗಳೂರು ನಗರಗಳು ಇವೆ. ಅಂದರೆ ಒಟ್ಟು ಪ್ರಕರಣಗಳಲ್ಲಿ ಮುಂಬೈಯ ಪಾಲು 12.76 ಆದರೆ ಬೆಂಗಳೂರಿನದ್ದು 7.2
ದೆಹಲಿಯು ಅಪ್ರಾಪ್ತರ ಅತ್ಯಾಚಾರ ಮಾತ್ರವಲ್ಲದೆ ಮಹಿಳೆಯರಿಗೆ ಸಂಬಂಧಿಸಿದಂತೆ ಇತರ ದೌರ್ಜನ್ಯಗಳಾದ ಅಪಹರಣ (3948), ಗಂಡಂದಿರ ಹಿಂಸೆ (4674) ಮತ್ತು ಹುಡುಗಿಯರ ಅತ್ಯಾಚಾರ (833)ಗಳಲ್ಲೂ ಇತರ ಮೆಟ್ರೋಪಾಲಿಟನ್ ಸಿಟಿಗಳಿಗೆ ಹೋಲಿಸಿದರೆ 2021ರಲ್ಲಿ ಮುಂದಿದೆ ಎಂದು ಎನ್ಸಿಆರ್ಬಿ ವರದಿಯು ಹೇಳುತ್ತದೆ.

2021ರಲ್ಲಿ ಎಲ್ಲಾ 19 ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂದಿಸಿದಂತೆ ದಾಖಲಾದ ಒಟ್ಟು ಪ್ರಕರಣಗಳು 43,414. ಅವುಗಳಲ್ಲಿ 13982 ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿದೆ.
2021 ರಲ್ಲಿ ರಾಷ್ಟ್ರರಾಜಧಾನಿಯು ವರದಕ್ಷಿಣೆ ಸಾವಿನ 136 ಪ್ರಕರಣಗಳನ್ನು ದಾಖಲಿಸಿದೆ, ಇದು 19 ಮೆಟ್ರೋಪಾಲಿಟನ್ ನಗರಗಳಲ್ಲಿ ದಾಖಲಾದ ಪ್ರಕರಣದ ಶೇಕಡಾ 36.26 ರಷ್ಟು. ಎಲ್ಲಾ ನಗರಗಳಲ್ಲಿ ಒಟ್ಟು 8664 ಮಹಿಳೆಯರ ಅಪಹರಣ ಪ್ರಕರಣಗಳು ದಾಖಲಾದರೆ ದೆಹಲಿ ನಗರವೊಂದರಲ್ಲೇ 3948 ಪ್ರಕರಣಗಳು ದಾಖಲಾಗಿವೆ.
ಮಹಿಳೆಯರ ಘನತೆಯನ್ನು ಹಾಳು ಮಾಡುವ ಉದ್ದೇಶದಿಂದ 2022 ಮಹಿಳೆಯರ ಮೇಲೆ 2021ರಲ್ಲಿ ದಾಳಿ ಮಾಡಲಾಗಿದೆ ಎನ್ನುತ್ತದೆ ವರದಿ. ದೆಹಲಿಯಲ್ಲಿ ಕಳೆದ ವರ್ಷ ಪೋಕ್ಸೋ ಕಾಯಿದೆಯಡಿಯಲ್ಲಿ 1,357 ಪ್ರಕರಣಗಳು ದಾಖಲಾಗಿವೆ ಎಂದು ಎನ್ಸಿಆರ್ಬಿ ವರದಿ ಹೇಳಿದೆ.






