ಅದಾನಿ ಮೀಡಿಯಾ ಗ್ರೂಪ್ ಎನ್‌ಡಿಟಿವಿ ಚಾನೆಲ್ ನ ಶೇಕಡಾ 29.18 ಪಾಲನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಪಸರಿಸಿದ ನಂತರ ರವೀಶ್ ಕುಮಾರ್ ಎನ್‌ಡಿಟಿವಿಗೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಯೂ ಸಹ ವ್ಯಾಪಕವಾಗಿ ಚರ್ಚೆಯಾಗಿತ್ತು. ಈ ಊಹಾಪೋಹಗಳ ನಡುವೆ, ಸುದ್ದಿ ನಿರೂಪಕ ರವೀಶ್ ಕುಮಾರ್ ಅವರು ಟ್ವೀಟ್ ಮೂಲಕ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ರವೀಶ್ ತಮ್ಮ ಟ್ವೀಟ್ ನಲ್ಲಿ, “ಗೌರವಾನ್ವಿತರೇ, ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸಂದರ್ಶನ ನೀಡಲು ಒಪ್ಪಿದ್ದಾರೆ ಮತ್ತು ಅಕ್ಷಯ್ ಕುಮಾರ್ ಅವರು ಬಾಂಬೆ ಮಾವಿನ ಹಣ್ಣುಗಳೊಂದಿಗೆ ಗೇಟ್‌ನಲ್ಲಿ ನನಗಾಗಿ ಕಾಯುತ್ತಿದ್ದಾರೆ ಎಂಬ ವದಂತಿಯಂತೆ ನನ್ನ ರಾಜೀನಾಮೆಯ ಕುರಿತಾದ ಸುದ್ದಿಗಳು ವದಂತಿಯಾಗಿದೆ. ನಿಮ್ಮ, ರವೀಶ್ ಕುಮಾರ್, ವಿಶ್ವದ ಮೊದಲ ಮತ್ತು ಅತ್ಯಂತ ದುಬಾರಿ ಶೂನ್ಯ TRP ಆಂಕರ್ ಎಂದು ಟ್ವೀಟ್ ಮಾಡಿದ್ದಾರೆ.
ಅದಾನಿ ಎಂಟರ್‌ಪ್ರೈಸಸ್ ಮಂಗಳವಾರ ತನ್ನ ಮಾಧ್ಯಮ ಘಟಕವು ನವದೆಹಲಿ ಟೆಲಿವಿಷನ್ ಲಿಮಿಟೆಡ್‌ನಲ್ಲಿ ಪರೋಕ್ಷವಾಗಿ ಶೇಕಡಾ 29.18 ಪಾಲನ್ನು ಖರೀದಿಸಲಿದೆ ಮತ್ತು ಮೀಡಿಯಾ ಹೌಸ್‌ನಲ್ಲಿ ಶೇ 26ರಷ್ಟು ಪಾಲನ್ನು ಖರೀದಿಸಲು ಓಪನ್ ಆಫರ್ ನೀಡಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎನ್‌ಡಿಟಿವಿ ಲಿಮಿಟೆಡ್ ಮಾಲೀಕತ್ವದ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಮಾಲೀಕತ್ವದ ಬದಲಾವಣೆ ಅಥವಾ ಯಾವುದೇ ರೀತಿಯ ಪಾಲುದಾರಿಕೆ, ಅನ್ಯಸಂಸ್ಥೆಯಿಂದ ಹೂಡಿಕೆ, ಯಾವುದೇ ಘಟಕದೊಂದಿಗೆ ಕೈಜೋಡಿಸುವುದರ ಬಗ್ಗೆ ಕೂಡಾ ಚರ್ಚೆಯಾಗಿಲ್ಲ. ಸಂಸ್ಥಾಪಕ-ಪ್ರವರ್ತಕರು, ರಾಧಿಕಾ ಮತ್ತು ಪ್ರಣಯ್ ರಾಯ್, ಇಬ್ಬರೂ ಪತ್ರಕರ್ತರಾಗಿದ್ದು, ಕಂಪನಿಯ ಶೇ 61.45 ಪಾಲನ್ನು ಹೊಂದಿದ್ದಾರೆ ಮತ್ತು ಅದರ ನಿಯಂತ್ರಣದಲ್ಲಿರುತ್ತಾರೆ, ಇದರಲ್ಲಿ ಯಾವುದೇ ಬದಲಾವಣೆಯಿಲ್ಲ” ಎಂದು ಸಂಸ್ಥೆ ಸ್ಪಷ್ಪನೆ ನೀಡಿದೆ. ಇದರ ಬೆನ್ನಲ್ಲೇ ರವೀಶ್ ಈ ರೀತಿ ಟ್ವೀಟ್ ಮಾಡಿದ್ದಾರೆ.