ರಾಜ್ಯದಲ್ಲಿರುವ ಕೈಗಾರಿಕೆಗಳು ಉದ್ಯೋಗ ನೀಡುವಾಗ ಕನ್ನಡಿಗ ಪ್ರತಿಭಾವಂತ ಯುವಜನರನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಲಹೆ ನೀಡಿದ್ದಾರೆ.
ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಘಟಕಕ್ಕೆ ಸೋಮವಾರ ಭೇಟಿ ನೀಡಿ ಕಂಪನಿಯ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಹೆಚ್.ಡಿ.ಕೆ ಕಂಪನಿಯಲ್ಲಿ ಸ್ಥಳೀಯ ಪ್ರತಿಭಾವಂತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಹಾಗೂ ಅನಗತ್ಯವಾಗಿ ಹೊರರಾಜ್ಯದವರನ್ನು ಕರೆತಂದು ತುಂಬಿಸಬಾರದು ಎಂದು ಸಲಹೆ ನೀಡಿದ್ದಾರೆ.
ಹೊಸ ಘಟಕ ಸ್ಥಾಪನೆ ಹಾಗೂ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಯುವಕರನ್ನೇ ಪರಿಗಣಿಸಬೇಕು. ಕನ್ನಡಿಗರಿಗೆ ಅನ್ಯಾಯ ಆಗುವುದನ್ನು ಸಹಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ನೇರ ಮಾತುಗಳಲ್ಲಿ ಕಂಪನಿ ಅಧಿಕಾರಿಗಳಿಗೆ ಹೇಳಿದ್ದಾರೆ.
ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಇದ್ದು, ಪ್ರತಿಭಾವಂತ ಮಾನವ ಸಂಪನ್ಮೂಲ ಲಭ್ಯವಿದೆ. ಹೀಗಾಗಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಬೇಕು ಎಂದಿದ್ದಾರೆ.
ಈ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಜುನಾಥ್, ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ರಾಜು ಕೆರಕಲೆ ಮತ್ತು ಸ್ವಪ್ನೇಶ್ ಮಾರು, ಉಪಾಧ್ಯಕ್ಷರಾದ ಶಂಕರ್ ಮತ್ತು ವಿನಯ್ ಹಾಗೂ ಕಾರ್ಯನಿರ್ವಾಹಕ ಸಲಹೆಗಾರ ಪರಶುರಾಮ್ ಮುಂತಾದವರು ಉಪಸ್ಥಿತರಿದ್ದರು.
ಸಭೆಗೂ ಮುನ್ನ ಟೊಯೊಟಾ ಕಿರ್ಲೋಸ್ಕರ್ ಕಾರು ತಯಾರಿಕಾ ಘಟಕ ವೀಕ್ಷಿಸಿದರು. ಫಾರ್ಚುನರ್, ಇನ್ನೋವಾ ಹಾಗೂ ಟೊಯೊಟಾ ಹೈಬ್ರಿಡ್ ಎಲೆಕ್ಟ್ರಿಕ್ ಕಾರುಗಳ ತಯಾರಿಕೆ ಘಟಕಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಅಲ್ಲದೆ, ಅಲ್ಲಿನ ತಾಂತ್ರಿಕ ಮಾಹಿತಿ, ಉದ್ಯೋಗಿಗಳಿಗೆ ನೀಡಲಾಗಿರುವ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ವಿವರ ಪಡೆದುಕೊಂಡರು. ಟೊಯೋಟಾ ಕಿರ್ಲೋಸ್ಕರ್ ಕೈಗಾರಿಕಾ ಕ್ಯಾಂಪಸ್ಸಿನಲ್ಲಿ ನಿರ್ಮಿಸಲಾಗಿರುವ ಇಕೋ ಝೋನ್ಗೂ ಭೇಟಿ ನೀಡಿದರು.
ಬಿಡದಿ ಕೈಗಾರಿಕೆ ಸಂಘದ ಕಚೇರಿಗೂ ಅವರು ಭೇಟಿ ನೀಡಿ ಸಂಘದ ಆಡಳಿತ ಮಂಡಳಿ ಸದಸ್ಯರ ಜತೆ ಮಾತುಕತೆ ನಡೆಸಿದರು.