ಇಡೀ ಬೆಂಗಳೂರಿಗೆ ನೀರು ಹಂಚುವ BWSSBಗೆ ಸರ್ಕಾರಿ ಸಂಸ್ಥೆಗಳಿಂದಲೇ ಕೋಟಿ ಕೋಟಿ ರೂಪಾಯಿ ವಾಟರ್ ಬಿಲ್ ಬಾಕಿ ಬರುವುದಿದೆ. ಇದರಲ್ಲಿ ನಮ್ಮ ಬಿಬಿಎಂಪಿಯೂ ಜಲ ಮಂಡಳಿಗೆ ಕೋಟಿಗಟ್ಟಲೆ ಹಣ ಪಾವತಿ ಬಾಕಿ ಉಳಿಸಿಕೊಂಡಿದೆ. ಆದರೆ ಬಿಬಿಎಂಪಿ ಬಿಲ್ ಬಾಕಿ ಮೊತ್ತಕ್ಕಿಂತ ಅದಕ್ಕೆ ಬಿದ್ದಿರುವ ಬಡ್ಡಿ ಮೊತ್ತವೇ ಹೆಚ್ಚಾಗಿದೆ. ಈ ಮೂಲಕ ಪಾಲಿಕೆ ಜನರ ತೆರಿಗೆ ಹಣವನ್ನು ಸುಖಾಸುಮ್ಮನೆ ಪೋಲು ಮಾಡುತ್ತಿದೆ.
ಬಾಕಿ ಮೊತ್ತಕ್ಕಿಂತ ಬಿದ್ದಿರುವ ಬಡ್ಡಿಯೇ ಹೆಚ್ಚು.. ತೆರಿಗೆ ಹಣ ಪೋಲು
BWSSB ಗೆ ಸರ್ಕಾರದ ಸಂಸ್ಥೆಗಳ ಉಡಾಫೆಯಿಂದ ಭಾರೀ ಹೊರೆ ಅನುಭವಿಸುತ್ತಿದೆ. ಜಲ ಮಂಡಳಿಗೆ ಬಿಬಿಎಂಪಿ ಸೇರಿದಂತೆ ಹಲವು ಸರ್ಕಾರಿ ಅಧೀನದ ಇಲಾಖೆಗಳಿಂದ ಕೋಟಿ ಕೋಟಿಗಟ್ಟಲೆ ಹಣ ಬರುವುದು ಬಾಕಿ ಇದೆ. ಬಿಬಿಎಂಪಿ ಅಧಿಕಾರಿಗಳು ಜನರ ತೆರಿಗೆ ಬಾಕಿ ಇದ್ರೆ ಬಾಗಿಲಿಗೆ ಬೀಗ, ಸೆಸ್ ಬಾಕಿ ಇದ್ರೂ ಕಿರಿಕಿರಿ ಕೊಡುತ್ತೆ. ಆದರೆ ಐನೂರು, ಸಾವಿರ ಬಿಲ್ ಕಟ್ಟದ ಜನರ ಮೇಲೆ ಗರಂ ಆಗೋ ಬಿಬಿಎಂಪಿ ಇಂದಲೇ ಕೋಟಿ ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಜಲ ಮಂಡಳಿಗೆ ಬಿಬಿಎಂಪಿ ಬರೊಬ್ಬರಿ 6.40 ಕೋಟಿ ಬಿಲ್ ಬಾಕಿ ಹಾಗೂ ಇದಕ್ಕೆ ಬಿದ್ದಿರುವ 12.80 ಕೋಟಿ ಬಡ್ಡಿ ಸೇರಿದಂತೆ ಒಟ್ಟಾರೆ ಬಿಬಿಎಂಪಿಯಿಂದ BWSSBಗೆ 19.20 ಕೋಟಿ ರೂಪಾಯಿ ಬಾಕಿ ಇದೆ.
ಬಿಬಿಎಂಪಿ ಜೊತೆಗೆ ಇನ್ನೂ ಹಲವು ಇಲಾಖೆಗಳು ನೀರಿ ಬಿಲ್ ಕಟ್ಟಲು ಮೀನಾಮೇಷ ಎಣಿಸುತ್ತಿದೆ. ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣೆಯ ಶುಲ್ಕವೇ ಜಲಮಂಡಳಿಯ ಆದಾಯ ಮೂಲ. ಆದರೆ ಜಲಮಂಡಳಿಗೆ ವಿವಿಧ ಸರ್ಕಾರಿ ಇಲಾಖೆಗಳು ನೂರಾರು ಕೋಟಿ ಬಾಕಿ ಉಳಿಸಿಕೊಂಡಿರುವುದು ಹೊರೆಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅಧೀನದಲ್ಲಿರುವ ಇಲಾಖೆಗಳಿಂದ ಜಲಮಂಡಳಿಗೆ ಬಿಲ್ ಬಾಕಿ ಉಳಿಸಿಕೊಂಡಿದೆ. 147 ಕೋಟಿ ರೂಪಾಯಿ ಒಟ್ಟಾರೆ ಜಲ ಮಂಡಳಿಗೆ ಬೊಕ್ಕಸಕ್ಕೆ ಬರಬೇಕಿದೆ. ಕೇಂದ್ರ ಸರ್ಕಾರ ವ್ಯಾಪ್ತಿಗೆ ಒಳಪಡುವ ಸಂಸ್ತೆಗಳಿಂದ 21.75 ಕೋಟಿ, ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಂಸ್ಥೆಗಳಿಂದ 71.61 ಕೋಟಿ ರೂಪಾಯಿ ಬಾಕಿ ಇದೆ.
ವಾಟರ್ ಬಿಲ್ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳು
ಇಲಾಖೆಗಳು – ಬಾಕಿ – ಬಡ್ಡಿ – ಒಟ್ಟು ಮೊತ್ತ (ಕೋಟಿ ರೂ.)
ಕೇಂದ್ರ ಸರಕಾರ – 15.97 – 3.19 – 21.75
ರಾಜ್ಯ ಸರಕಾರ – 45.92 – 24.69 – 71.61
ಬಿಬಿಎಂಪಿ – 6.40 – 12.80 – 19.20
ಶಾಸನಬದ್ಧ ಸಂಸ್ಥೆಗಳು – 4.76 – 3.15 – 8.39
ಪೊಲೀಸ್ ಇಲಾಖೆ – 49.73 ಕೋಟಿ ರೂ.
ರೈಲ್ವೆ ಇಲಾಖೆ – 18.73 ಕೋಟಿ ರೂ.
ಶಿಕ್ಷಣ ಇಲಾಖೆ – 9.58 ಕೋಟಿ ರೂ.
ಆರೋಗ್ಯ ಇಲಾಖೆ – 3.38 ಕೋಟಿ ರೂ.
ಲೋಕೋಪಯೋಗಿ -3.64 ಕೋಟಿ ರೂ.
12.80 ಕೋಟಿ ರೂಪಾಯಿ ಜನರ ತೆರಿಗೆ ಪೋಲು ಮಾಡಿದ ಬಿಬಿಎಂಪಿ
ಜಲ ಮಂಡಳಿಗೆ ಬಿಬಿಎಂಪಿ ಬಿಲ್ ಕಟ್ಟಬೇಕಿರುವುದು 6.40 ಕೋಟಿ ರೂಪಾಯಿ. ಆದರೆ ಸರಿಯಾದ ಸಮಯಕ್ಕೆ ಕಟ್ಟದೆ ಇದ್ದಿದ್ದರಿಂದ ಬಾಕಿ ಮೊತ್ತಕ್ಕೆ ಬರೋಬ್ಬರಿ 12 ಕೋಟಿ 80 ಲಕ್ಷ ರೂಪಾಯಿ ಬಡ್ಡಿ ಬಿದ್ದಿದೆ. ಇದೀಗ ಬಿಬಿಎಂಪಿ 12.80 ಕೋಟಿ ಬಡ್ಡಿ ಮೊತ್ತವನ್ನು ಜನರ ತೆರಿಗೆ ಹಣದಿಂದಲೇ ಪಾವತಿ ಮಾಡಬೇಕು. ಈ ಮೂಲಕ ಬಿಬಿಎಂಪಿ ಜನರ ದುಡ್ಡನ್ನು ಅನಗತ್ಯ ವ್ಯರ್ಥ ಮಾಡುತ್ತಿದೆ. ಒಟ್ಟಾರೆ ಈಗ ಬಿಬಿಎಂಪಿ 19 ಕೋಟಿ 20 ಲಕ್ಷ ರೂಪಾಯಿ ಜಲ ಮಂಡಳಿಗೆ ಪಾವತಿ ಮಾಡಬೇಕಾಗಿರುವ ಅನಿವಾರ್ಯ ಎದುರಾಗಿದೆ.