ದೇಶದಲ್ಲಿ ಮುಂದಿನ ತಿಂಗಳು 5ಜಿ ಸೇವೆ ಆರಂಭವಾಗುವ ಸಾಧ್ಯತೆ ಇದ್ದು, ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ 13 ಸ್ಥಳಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಬೆಂಗಳೂರು, ಚೆನ್ನೈ, ದಿಲ್ಲಿ, ಕೋಲ್ಕತಾ, ಮುಂಬೈ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಚಂಡಿಗಢಜಾಮ್ನಗರ, ಲಕ್ನೋ, ಅಹ್ಮದಾಬಾದ್ ಹಾಗೂ ಪುಣೆ ಸೇರಿದಂತೆ 13 ನಗರಗಳಲ್ಲಿ ಆರಂಭವಾಗಲಿದೆ ಎಂದು ವರದಿಗಳು ಹೇಳಿವೆ.
ಭಾರತದಟೆಲಿಕಾಂ ಕಂಪೆನಿಗಳಾದ ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವಿಐ ಈಗಾಗಲೇ ದೇಶದಲ್ಲಿ ತಮ್ಮ 5ಜಿ ಸೇವೆಯನ್ನು ಆರಂಭಿಸಲುಬೇಕಾದ ಹಾರ್ಡ್ವೇರ್ ಕೆಲಸದಲ್ಲಿ ನಿರತವಾಗಿದ್ದು, ಮುಂದಿನ ತಿಂಗಳು ಬಹುತೇಕ ನಗರಗಳಲ್ಲಿ 5ಜಿ ಸೇವೆ ಅನುಭವಿಸಲು ಗ್ರಾಹಕರಿಗೆ ಅವಕಾಶವಿದೆ ಎನ್ನಲಾಗಿದೆ.
ಕೇಂದ್ರ ಸರಕಾರ ಇತ್ತೀಚೆಗೆ 5ಜಿ ಸ್ಪೆಕ್ಟ್ರಂ ಹರಾಜನ್ನು ಪೂರ್ಣಗೊಳಿಸಿದ್ದು,ಈಗಾಗಲೇ ಅನುಮೋದನೆ ಪ್ರಕ್ರಿಯೆಯಲ್ಲಿ ಇದೆ. ಭಾರತದ 5ಜಿ ಸ್ಪೆಕ್ಟ್ರಂ ಹರಾಜು 1.5 ಲಕ್ಷ ಕೋಟಿ ಮೌಲ್ಯದ್ದಾಗಿದ್ದು, ಬಿಡ್ ಮೂಲಕ ಟೆಲಿಕಾಂ ನೆಟ್ವರ್ಕ್ಗಳಿಗೆ ತರಂಗ ಗುಚ್ಛವನ್ನು ಮಂಜೂರು ಮಾಡಲಾಗಿತ್ತು.
ಇದಲ್ಲದೆ, ಅಂದು ಹರಾಜು ಪ್ರಕ್ರಿಯೆಯಲ್ಲಿ ಮೂರು ಪ್ರಮುಖ ಟೆಲಿಕಾಂ ಕಂಪೆನಿಗಳಾದ ರಿಲಾಯನ್ಸ್ ಜಿಯೊ, ಏರ್ಟೆಲ್, ವಿಐ ಮಾತ್ರವಲ್ಲದೆ ಅದಾನಿ ಡಾಟಾ ನೆಟ್ ವರ್ಕ್ ಕೂಡ ಪಾಲ್ಗೊಂಡಿತ್ತು.
ಅದಾಗ್ಯೂ5ಜಿಯನ್ನು ಲೋಕಾರ್ಪಣೆಗೊಳಿಸುವ ದಿನಾಂಕವನ್ನು ಕೇಂದ್ರ ಸರಕಾರ ಇದುವರೆಗೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಟೆಲಿಕಾಂ ಸಚಿವರು, 5ಜಿ ಬಿಡುಗಡೆ ಸರಿಸುಮಾರು ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ ಎಂದಿದ್ದಾರೆ.
ಈ ಹಿಂದೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ವರ್ಷದ ಅಂತ್ಯದ ಒಳಗೆ 5ಜಿ ಸೇವೆಗಳನ್ನು ಎಲ್ಲರಿಗೂ ಪರಿಚಯಿಸಲಾಗುವುದು ಎಂದು ಹೇಳಿದ್ದರು. ಆದರೆ, ದಿ ಹಿಂದೂ’ ಹಾಗೂ ‘ಬ್ಯುಸಿನಸ್ ಲೈನ್’ನ ವರದಿ ಪ್ರಕಾರ ಸೆಪ್ಟಂಬರ್ 19ರಂದು ನಡೆಯಲಿರುವ ಭಾರತದ ಮೊಬೈಲ್ ಸಮಾವೇಶ (ಐಎಂಸಿ)ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ನೆಟ್ವರ್ಕ್ ಅನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ.
ಆಗಸ್ಟ್ ಅಂತ್ಯದ ಒಳಗೆ ಭಾರತದಲ್ಲಿ 5 ಜಿ ನೆಟ್ವರ್ಕ್ ಅನ್ನು ಆರಂಭಿಸಲಾಗುವುದು ಎಂದು ಭಾರ್ತಿ ಏರ್ಟೆಲ್ ಈಗಾಗಲೇ ಹೇಳಿದ್ದು,ರಿಲಾಯನ್ಸ್ ತನ್ನ 5ಜಿ ಸೇವೆಯನ್ನು ಆಗಸ್ಟ್ 15ರಂದು ಆರಂಭಿಸಲಿದೆ ಎಂದು ಹೇಳಿದೆ.