ನೀರಿನ ಬಾಟಲ್ ವಿಷಯದಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ರೈಲ್ವೆ ಸಿಬ್ಬಂದಿ ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೊಬ್ಬನನ್ನು ಹೊರಗೆ ಎಸೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜಾನ್ಸಿ ಬಳಿ ನಡೆದಿದೆ.
ರಪ್ಟಿ ಸಾಗರ್ ಎಕ್ಸ್ ಪ್ರೆಸ್ (12591) ರೈಲಿನಲ್ಲಿ ಈ ಘಟನೆ ನಡೆದಿದ್ದು, ಸೋದರಿ ಜೊತೆ ಪ್ರಯಾಣಿಸುತ್ತಿದ್ದ ರವಿ ಯಾದವ್ (26) ಎಂಬ ಪ್ರಯಾಣಿಕನ್ನು ರೈಲ್ವೆ ಸಿಬ್ಬಂದಿ ಹೊರಗೆ ಎಸೆದಿದ್ದಾರೆ. ಇದರಿಂದ ರವಿ ಯಾದವ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿರೊಲಿ ಗ್ರಾಮದ ಬಳಿ ರೈಲು ಬಂದಾಗ ರವಿ ಯಾದವ್ ಮತ್ತು ರೈಲ್ವೆ ಸಿಬ್ಬಂದಿ ನಡುವೆ ನೀರಿನ ಬಾಟಲ್ ಮತ್ತು ಪಾನ್ ಮಾಸಾಲಾ ಪ್ಯಾಕೆಟ್ ಖರೀದಿ ವಿಷಯದಲ್ಲಿ ಜಗಳ ಉಂಟಾಯಿತು. ಲಿಲಿತ್ ಪುರ್ ನಿಲ್ದಾಣದಲ್ಲಿ ಸೋದರಿ ಇಳಿಯಬೇಕಿತ್ತು. ಆದರೆ ರೈಲ್ವೆ ಸಿಬ್ಬಂದಿ ಇಳಿಯಲು ಬಿಡದೇ ಹಿಡಿದಿಟ್ಟುಕೊಂಡಿದ್ದರು. ನಂತರ ರೈಲು ಚಲಿಸುತ್ತಿದ್ದಾಗ ಹಲ್ಲೆ ಮಾಡಿ ಮತ್ತೊಂದು ರೈಲ್ವೆ ಹಳಿ ಮೇಲೆ ಎಸೆದಿದ್ದಾರೆ.
ಸ್ಥಳೀಯರು ಕೂಡಲೇ ರವಿ ಯಾದವ್ ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ರವಿ ಯಾದವ್ ನೀಡಿದ ದೂರಿನ ಅನ್ವಯ ರೈಲ್ವೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.