ಕನ್ನಡದ ಯುವ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಚಂದನ್ ಅಲಿಯಾಸ್ ಚಂದನ್ ಕುಮಾರ್ ಮೇಲೆ ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಹಲ್ಲೆ ನಡೆದಿದೆ.
ಹೈದರಾಬಾದ್ ನಲ್ಲಿ ಶ್ರೀಮತಿ ಶ್ರೀನಿವಾಸ್ ತೆಲುಗು ಧಾರವಾಹಿಯ ಚಿತ್ರೀಕರಣದ ವೇಳೆ ಧಾರವಾಹಿಯ ಸಿಬ್ಬಂದಿಯೊಬ್ಬ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಜುಲೈ ೩೧ರಂದು ಈ ಘಟನೆ ನಡೆದಿರುವುದಾಗಿ ಚಂದನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ಸಣ್ಣ ವಿಷಯಕ್ಕೆ ಕ್ಯಾಮರಾಮನ್ ಮೇಲೆ ನಾನು ಕೋಪಗೊಂಡಿದ್ದರಿಂದ ಅವನು ಯಾರನ್ನೋ ಕರೆದುಕೊಂಡು ಬಂದು ಕೆಟ್ಟದಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ನಾನು ಅಲ್ಲಿಯೇ ಮರೆತಿದ್ದು, ವಿಷಯದ ದೊಡ್ಡದು ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಅಮ್ಮನಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದರಿಂದ ನಾನು ಅದೇ ಯೋಚನೆಯಲ್ಲಿದ್ದೆ. ಈ ಒತ್ತಡದ ನಡುವೆಯೂ ನಾನು ಚಿತ್ರೀಕರಣಕ್ಕಾಗಿ ಹೈದರಾಬಾದ್ ಗೆ ಬಂದಿದ್ದೆ. ಆದರೆ ಸರಿಯಾದ ರೀತಿಯಲ್ಲಿ ಶೂಟಿಂಗ್ ಆಗಲಿಲ್ಲ. ಧಾರವಾಹಿಯ ಸಹಾಯಕ ನಿರ್ದೇಶಕ ರಂಜಿತ್ ಸ್ವಲ್ಪ ತರಲೆ. ಭಾನುವಾರ ಮಧ್ಯಾಹ್ನ ನಾನು ವಿಶ್ರಾಂತಿ ಪಡೆಯುತ್ತಿದ್ದಾಗ ಪದೇಪದೆ ಬಂದು ನನ್ನನ್ನು ಕರೆಯುತ್ತಿದ್ದ. ಸ್ವಲ್ಪ ತಲೆನೋವಿದೆ ಬರುತ್ತೇನೆ ಎಂದು ಹೇಳಿ ಕಳುಹಿಸಿದ್ದೆ.
ಅವನನ್ನು ಎಬ್ಬಿಸೋ ಎಂದು ನನ್ನ ಸಹಾಯಕರ ಬಳಿ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ನಾನು ಅದನ್ನು ಪ್ರಶ್ನಿಸಿದೆ. ಇದೇ ಆವೇಶದಲ್ಲಿ ಅವನನ್ನು ತಳ್ಳಿದೆ. ಇದನ್ನೇ ಹಲ್ಲೆ ಎಂದು ಆತ ನನ್ನ ಮೇಲೆ ನಿರ್ದೇಶಕರ ಬಳಿ ಹೇಳಿದಾಗ ಈ ಘಟನೆ ನಡೆಯಿತು. ಇದನ್ನು ಮುಂದುವರಿಸಲು ನಾನು ಇಚ್ಚಿಸುವುದಿಲ್ಲ ಎಂದು ಚಂದನ್ ವಿವರ ನೀಡಿದ್ದಾರೆ.