ಭಾರೀ ಮಳೆಯಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯಲ್ಲಿ ಇದೀಗ ಇಲಿಜ್ವರ ಭೀತಿ ಆವರಿಸಿದ್ದು, ಉಡುಪಿ ಜಿಲ್ಲೆಯಲ್ಲಿ 85 ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.
ಜಿಲ್ಲೆಯ 85 ಮಂದಿಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲಿ ಜ್ವರ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಜಿಲ್ಲಾಡಳಿತ ಅಗತ್ಯ ಕ್ರಮಗಳತ್ತ ಗಮನ ಹರಿಸಿದೆ.
ಇಲಿಗಳ ಮಲಮೂತ್ರದಿಂದ ಹರಡುವ ಸೋಂಕಾಗಿದೆ. ಮಲೆನಾಡಿನ ತಪ್ಪಲಿನಲ್ಲಿ ಹೆಚ್ಚು ಜನಕ್ಕೆ ಇಲಿಜ್ವರ ಕಾಣಿಸಿಕೊಂಡಿದೆ. ಕುಂದಾಪುರ 40, ಉಡುಪಿ 32, ಕಾರ್ಕಳ 13 ಪ್ರಕರಣ ವರದಿಯಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಈ ಜ್ವರ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಇಲಿಗಳು ಜೀವನ ಪರ್ಯಂತ ಮೂತ್ರದಲ್ಲಿ ರೋಗಾಣುಗಳನ್ನು ವಿಸರ್ಜಿಸುತ್ತಿರುತ್ತವೆ. ಇಂತಹ ಇಲಿಗಳ ಮೂತ್ರದ ಸಂಪರ್ಕಕ್ಕೆ ಬರುವ ಮನುಷ್ಯ, ಪ್ರಾಣಿಗಳಿಗೆ ಸೋಂಕು ತಗಲುತ್ತದೆ. ಹಾಗೆಯೇ ರೋಗಪೀಡಿತ ಪ್ರಾಣಿಗಳ ಮೂತ್ರದ ಮೂಲಕವೂ ಈ ಕಾಯಿಲೆ ಹರಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಹರಡುವುದಿಲ್ಲ.
ಮಣ್ಣಿಗೆ ಸೇರಿದ ರೋಗಾಣುಗಳು ಸುಮಾರು 6 ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ೬ ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ, ನೆರೆ ಬಂದಾಗ ಈ ರೋಗದ ಹಾವಳಿ ಜಾಸ್ತಿ. ಪಾದದ ಚರ್ಮದಲ್ಲಿನ ಬಿರುಕುಗಳು, ಒಡೆದ ಹಿಮ್ಮಡಿ, ಗಾಯಗಳ ಮೂಲಕ ರೋಗಾಣುಗಳು ದೇಹ ಪ್ರವೇಶಿಸಬಹುದು.
ಇಲಿ ಮೂತ್ರದಿಂದ ಕಲುಷಿತ ನೀರು, ಆಹಾರದ ಮೂಲಕವೂ ದೇಹ ಸೇರುವ ಕ್ರಿಮಿಗಳು ಬಾಯಿ, ಗಂಟಲು, ಅನ್ನನಾಳದ ಮೂಲಕ ಒಳ ಪ್ರವೇಶಿಸುತ್ತವೆ. ಕಣ್ಣು, ಕಿವಿಯ ಮೂಲಕವೂ ರೋಗಾಣುಗಳು ಶರೀರ ಸೇರಬಹುದು. ಸಾಮಾನ್ಯವಾಗಿ ಸೋಂಕು ತಗುಲಿದ ಎರಡು ದಿನಗಳಿಂದ ಎರಡು ಮೂರು ವಾರಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.