ಯಾವುದೇ ವಿದೇಶ ಪ್ರಯಾಣದ ಇತಿಹಾಸ ಇಲ್ಲದಿರುವ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿರುವ ಪ್ರಕರಣ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರದಿಯಾಗಿದೆ.
34ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ಇದು ದೇಶದಲ್ಲಿ ಒಟ್ಟಾರೆ ನಾಲ್ಕನೇ ಪ್ರಕರಣವಾಗಿದೆ. ಸೋಂಕಿತ ವ್ಯಕ್ತಿಯೂ ಇತ್ತೀಚಿಗೆ ಹಿಮಾಚಲ ಪ್ರದೇಶದಲ್ಲಿರುವ ಮನಾಲಿಯಲ್ಲಿ ನಡೆದ ಸ್ಟಾಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಪಶ್ಚಿಮ ದೆಹಲಿಯಲ್ಲಿ ನಿವಾಸಿಯಾಗಿರುವ ಸೋಂಕಿತ ವ್ಯಕ್ತಿಗೆ ಮೂರ ದಿನಗಳ ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯನ್ನು ದೆಹಲಿಯ ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಮಾದರಿಗಳನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(NIV)ಗೆ ಕಳುಹಿಸಲಾಗಿತ್ತು.

ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರವರನ್ನು ಪ್ರತ್ಯೇಕವಾಗಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಮಂಕಿಪಾಕ್ಸ್ ಮೊದಲ ಮೂರು ಪ್ರಕರಣಗಳು ಕೇರಳದಲ್ಲಿ ಪತ್ತೆಯಾಗಿದ್ದವು. ಪ್ರತಿನಿತ್ಯ ವಿಶ್ವದಾದ್ಯಂತ 16,000 ಕ್ಕು ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು ಈವರೆಗೆ ಐದು ಮಂದಿ ಮೃತಪಟ್ಟಿದ್ದಾರೆ.
ಶನಿವಾರ ವಿಶ್ವ ಆರೋಗ್ಯ ಸಂಸ್ಥೆ(WHO) ಮಂಕಿಪಾಕಸ್ ಖಾಯಿಲೆಯನ್ನು ʻಜಾಗತಿಕ ಆರೋಗ್ಯ ತುರ್ತು ಸ್ಥಿತಿʼ ಎಂದು ಘೋಷಿಸಿತ್ತು.