ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹಿರಿಯ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರು ವೈದ್ಯಕೀಯ ಕಾರಣಗಳಿಗಾಗಿ ಶಾಶ್ವತ ಜಾಮೀನು ನೀಡುವಂತೆ ಕೋರಿ ಗುರುವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ವರವರ ರಾವ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜುಲೈ 11 ರಂದು ನಡೆಸುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ರಜಾಕಾಲದ ಪೀಠ ತಿಳಿಸಿರುವುದಾಗಿ bar&bench.com ವರದಿ ಮಾಡಿದೆ.
ಏಪ್ರಿಲ್ 13 ರಂದು ವೈದ್ಯಕೀಯ ಕಾರಣಗಳಿಗಾಗಿ ಶಾಶ್ವತ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದ ಬಾಂಬೆ ಹೈಕೋರ್ಟ್ನ ಆದೇಶವನ್ನು ರಾವ್ ಪ್ರಶ್ನಿಸಿದ್ದರು. ನಂತರ, ನ್ಯಾಯಾಲಯವು ವರವರ ರಾವ್ ಅವರ ತಾತ್ಕಾಲಿಕ ಜಾಮೀನನ್ನು ಮೂರು ತಿಂಗಳವರೆಗೆ ವಿಸ್ತರಿಸಿತ್ತು. ಆ ವೇಳೆ ಅವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗಿತ್ತು. ಹಿರಿಯ ನಾಗರಿಕರಾಗಿರುವ ಅವರು, ನರ ಸಂಬಂಧಿತ ಕಾಯಿಲೆಗಳು, ಹೊಕ್ಕುಳಿನ ಅಂಡವಾಯು ಮತ್ತು ಲಕ್ಷಣರಹಿತ ಪಾರ್ಕಿನ್ಸನ್ ಕಾಯಿಲೆಯಿಂದ ಉಂಟಾಗುವ ಹೊಟ್ಟೆ ನೋವಿನಿಂದ ಕೂಡ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
2018 ರಲ್ಲಿ ಪುಣೆ ಸಮೀಪದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಜಾತಿ ಹಿಂಸಾಚಾರವನ್ನು ಹುಟ್ಟುಹಾಕಲು ಸಂಚು ರೂಪಿಸಿದ ಆರೋಪದ ಮೇಲೆ UAPA ಕಾಯಿದೆಯಡಿಯಲ್ಲಿ ಬಂಧನಕ್ಕೊಳಗಾದ ಸಾಮಾಜಿಕ ಹೋರಾಟಗಾರರಲ್ಲಿ ವರವರ ರಾವ್ ಕೂಡಾ ಒಬ್ಬರು. ಕಳೆದ ವರ್ಷ ಫೆಬ್ರವರಿಯಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಅವರಿಗೆ ಜಾಮೀನು ನೀಡಲಾಗಿತ್ತು.