ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಿಪಕ್ಷಗಳು ವಿನಾಕಾರಣ ವಿವಾದ ಮಾಡಿದವರು ಎಂದು ಆರೋಪಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಿಂದೆ ತಮಗೆ ಬೇಕಾದಂತೆ ಅಜೆಂಡಾಗಳನ್ನು ತುರುಕಿದ್ದರು. ಆಗ ಯಾವುದೇ ಚರ್ಚೆ ಆಗುತ್ತಿರಲಿಲ್ಲ, ಈ ಬಾರಿ ಮಾತ್ರ ವಿವಾದ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪಠ್ಯ ಚರ್ಚೆಗೆ ಒಳಗಾಗಿದೆ. ಹೆಡೆಗೇವಾರ್ ವಿಚಾರ ಸೇರಿಸಿರುವುದು ಚರ್ಚೆಗೆ ಒಳಗಾಗಿದೆ. ಹಿಡನ್ ಅಜೆಂಡಾ ಇರುವ ಕೆಲವು ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗೀತು ಎಂಬ ಭ್ರಮೆಯಲ್ಲಿದ್ದಾರೆ. ನಾವೆಲ್ಲಾ ವಿವೇಕಾನಂದರ ಫಾಲೋವರ್ಸ್. ಹಿಂದೂ ಎದ್ದರೆ ದೇಶ ಎದ್ದೀತು ಎಂದು ವಿವೇಕಾನಂದ ಹೇಳಿದ್ದರು ಎಂದು ಸಚಿವ ಅಶೋಕ್ ವಿರೋಧಿಗಳಿಗೆ ತಿರುಗೇಟು ನೀಡಿದರು.
ಟಿಪ್ಪು ವರ್ಣನೆ ಮಾಡಿ ಮೈಸೂರು ಒಡೆಯರ ಕಡೆಗಣನೆ ಮಾಡಲಾಗಿದೆ. ಈ ಮೂಲಕ ಮೈಸೂರು ಒಡೆಯರಿಗೆ ಸಿದ್ದರಾಮಯ್ಯ ಕಾಲದಲ್ಲಿ ಅಪಮಾನ ಆಗಿದೆ. ಮಥುರಾ ಶ್ರೀಕೃಷ್ಣ ಮಂದಿರ, ಸೋಮನಾಥ ದೇವಾಲಯದ ಅಂಶ ಕೈ ಬಿಡಲಾಗಿದೆ. ಭಾರತದ ಮಹಾರಾಜರ ಕೊಡುಗೆಗಳನ್ನು ಕಡೆಗಣನೆ ಮಾಡಲಾಗಿದೆ. ಖಿಲ್ಜಿ ಕಾಲದ ಗುಲಾಮಗಿರಿ ಅಂಶ ಕೈಬಿಡಲಾಗಿದೆ. ವಿಜಯನಗರ ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠದ ಹೆಸರು ಮತ್ತು ಕೆಲವು ಅಂಶಗಳಿಗೆ ಕತ್ತರಿ ಹಾಕಿದ್ದಾರೆ. ಗಾಂಧೀಜಿ ಭಾರತ ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಹಾಕಿದ್ದಾರೆ. ಮತೀಯ ಯುದ್ಧಗಳ ಕುರಿತಾದ ಅಂಶಗಳು, ಶಿವಾಜಿ ಮಹಾರಾಜರ ಉಲ್ಲೇಖಕ್ಕೆ ಕತ್ತರಿ ಹಾಕಿದ್ದಾರೆ. ಚಂಗೀಸ್ ಖಾನ್ ಮತ್ತು ತೈಮೂರು ದಾಳಿಗಳ ಅಂಶ ತೆಗೆಯಲಾಗಿದೆ. ರಜಪೂತರ ಗುಣ ಧರ್ಮಗಳನ್ನು ಕೈ ಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಟಿಪ್ಪುವಿನ ಅತಿಯಾದ ವೈಭವೀಕರಣ ಮಾಡಲಾಗಿದೆ ಸರ್ವಾಧಿಕಾರದಿಂದ ರಾಷ್ಟ್ರಪ್ರೀತಿ ಹೆಚ್ಚುತ್ತದೆ ಎಂಬ ಅಂಶವನ್ನು ಸಮಾಜ ವಿಜ್ಞಾನ ಪಾಠದಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಅನಲೆ ಬದಲಾಗಿ ಹಂಸಲೇಖ ಅವರ ಪದ್ಯ ಸೇರಿಸಲಾಯಿತು. ಯೋಗ,ಭಾರತೀಯ ಪರಂಪರೆ ಇರುವ ಪಾಠವನ್ನು ತೆಗೆದು ಹಾಕಲಾಯಿತು. ಕುವೆಂಪು ಬಗ್ಗೆ ಸರ್ಕಾರ ತಾರತಮ್ಯ ಮಾಡಲಾಗಿದೆ ಎಂದು ಇವಾಗ ಆರೋಪ ಮಾಡುತ್ತಿದ್ದಾರೆ. ಆದರೆ ನಾವು ಇವಾಗ ಕುವೆಂಪು ಪಠ್ಯ ಗದ್ಯವನ್ನು ಹತ್ತಕ್ಕೆ ಏರಿಕೆ ಮಾಡಿದ್ದೇವೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆಂಪೇಗೌಡ ಪಾಠ ಅಳವಡಿಸಿರಲಿಲ್ಲ. ಆದರೆ ನಮ್ಮ ಅವಧಿಯಲ್ಲಿ ಕೆಂಪೇಗೌಡರ ಕನಸು ಪಾಠ ಸೇರ್ಪಡೆ ಮಾಡಿದ್ದೇವೆ. ರಾಷ್ಟ್ರ ಧ್ವಜದ ಬಗ್ಗೆ ‘ಏರುತಿಹುದು, ಹಾರುತ್ತಿರುವುದು ನೋಡು ನಮ್ಮ ಬಾವುಟ’ ಎಂಬುವುದನ್ನು ಕಿತ್ತು ಹಾಕಿದ್ದಾರೆ. ಚೆಲುವ ಕನ್ನಡ ನಾಡು ಎಂಬ ಪದ್ಯವನ್ನು ತೆಗೆದು ಹಾಕಲಾಕಿದೆ.

ಸಿದ್ದರಾಮಯ್ಯಗೆ ಟಿಪ್ಪು ಎಂದರೆ ಮೈಮೇಲೆ ಬರುತ್ತದೆ. ಬರಗೂರು ಸಮಿತಿ ಟಿಪ್ಪು ವೈಭವೀಕರಣ ಮಾಡಿ ಮೈಸೂರು ಒಡೆಯರನ್ನು ಕಡೆಗಣಿಸಿದೆ. ಮುಸ್ಲಿಂ ದಾಳಿಕೋರರು ಒಡೆದು ಹಾಕಿದರು ಎಂಬ ಉಲ್ಲೇಖವನ್ನು ತೆಗೆದು ಹಾಕಿದ್ದಾರೆ. ಪೃಥ್ವಿ ರಾಜ್ ಚೌಹಾಣ್, ಘಜ್ನಿ ಮುಹಮ್ಮದ್ ಜೀವದಾನ ಮಾಡಿರುವುದನ್ನು ತೆಗೆದು ಹಾಕಲಾಗಿದೆ. ಬದಲಾಗಿ ಪೃಥ್ವಿ ರಾಜ್ ಚೌಹ್ಹಾಣ್ ಸೋತಿದ್ದಾರೆ ಎಂಬುದನ್ನು ಉಲ್ಲೇಖ ಮಾಡಲಾಗಿದೆ. ಖಿಲ್ಜಿ ಕಾಲದ ಗುಲಾಮಗಿರಿ ಅಂಶ ಕೈಬಿಡಲಾಗಿದೆ. ಮರೆಯಲಾಗದ ವಿಜಯ ನಗರ ಸಾಮ್ರಾಜ್ಯ ಬದಲಾಗಿ ವಿಜಯ ನಗರದ ಅರಸು ಮನೆತನಗಳು ಎಂದು ಉಲ್ಲೇಖ ಮಾಡಲಾಗಿದೆ.
ಭಗತ್ ಸಿಂಗ್,ನಾರಾಯಣ ಗುರು, ಪೆರಿಯಾರ್ ಪಠ್ಯ ಬಿಟ್ಟಿಲ್ಲ. ಟಿಪ್ಪು, ತುಗಲಕ್ ಬಗ್ಗೆ ತೆಗೆದು ಹಾಕಿ, ದೇಶಕ್ಕೆ ಹೋರಾಟ ಮಾಡಿದರನ್ನು ಸೇರಿಸಿದ್ದೇವೆ. ಸಿಂಧೂ ಸಂಸ್ಕೃತಿ ಪಾಠವನ್ನು ಬರಗೂರು ತೆಗೆದು ಹಾಕಿದ್ದರು, ನಾವು ಅದನ್ನು ಸೇರಿಸಿದ್ದೇವೆ. ಭಾರತ ನಮ್ಮ ಹೆಮ್ಮೆ ಎಂಬ ಪಾಠ ಸೇರ್ಪಡೆ ಮಾಡಿದ್ದೇವೆ. ಭಾರತೀಯತೆ ಕುರಿತಾದ ಕೆ.ಎಸ್ ನರಸಿಂಹ ಸ್ವಾಮಿ ‘ಭಾರತೀಯತೆ’ ಪಠ್ಯ ಸೇರ್ಪಡೆ ಮಾಡಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರು ಸೇರ್ಪಡೆ ಮಾಡಲಾಗಿದೆ. ಚೆನ್ನ ಭೈರಾದೇವಿ ಕನ್ನಡ ರಾಣಿಯ ಬಗ್ಗೆ ಪ್ರಥಮ ಬಾರಿ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಸನಾತನ ಧರ್ಮ, ವಿವೇಕಾನಂದ ಜನ್ಮದಿನ, ಸ್ವದೇಶಿ ಸೂತ್ರದ ಸರಳ ಹಬ್ಬದ ಪಾಠ, ನಾನು ಕಂಡಂತೆ ಬಿಜಿಎಲ್ ಸ್ವಾಮಿ ಎಂಬ ಎಸ್.ಎಲ್ ಭೈರಪ್ಪ ಬರೆದ ಪಠ್ಯ ಸೇರ್ಪಡೆ ಮಾಡಲಾಗಿದೆ..
ಅದೇ ರೀತಿ ಮಂಜೇಶ್ವರ ಗೋವಿಂದ ಪೈ ಬರಹ, ಉತ್ತರ ಭಾರತದ ಕೆಲವು ರಾಜವಂಶಗಳ ಬಗ್ಗೆ, ಅಷ್ಟೇ ಅಲ್ಲದೆ ಯಹೂದಿ, ಪಾರ್ಸಿ ಧರ್ಮಗಳ ವಿಷಯ ಸೇರ್ಪಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಮೈಸೂರು ಒಡೆಯದ ಪಠ್ಯವನ್ನು ಸೇರಿಸಲಾಗಿದೆ. ಎಂದು ಹೇಳಿದ್ದಾರೆ.






