ಡಾಮಿನೋಸ್ ಕಂಪನಿಯಲ್ಲಿ ಪಿಜ್ಜಾ ಡೆಲವರಿ ಗರ್ಲ್ ಆಗಿ ಕೆಲಸ ಮಾಡುತ್ತಿರುವ ಯುವತಿಗೆ ನಾಲ್ವರು ಯುವತಿಯರು ಮನ ಬಂದಂತೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಸದ್ಯ ಯುವತಿಯರು ಡೆಲಿವರಿ ಗರ್ಲ್‌ಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವತಿಯನ್ನು ಕೋಲು ಹಾಗೂ ಬಡಗಿಗಳಿಂದ ಮನಬಂದಂತೆ ಥಳಿಸುತ್ತಿರುವ ದೃಶ್ಯ ಅದಾಗಿದೆ.
ಯುವತಿ ತನ್ನ ಮೇಲೆ ಹಲ್ಲೆ ಮಾಡದಂತೆ ಮತ್ತು ಸಹಾಯ ಮಾಡುವಂತೆ ನೆರೆದಿದ್ದವರನ್ನು ಅಂಗಲಾಚಿದರು ಸಹ ಯಾರೊಬ್ಬರೂ ಕೂಡ ಆಕೆಯ ನೆರವಿಗೆ ಧಾವಿಸಿಲ್ಲ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.
ತಾನು ಪೊಲೀಸರಿಗೆ ದೂರು ನೀಡುವುದಾಗಿ ಯುವತಿ ಎಚ್ಚರಿಸಿದ್ದರೂ ಸಹ, ಹೋಗಿ ದೂರು ನೀಡುವಂತೆ ಥಳಿಸಿದ ಯುವತಿಯರು ಹೇಳಿದ್ದಾರೆ. ಯುವತಿ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಹತ್ತಿರದ ಪೊಲೀಸ್ ಠಾಣೆಯಲ್ಲಿ ನಾಲ್ವರು ಥಳಿಸಿದ ಯುವತಿಯರ ವಿರುದ್ದ ದೂರು ದಾಖಲಿಸಿರುವುದಾಗಿ ವರದಿಯಾಗಿದೆ.
ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ಯಾವ ಕಾರಣಕ್ಕೆ ಡೆಲಿವರಿ ಗರ್ಲ್‌ಗೆ ಯುವತಿಯರ ಗುಂಪು ಥಳಿಸಿದೆ ಎಂಬುವುದು ಇನ್ನೂ ತಿಳಿದುಬಂದಿಲ್ಲ.