ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ, ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕಾರ್ಯಾಚರಣೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ. ಹೌದು, ಗಲಭೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ಉರುಳಿಸುವ ಮೂಲಕ, ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಗಲಭೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು ಎನ್ನಲಾದ ವೆಲ್ಫೇರ್ ಪಾರ್ಟಿ ನಾಯಕ ಜಾವೇದ್ ಅಹ್ಮದ್ ಅವರ ಮನೆಯ ಮುಂದೆ ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರಿ ತೆರವು ಕಾರ್ಯಾಚರಣೆ ನೋಟಿಸ್ ಅಂಟಿಸಿತ್ತು. ಬೆಳಿಗ್ಗೆ 11 ಗಂಟೆಯ ಒಳಗೆ ಮನೆಯನ್ನು ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಈ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ. ಗಡುವಿನ ಸಮಯ ಮುಗಿದ ಬಳಿಕ ಭಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಬುಲ್ಡೋಜರ್ ಸಹಿತ ಅಲ್ಲಿಗೆ ತೆರಳಿದ ಅಧಿಕಾರಿಗಳು, ಅಹ್ಮದ್ ಅವರ ಮನೆಯನ್ನು ನೆಲಸಮ ಮಾಡುವ ಕಾರ್ಯಾಚರಣೆ ಆರಂಭಿಸಿದರು.

ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆದಿತ್ತು. ಇದು ಬಳಿಕ ಹಿಂಸಾಚಾರಕ್ಕೆ ತಿರುಗಿತ್ತು. ಈ ಗಲಭೆಯ ಮುಖ್ಯ ಸಂಚುಕೋರ ಜಾವೇದ್ ಅಹ್ಮದ್ ಎಂದು ಉತ್ತರ ಪ್ರದೇಶ ಪೊಲೀಸರು ಹೆಸರಿಸಿದ್ದಾರೆ. ಪ್ರಯಾಗ್ರಾಜ್ ಹಳೆ ನಗರದ ಕರೇಲಿ ಪ್ರದೇಶದ ಜೆಕೆ ಆಶಿಯಾನಾ ಕಾಲೋನಿ ನಿವಾಸಿಯಾಗಿರುವ ಅಹ್ಮದ್ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.






