ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ (KSHDCL) ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ನಡುವಿನ ಪತ್ರ ಸಮರ ಮುಂದುವರೆದಿದೆ.
ಹೌದು, “ವೈಯಕ್ತಿಕ ಹಿತಾಸಕ್ತಿಯಿಂದಾಗಿ” ಕೆಎಸ್ಎಚ್ಡಿಸಿಯ ಎಂಜಿ ರಸ್ತೆಯ ಪ್ರಧಾನ ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಶೆಟ್ಟಿ ಅಳಿಸಿದ್ದಾರೆ ಎಂದು ಆರೋಪಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಮೇ 27 ರಂದು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದಾಗಿನಿಂದ ಪ್ರಾರಂಭವಾದ ಈ ಪತ್ರ ಸಮರ ನಿನ್ನೆ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶಿಟ್ಟಿ ನಿಗಮದಲ್ಲಿ ಎಸಗಿರುವ ಅವ್ಯವಹಾರ, ಅಧಿಕಾರ ದುರುಪಯೋಗ, ದುರ್ನಡತೆ ಬಗ್ಗೆ ಸಾಲು ಸಾಲು ಆರೋಪ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಇದಕ್ಕೆ ಪ್ರತಿಯಾಗಿ ರಾಘವೇಂದ್ರ ಶಿಟ್ಟಿ ಕೂಡ ರೂಪಾ ವಿರುದ್ದ ಅನೇಕ ಆರೋಪಗಳನ್ನು ಮಾಡಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈಗ ಈ ಆರೋಪಗಳಿಗೆಲ್ಲ ಸುದೀರ್ಘ ಐದು ಪುಟಗಳ ಸ್ಪಷ್ಟೀಕರಣ ಪತ್ರವನ್ನು ಡಿ ರೂಪಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿದ್ದಾರೆ.
ರೂಪಾ ಬುಧವಾರ ಎರಡನೇ ದೂರು ದಾಖಲಿಸಿದ್ದು, ಶೆಟ್ಟಿ ಅಕ್ರಮಗಳಲ್ಲಿ ತೊಡಗಿದ್ದಾರೆ ಮತ್ತು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾಧ್ಯಮದವರೊಂದಿಗೆ ಮಾತನಾಡಲು ಅನುಮತಿ ಕೋರಿದರು. ಇದಾದ ನಂತರ ಶೆಟ್ಟಿ ರೂಪಾ ಡಿ ವಿರುದ್ದ ಸಾಲು ಸಾಲು ಆರೋಪವನ್ನು ಮಾಡಿ ಪತ್ರ ಬರೆದಿದ್ದರು. ಈ ಆರೋಪಗಳಿಗೆ ಸ್ಪಷ್ಟೀಕರಣ ನೀಡಿ ಶುಕ್ರವಾರ ಮತ್ತೆ ರಾಜ್ಯ ಸರ್ಕಾರದ ಮುಖ್ಯ ಕಾರ್ದರ್ಶಿಗಳಿಗೆ ಪತ್ರ ಬರೆದಿರುವ ಡಿ ರೂಪಾ ಅವರು,
ನಿಗಮದ ಅಧ್ಯಕ್ಷರ ಮಾಡಿರು ಆರೋಪಕ್ಕೆ ರೂಪಾ ನೀಡಿರುವ ಸ್ಪಷ್ಟನೆ!
ವಿಷಯ: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ನನ್ನ ವಿರುದ್ಧ ಮಾಡಿರುವ ನಿರಾಧಾರ ಹಾಗೂ ಅವರ ಕಾಲ್ಪನಿಕ ಆರೋಪ ಕುರಿತು.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೂಲಕ ನಿವೇದಿಸುವುದೇನೆಂದರೆ, ರಾಘವೇಂದ್ರ ಶೆಟ್ಟಿ, ನಿಗಮದ ಅಧ್ಯಕ್ಷರು ಮಾಡಿರುವ ನಿರಾಧಾರ ಆರೋಪಗಳ ಪತ್ರ ತಮಗೆ ಬರೆದಿದ್ದು, ಅದು ಕೆಲವು ಮಾಧ್ಯಮದವರ ಮೂಲಕ ನನ್ನ ಕೈ ಸೇರಿದ್ದು, ಅದಕ್ಕೆ ಈ ರೀತಿಯ ಸ್ಪಷ್ಟನೆ ತಮಗೆ ಸಲ್ಲಿಸುತ್ತಿದ್ದೇನೆ.
Also Read : KSHDCL ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ- ಡಿ.ರೂಪಾ ನಡುವೆ ಪತ್ರ ಸಮರ!
1 ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ನಾನು ರೂ 6.00 ಕೋಟಿ ಟೆಂಡರ್ ಕರೆದಿರುವುದಾಗಿ ಹೇಳಿರುತ್ತಾರೆ. First of all, ಈ ಕಛೇರಿಯಿ೦ದ ಯಾವುದೇ 6.00 ಕೋಟಿ ಟೆಂಡರ್ ಕರೆದಿರುವುದಿಲ್ಲ. ಅಲ್ಲದೆ ಈ ಕಛೇರಿಯಿಂದ ಯಾವುದೇ ಟೆಂಡರ್ ಕರೆದರೂ ಅದನ್ನ ಪಾರದರ್ಶಕವಾಗಿ ಕೆಟಿಪಿಪಿ ಆಕ್ಟ್ ಪಕಾರ ಮಾಡಲಾಗಿದೆ. ಹಾಗೂ e-procuremen portal ನಲ್ಲಿ ಹಾಕಲಾಗಿದೆ. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್ಯು 2003, ದಿನಾಂಕ 07.05.2003 ಪ್ರಕಾರ ಯಾವುದೇ ಟೆಂಡರ್ ಕರೆಯುವುದಕ್ಕೂ ಹಾಗೂ ಎಷ್ಟೇ ಮೊತ್ತದ ಟೆಂಡರ್ ಕರೆಯುವುದಕ್ಕೂ ಅಧ್ಯಕ್ಷರ ಅನುಮತಿ ಬೇಕಾಗಿರುವುದಿಲ್ಲ. ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿರುತ್ತೇನೆ. ಅವರು ಆರೋಪಿಸಿರುವಂತೆ ಅವರ ಅನುಮತಿ ತೆಗೆದುಕೊಂಡಿರುವುದಿಲ್ಲ. ಏಕೆಂದರೆ ಅದರ ಅಗತ್ಯ ಇರುವುದಿಲ್ಲ. ಹಂಪಿ ಪ್ರಾಜೆಕ್ಟ್, ಹೈದರಾಬಾದ್ ಶೋ ರೂಂ ಹಾಗೂ ಯಾವುದೇ ವಿಷಯವನ್ನು ಸರ್ಕಾರದ ಆದೇಶ ಸಂಖ್ಯೆ: ಡಿಡಿಪಿಆರ್ 35 ಎಆಯು 2003, ದಿನಾಂಕ 07.05.2003 ಪ್ರಕಾರ ಗಮನಕ್ಕೆ ತರುವ ಅಗತ್ಯವಿಲ್ಲ.
2 ರಾಘವೇಂದ್ರ ಶೆಟ್ಟಿಯು ನನಗೆ 75 ಪತ್ರಗಳನ್ನು ಕಳುಹಿಸಿರುತ್ತಾರೆ. ಅದನ್ನು ಅವರು ನೋಟಿಸ್ ಎಂದು ಪತ್ರಿಕೆಗಳಿಗೆ ಹೇಳಿರಬಹುದು. ಅವಲ್ಲವೂ ನಿಗಮದ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ ಪತ್ರಗಳು, ಈಗಾಗಲೇ ತಿಳಿಸಿದಂತೆ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್ಯು 2003, ದಿನಾಂಕ 07.05.2003 ಪ್ರಕಾರ ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರ ಹಸ್ತಕ್ಷೇಪ ಸಲ್ಲದು. ಹಾಗಾಗಿ ನಾನು ಅವರ ಯಾವ ಪತ್ರಕ್ಕು ಉತ್ತರ ಕೊಟ್ಟಿರುವುದಿಲ್ಲ. ಹಾಗೂ ಸರ್ಕಾರದ ಆದೇಶ ಪ್ರಕಾರ ನಡೆದುಕೊಂಡಿರುತ್ತೇನೆ. ಸರ್ಕಾರದ ಆದೇಶ ಪ್ರಕಾರ ನಡೆದುಕೊಳ್ಳಲು ತಿಳಿಸಿದರೂ ಅಧ್ಯಕ್ಷರು ಪಾಲಿಸಿರುವುದಿಲ್ಲ.
3 ಸುಬೇಶ್ ಎಂಬ ಪ್ರಧಾನ ವ್ಯವಸ್ಥಾಪಕರು (ಹಣಕಾಸು) ಇವರನ್ನು ನಾನು ಓಡಿಸಿದೆ ಎಂಬ ಅತಿ ಅಗ್ಗದ ಆರೋಪ ಮಾಡಿರುತ್ತಾರೆ. ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ರಮಾನಂದ ನಾಯಕ್ ರವರ ಪತ್ನಿಯ ವೈದ್ಯಕೀಯ ಆರೈಕೆಗೆಂದು ರೂ. 1.00 ಲಕ್ಷ ನಿಗಮದಿಂದ ಪಾವತಿಸಿಕೊಂಡಿರುತ್ತಾರೆ. ರಮಾನಂದ ನಾಯಕ್ ರವರಿಗೆ ಕೇವಲ ರೂ. 2.00 ಲಕ್ಷ ಮಾತ್ರ ವೈದ್ಯಕೀಯ ಆರೈಕೆಗೆ ಅರ್ಹತೆ ಇರುತ್ತದೆ. ಆದರೆ ರೂ. 9,24,718.00 ಹೆಚ್ಚುವರಿಯಾಗಿ ನಿಗಮದಿಂದ ಪಾವತಿ ಮಾಡಿಸಿಕೊಂಡಿರುತ್ತಾರೆ. ಇದಕ್ಕೆ ಸುಬೇಶ್ ರವರೇ ಫೈಲ್ನಲ್ಲಿ ಸಹಕರಿಸಿದ್ದು, ಇಬ್ಬರೂ ನಿಗಮದ ಹಣದ ಅಪರಾತಪರ ಮಾಡಿರುತ್ತಾರೆ. ಇದರ ಕುರಿತು ಪತ್ರ ಸಂಖ್ಯೆ: ಕರಾಕ ಅನಿನಿ/ಆಡಳಿತ/66/2021-22, ದಿನಾಂಕ: 07.01.2022 ಹಾಗೂ ಕಲಾಕನಿಸಿ/ಆಡಳಿತ/1645/2021-22, ದಿನಾಂಕ: 21.02.2022 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತೇನೆ. ತದ ನಂತರ ಸರ್ಕಾರವು ಸುರೇಶ್ ಅವರ ವರ್ಗಾವಣೆಯನ್ನು ದಿನಾಂಕ: (03.03.2022 ರಂದು ಮಾಡಿರುತ್ತದೆ. ಸುಬೇಶ್ ಎಂಬುವವರು ಅನೇಕ ನಿಯಮಬಾಹಿರ ಹಾಗೂ ಕಾನೂನುಬಾಹಿರ ಕೆಲಸಗಳಲ್ಲಿ ರಾಘವೇಂದ್ರ ಶೆಟ್ಟಿಯವರಿಗೆ ಸಹಕರಿಸುತ್ತಿದ್ದರು. ಹಾಗಾಗಿ ಈ ರೀತಿಯ ಸುಳ್ಳು ಆರೋಪ ಮಾಡಿರುತ್ತಾರೆ. ಈಗ ಈ ಹುದ್ದೆ ಖಾಲಿ ಇದೆ. ಶ್ರೀಧರ್ ಎಂಬುವವರನ್ನು ಈ ಜಾಗಕ್ಕೆ ವ್ಯವಸ್ಥಾಪಕ ನಿರ್ದೇಶಕರು ನೇಮಿಸಿದ್ದಾರೆ ಎಂದು ರಾಘವೇಂದ್ರ ಶೆಟ್ಟಿ ಇವರು ಹೇಳಿರುವುದು ಸುಳ್ಳು. ಶ್ರೀಧರ್ ಕೇವಲ ಡಾಟಾ ಎಂಟ್ರಿ ಆಪರೇಟರ್ ಅಷ್ಟೆ. ಅಷ್ಟೂ ತಿಳಿಯದೆ ಅಜ್ಞಾನದಿಂದಲೋ, ಬೇಕಂತಲೋ ಸುಳ್ಳು ಆರೋಪ ಮಾಡಿರುತ್ತಾರೆ.
4 ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ಕೊಟ್ಟಿರುವ ಬಗ್ಗೆ ಸುಳ್ಳು ಆರೋಪ ಮಾಡಿರುತ್ತಾರೆ. ಶೋರೂಂ ವ್ಯವಸ್ಥಪಕರಿಗೆ ಶೇಕಡ 5 ರಷ್ಟು ಡಿಸ್ಕೌಂಟ್ ನೀಡುವ ಅಧಿಕಾರವು, ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಇವರಿಗೆ ಶೇಕಡ 10 ರಷ್ಟು ಡಿಸ್ಕೌಂಟ್ ನೀಡುವ ಅಧಿಕಾರ ವ್ಯವಸ್ಥಾಪಕ ನಿರ್ದೇಶಕರಿಗೆ ಶೇಕಡ 20 ರ ತನಕ ಡಿಸ್ಕೌಂಟ್ ಕೊಡುವ ಅಧಿಕಾರವಿದ್ದರೂ ಸಹ ನಾನು – ಯಾವುದೇ ರೀತಿಯ ಡಿಸೆಂಟ್ ನನ್ನ ಗುರುತು ಪರಿಚಯದವರಿಗೆ ಕೊಟ್ಟಿರುವುದಿಲ್ಲ. ಕೇವಲ ಸರ್ಕಾರದ ಇಲಾಖೆಗಳು ಖರೀದಿ ಮಾಡಿದಾಗ ಮಾತ್ರ ಡಿಸ್ಕೌಂಟ್ ಅನುಮೋದಿಸಿರುತ್ತೇನೆ. ಅಲ್ಲದೆ ರಾಘವೇಂದ್ರ ಶೆಟ್ಟಿಯು ಅನೇಕ ಬಾರಿ ಇದಕ್ಕಿಂತ ಹೆಚ್ಚಿನ ರಿಯಾಯಿತಿ (ಡಿಸ್ಕೌಂಟ್) ತಮ್ಮ ವೈಯಕ್ತಿಕ ಮಿತ್ರರಿಗೆ ಕೊಡಲು ಕೇಳಿದಾಗ ನಿರಾಕರಿಸಿರುತ್ತೇನೆ.
5 ನಿಗಮಕ್ಕೆ ಕೆಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡಿದ್ದು, ಚೊಕ್ಕವಾಗಿ ನಿರ್ವಹಿಸಿದ್ದೇನೆ. ಉದಾಹರಣೆಗೆ, ನಿಗಮವು ನಡೆಸಿರುವ 6 ವಸ್ತು ಪ್ರದರ್ಶನ ಆಯೋಜಿಸಲು ಕೇಂದ್ರ ಸರ್ಕಾರದಿಂದ ಹಣ ಬಂದಿದ್ದು, ಉಪಯುಕ್ತ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕೊಡಲಾಗಿದೆ. ಹಾಗೂ ಕೆಲಸವನ್ನು ಮುಗಿಸಲಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಯಾವುದೇ ನಕಾರಾತ್ಮಕ ರಿಮಾರ್ಕ್ಸ್ ಇರುವುದಿಲ್ಲ. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್ಯು 2003, ದಿನಾಂಕ 07.05.2003 ಪ್ರಕಾರ ಈ ಎಲ್ಲಾ ಮಾಹಿತಿಗಳನ್ನು ಅಧ್ಯಕ್ಷರಿಗೆ, ಕೊಡುವ ಅಗತ್ಯ ಇರುವುದಿಲ್ಲ. ಹಾಗಾಗಿ ಕೊಟ್ಟಿರುವುದಿಲ್ಲ. ಆದರೆ ಈ ರೀತಿಯ ತಪ್ಪು ಮಾಹಿತಿಗಳನ್ನು ನೀಡಿ ತಮ್ಮ ಮೇಲಿರುವ ಆರೋಪಗಳಿಂದ ನುಣುಚಿಕೊಳ್ಳಲು ನನ್ನ ಮೇಲೆ ಇಲ್ಲ. ಸಲ್ಲದ ಆರೋಪಗಳನ್ನು ಮಾಡಿರುವಂತಹ ರಾಘವೇಂದ್ರ ಶೆಟ್ಟಿಯ ಮೇಲೆ ಕ್ರಮ ತೆಗೆದುಕೊಳ್ಳಲು ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಕೋರಲು ವಿನಂತಿ,.
6 ರಾಘವೇಂದ್ರ ಶೆಟ್ಟಿ ತಮ್ಮ ವೈಯಕ್ತಿಕ ವ್ಯವಹಾರಗಳನ್ನು ನಿಗಮದ ಕಛೇರಿಯಲ್ಲಿ ನಡೆಸುತ್ತಾರೆ. ಅನೇಕ ಬಾರಿ ಇವರಿಗೆ ಸಾಲ ಕೊಟ್ಟವರು ಬಂದು ಇವರ ಮೇಲೆ ಕೂಗಿ ಹೋಗಿ ಕಛೇರಿಯಲ್ಲಿ ಅಶಾಂತ ವಾತಾವರಣ ಉಂಟಾಗಿರುತ್ತದೆ.
7 ಮೂರು ಜನ ಡ್ರೈವರ್ಗಳನ್ನು ನೇಮಕ ಮಾಡಿರುವುದರ ಬಗ್ಗೆ ವೃಥಾ ಆರೋಪ ಮಾಡಿರುತ್ತಾರೆ. ನಿಗಮದಲ್ಲಿ ಆರು ವಾಹನಗಳಿದ್ದು ರಾಘವೇಂದ್ರ ಶೆಟ್ಟಿ ಎರಡು ವಾಹನಕ್ಕೆ ಎರಡು ಡ್ರೈವರ್ ವ್ಯವಸ್ಥಾಪಕ ನಿರ್ದೇಶಕರಿಗೆ ಇರುವ ಎರಡು ವಾಹನಗಳಿಗೆ ಎರಡು ಡ್ರೈವರ್ ಒಂದು ನಿಗಮದ ಇತರೆ ಅಧಿಕಾರಿಗಳು ಬಳಸುವ ವಾಹನಕ್ಕೆ ಒಬ್ಬ ಡ್ರೈವರ್ ಹಾಗೂ ಸಚಿವರ ಕಛೇರಿಗೆ ಕೊಟ್ಟಿರುವ ಸನ್ನಿ ನಿಸಾನ್ ಕಾರ್ಗೆ ಒಬ್ಬ ಡ್ರೈವರ್ ಈ ರೀತಿ ಒಂದು ಕಾರ್ಗೆ ಒಬ್ಬ ಡ್ರೈವರ್ನ್ನು ನೀಡಲಾಗಿದೆ. ಮೇಲೆ ಹೇಳಿದಂತೆ ನನ್ನ ಬಳಿ ನಿಯಮ ಪ್ರಕಾರ ಎರಡು ವಾಹನಗಳನ್ನು ಉಪಯೋಗಿಸಲಾಗುತ್ತಿದೆ. ಒಂದು ವಾಹನವನ್ನು ಸಚಿವರ ಕಛೇರಿಗೆ ಕೊಡಲಾಗಿದೆ. ರಾಘವೇಂದ್ರ ಶೆಟ್ಟಿಗೆ ನಿಯಮ ಪಕಾರ ಅರ್ಹವಾಗಿರುವುದು ಒಂದೇ ವಾಹನವಾದರೂ ಎರಡು ವಾಹನಗಳನ್ನು ಇಟ್ಟುಕೊಂಡಿರುತ್ತಾರೆ.
8 ನಾನು ವಿಮಾನ ಪ್ರಯಾಣ ಮಾಡಿದಾಗ ಬಿಸಿನೆಸ್ ಕ್ಲಾಸ್ ನಿಯಮ ಪ್ರಕಾರ ಅರ್ಹವಾಗಿದ್ದರೂ ನಾನು ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣಿಸಿರುತ್ತೇನೆ ಹಾಗೂ ಇದರಿಂದ ನಿಗಮಕ್ಕೆ ಹಣ ಉಳಿತಾಯ ಮಾಡಿರುತ್ತೇನೆ. ನನ್ನ ಪ್ರಯಾಣದ ವಿವರವೆಲ್ಲವೂ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿದಿರುತ್ತದೆ. ರಾಘವೇಂದ್ರ ಶೆಟ್ಟಿಯು ಆರೋಪಿಸಿರುವ ಹಾಗೆ ಅವರಿಗೆ ತಿಳಿಸುವ ಅಗತ್ಯವಿಲ್ಲ.
9 ನಿಗಮದ ಮಾರಾಟ ಮಳಿಗೆಗಳು ಇಲ್ಲದಿರುವ ಸ್ಥಳಗಳಿಗೂ ಕೂಡ ರಾಘವೇಂದ್ರ ಶೆಟ್ಟಿಯು ವಿಮಾನ ಪ್ರಯಾಣ ಮಾಡಿ, ಪ್ರಯಾಣ ಭತ್ಯೆ ಕ್ಲೀನ್ ಮಾಡಿರುತ್ತದೆ, ಉದಾಹರಣೆಗೆ, ಮುಂಬೈ, ತಿರುಪತಿ, ವಾರಣಾಸಿ, ಕೋಟ, ಕೊಲ್ಲಾಪುರ್ ಮುಂತಾದವು.
10 ನಾನು 2 ಹೊಸ ಇನ್ನೋವ ಕ್ರಿಸ್ಟ ಗಾಡಿಗಳನ್ನು ಖರೀದಿಸಿರುತ್ತೇನೆ ಎಂಬ ಆರೋಪ ಮಾಡಿದ್ದು, ನನ್ನ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಮಾನಂದ ನಾಯಕ್ ರವರು 4.12.2020 ರಂದು 2 ಹೊಸ ವಾಹನಗಳನ್ನು ಖರೀದಿ ಮಾಡಿರುತ್ತಾರೆ. ನಾನು 01.01.2021 ರಂದು ವ್ಯವಸ್ಥಾಪಕ ನಿರ್ದೇಶಕರು ಎಂದು ಚಾರ್ಜ್ ವಹಿಸಿಕೊಂಡಿರುತ್ತೇನೆ.
11 ನಾನು ಯಾವುದೇ ಹೊಸ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನ ಖರೀದಿಸಿರುವುದಿಲ್ಲ. ಒಂದು ವಾಹನ ರಾಘವೇಂದ್ರ ಶೆಟ್ಟಿಗೆ ನೀಡುವ ನಿಯಮವಿದ್ದರೂ ಎರಡು ವಾಹನಗಳನ್ನು ಅನಾಮತ್ತಾಗಿ ತಮ್ಮ ಬಳಿ ಇರಿಸಿಕೊಂಡಿರುತ್ತಾರೆ.
12 ಒಂದು ದ್ವಿಚಕ್ರ ವಾಹನ, ಟಿವಿಎಸ್ ಅಪಾಚಿ ಯನ್ನು 2017 ರಲ್ಲಿ ಅಂದಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ಪಿ.ಶರ್ಮ ರವರು ಖರೀದಿ ಮಾಡಿದ್ದು, ಅದು ನಾನು ಬಂದಾಗಿನಿಂದಲೂ ಓಡಿಸುವ ಸ್ಥಿತಿಯಲ್ಲಿ ಇಲ್ಲ.
13 ಪ್ರಿಂಟಿಂಗ್ ಮತ್ತು ಇತರ ಎಲ್ಲಾ ಕಾರ್ಯಾದೇಶಗಳನ್ನು ಸರ್ಕಾರದ ಸಂಸ್ಥೆಯಾದ MC & A ಗೆ ಕೊಟ್ಟಿರುತ್ತೇನೆ.
14 2020-21 ರಲ್ಲಿ 16.88 ಕೋಟಿ ಇದ್ದ ನಿಗಮದ ವಹಿವಾಟನ್ನು 2021-22 ನೇ ಸಾಲಿನಲ್ಲಿ 7.06 ಕೋಟಿ ಹೆಚ್ಚಿನ ವಹಿವಾಟು, ಅಂದರೆ 41 ರಷ್ಟು ವಹಿವಾಟಿಗೆ ಕೊಂಡೊಯ್ದಿರುವುದು ಒಂದು ರೆಕಾರ್ಡ್ ಸಾಧನೆಯಾಗಿದೆ. ಕೋವಿಡ್ ಲಾಕ್ಡೌನ್ 2-3 ತಿಂಗಳು ಇದ್ದರೂ ಸಹ ನಿಗಮವು ಶೇಕಡ 41 ರಷ್ಟು ಅಧಿಕ ವಹಿವಾಟು ಸಾಧಿಸಿದೆ. ಇದರ ಕಾರಣಗಳು –
ಅ) ಮೊಟ್ಟ ಮೊದಲ ಬಾರಿಗೆ ಅಮೆಜಾನ್, ಫಿಪ್ ಕಾರ್ಟ್, ಹೊಸ online sales website portal ಮೂಲಕ online sales ಕಾರ್ಯರೂಪಕ್ಕೆ ತಂದಿರುತ್ತೇನೆ.
ಆ) ಹಿಂದೆ ನಮ್ಮ ಗ್ರಾಹಕರನ್ನು ಪ್ರೈವೇಟ್ ಮಾರಾಟಗಾರರಿಗೆ diversion ಕೆಲಸವನ್ನು ಕೆಲವು ಸೇಲ್ಸ್ ಮ್ಯಾನ್ ಗಳು ಮಾಡುತ್ತಿದ್ದರಿಂದ, ನಿಗಮದಲ್ಲಿ ಮಾರಾಟ ಕುಂಠಿತವಾಗುತ್ತಿತ್ತು. ಇದನ್ನು ತಪ್ಪಿಸಲು ಎಲ್ಲಾ ಸೇಲ್ಸ್ ಮ್ಯಾನ್ ಗೆ ಅವರು ಮಾಡಿದ ಮಾರಾಟದ ಶೇಕಡ 1 ರಷ್ಟು ಸೇಲ್ಸ್ ಇನ್ಸೆಂಟಿವ್ ನೀಡುವ ಪದ್ಧತಿಯನ್ನು ಜಾರಿಗೆ ತಂದಿರುತ್ತೇನೆ.
ಇ) ಬಿಎಂಟಿಸಿ, ಕೆಎಸ್ಆರ್ಟಿಸಿ ಮುಜರಾಯಿ ಇಲಾಖೆಗಳೊಂದಿಗೆ tie up ಮಾಡಿಕೊಂಡು ಹೆಚ್ಚಿನ ವಹಿವಾಟನ್ನು ಸಾಧಿಸಿರುತ್ತೇನೆ.
ಈ) ಅನಗತ್ಯ ಖರ್ಚುಗಳು ಹಾಗೂ ಹಣವನ್ನು ಸರ್ಕಾರದ ಸಾರ್ವಜನಿಕ ಹಣ ಖರ್ಚು ಆಗದಂತ ನೋಡಿಕೊಂಡಿರುತ್ತೇನೆ. ರಾಘವೇಂದ್ರ ಶೆಟ್ಟಿಯು ಹಣ ದುರುಪಯೋಗ ಪಡಿಸಿಕೊಳ್ಳುವುದನ್ನು ನಿಲ್ಲಿಸಿರುತ್ತೇನೆ.
ಉ) ಒಟ್ಟು ಹದಿನೈದು ವಸ್ತು ಪ್ರದರ್ಶನಗಳಲ್ಲಿ ನಾನು ಬಂದಾಗಿನಿಂದ ನಿಗಮವು ಭಾಗವಹಿಸಿರುತ್ತದೆ. ಇದರಿಂದ ವಹಿವಾಟು ಹೆಚ್ಚಾಗಿರುತ್ತದೆ.
ಈ ಮೇಲೆ ಹೇಳಿದ ಎಲ್ಲಾ ಅಂಶಗಳ ಜೊತೆಗೆ ದಿನಾಂಕ: 01.06.2022 ರಂದು ನಾನು ಸಲ್ಲಿಸಿದ ಆರು ಪುಟಗಳ, ರಾಘವೇಂದ್ರ ಶೆಟ್ಟಿಯವರ ಮೇಲೆ 16 ಅಂಶಗಳ ವರದಿ ಮೇಲೆ ಕೂಡ ಸೂಕ್ತ ಕ್ರಮ ಕೈಗೊಳ್ಳಲು ವಿನಮಪೂರ್ವಕವಾಗಿ ಸಲ್ಲಿಸುತ್ತಿದ್ದೇನೆ.
ತಮ್ಮ ವಿಶ್ವಾಸಿ,
(ಡಿ ರೂಪಾ ಮೌದ್ದಿಲ್, ಐಪಿಎಸ್)
ವ್ಯವಸ್ಥಾಪಕ ನಿರ್ದೇಶಕರು
ಈ ರೀತಿ ಪತ್ರವನ್ನು ಬರೆದಿದ್ದಾರೆ.