ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಖರೀದಿಸಿದವರು 5 ವರ್ಷದಲ್ಲಿ ಮನೆ ಕಟ್ಟದಿದ್ದರೆ ದಂಡ ವಿಧಿಸಲು ಬಿಡಿಎ ಮುಂದಾಗಿದೆ. ಈ ಮೂಲಕ ನಿವೇಶನ ಖರೀದಿದಾರರಿಗೆ ಬಿಗ್ ಶಾಕ್ ನೀಡಿದೆ.
ಬಿಡಿಎನಲ್ಲಿ ಸೈಟ್ ಪಡೆದ 5 ವರ್ಷದೊಳಗೆ ಮನೆ ಕಟ್ಟದೇ ಖಾಲಿ ಬಿಟ್ಟಿದ್ದರೆ ನಿವೇಶನದ ಅಳತೆ ಆಧಾರದ ಮೇಲೆ ದಂಡ ವಿಧಿಸಲು ಬಿಡಿಎ ಮುಂದಾಗಿದೆ.
20×40 ಸೈಟಿಗೆ 15,000 ರೂ., 30×40 ಸೈಟಿಗೆ 60,000 ರೂ. 60×40 ಸೈಟಿಗೆ 3.75 ಲಕ್ಷ ರೂ. ಹಾಗೂ 50×80 ಸೈಟಿಗೆ 6 ಲಕ್ಷ ರೂ. ದಂಡ ವಿಧಿಸಲು ಬಿಡಿಎ ಮುಂದಾಗಿದೆ.
ಖಾಲಿ ನಿವೇಶನಗಳ ಮೇಲೆ ದಂಡ ವಿಧಿಸಲು ಬಿಡಿಎ ಯಾವ ಕಾರಣಕ್ಕೆ ಮುಂದಾಗಿದೆ ಎಂಬುದು ತಿಳಿದು ಬಂದಿಲ್ಲ. ಆದರ ಬಿಡಿಎ ಈ ಹೊಸ ನಿಯಮಕ್ಕೆ ನಿವೇಶನ ಖರೀದಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡಿಎ ನಿವೇಶನ ಹಂಚಿದ ಮೇಲೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಬೇಕಾಗಿರುವುದು ನಿಗಮದ ಕರ್ತವ್ಯ. ಖಾಲಿ ಜಾಗ ನೀಡಿ ಕೈತೊಳೆದುಕೊಳ್ಳುವುದು ಅಲ್ಲ. ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಮೂಲಸೌಕರ್ಯ ಒದಗಿಸಿಲ್ಲ. ಅಲ್ಲದೇ ನ್ಯಾಯಾಲಯದ ಆದೇಶವನ್ನು ಕೂಡ ಪಾಲಿಸಿಲ್ಲ ಎಂದು ಬಿಡಿಎ ನಿವೇಶನ ಖರೀದಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.