ಕೆಲವೇ ವಾರಗಳ ಮುನ್ನ ಭಾರತದ ವಿಶ್ಲೇಷಕರು, ಭಾರತ ಸರ್ಕಾರ ಅನಧಿಕೃತವಾಗಿ, ಎಂದೂ ಎದುರಾಗುವುದಿಲ್ಲ ಎಂದು ಹೇಳುತ್ತಿದ್ದ ಅಂಕಿಅಂಶಗಳಿಗೆ ಎದುರಾಗಬೇಕಾಯಿತು. 2020ರಲ್ಲೇ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿತ್ತು. ಭಾರತ ಸರ್ಕಾರ ಸೂಕ್ತ ನೀತಿಗಳನ್ನು ಅನುಸರಿಸದೆ ಹೋದರೆ ಬಾಂಗ್ಲಾದೇಶ ಭಾರತವನ್ನು ಶೀಘ್ರದಲ್ಲೇ ಹಿಂದಿಕ್ಕುತ್ತದೆ ಎಂಬ ಅಭಿಪ್ರಾಯವೂ ದಟ್ಟವಾಗಿತ್ತು. ಈಗ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಒದಗಿಸಿರುವ ದತ್ತಾಂಶಗಳು ಆತಂಕಗಳನ್ನು ರುಜುವಾತು ಮಾಡಿವೆ. 2020ರಿಂದಲೇ ಬಾಂಗ್ಲಾದೇಶ ಭಾರತಕ್ಕಿಂತಲೂ ಹೆಚ್ಚಿನ ತಲಾ ಜಿಡಿಪಿಯನ್ನು ದಾಖಲಿಸಲಾರಂಭಿಸಿದ್ದು, ಇದೇ ಗತಿಯನ್ನು ಗಮನಿಸಿದರೆ, ಭವಿಷ್ಯದಲ್ಲೂ ಭಾರತಕ್ಕಿಂತಲೂ ಮುಂದೆ ಸಾಗುವ ಸಾಧ್ಯತೆಗಳನ್ನು ಕಾಣಬಹುದಾಗಿದೆ.
ಇದು ಎರಡು ಕಾರಣಗಳಿಗಾಗಿ ಪ್ರಶಂಸಾರ್ಹ ಎನಿಸುತ್ತದೆ. ಮೊದಲನೆಯದಾಗಿ, ಬಾಂಗ್ಲಾದೇಶ ಭಾರತಕ್ಕೆ ಹೋಲಿಸಿದರೆ ಗಾತ್ರದಲ್ಲಿ ಮತ್ತು ಒಟ್ಟು ಜಿಡಿಪಿಯಲ್ಲಿ, ಒಂದು ಪುಟ್ಟ ದೇಶ. ಆದರೂ ತಲಾ ಜಿಡಿಪಿಯನ್ನು ಹೆಚ್ಚಿಸುವಲ್ಲಿ ಅದು ಭಾರತಕ್ಕಿಂತಲೂ ಮುನ್ನಡೆ ಸಾಧಿಸಿದೆ. ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣ ಒಡ್ಡಿ ಭಾರತ ವಾಸ್ತವವನ್ನು ಮರೆಮಾಚಲಾಗುವುದಿಲ್ಲ. ಏಕೆಂದರೆ ಬಾಂಗ್ಲಾದೇಶದಲ್ಲಿ ಜನದಟ್ಟಣೆ ಭಾರತಕ್ಕಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಪ್ರತಿ ಕಿಲೋಮೀಟರ್ಗೆ ಜನಸಂಖ್ಯೆ 415ರಷ್ಟಿದ್ದರೆ ಬಾಂಗ್ಲಾದೇಶದಲ್ಲಿ 1106ರಷ್ಟಿದೆ. ಬಾಂಗ್ಲಾದೇಶದಲ್ಲಿ ಭಾರತದಷ್ಟೇ ಕಡಿಮೆ ಪ್ರಮಾಣದ ಜನದಟ್ಟಣೆ ಇದ್ದಿದ್ದರೆ ಅಲ್ಲಿನ ತಲಾ ಜಿಡಿಪಿಯ ಪ್ರಮಾಣ ಇನ್ನೂ ದುಪ್ಪಟ್ಟಾಗುತ್ತಿತ್ತು. ಭಾರತ ಇನ್ನೂ ಹಿಂದುಳಿಯುತ್ತಿತ್ತು.
ಇತ್ತೀಚೆಗೆ ಈ ಲೇಖಕ ದುಬೈನಲ್ಲಿ ನೆಲೆಸಿರುವ ಬಾಂಗ್ಲಾದೇಶೀಯರೊಡನೆ ಚರ್ಚೆ ನಡೆಸಿದ್ದ ಸಂದರ್ಭದಲ್ಲಿ, ಅಲ್ಲಿ ಅನೇಕ ಬಾಂಗ್ಲಾದೇಶದ ಪ್ರಜೆಗಳು ದುಬೈ ತೊರೆದು ಸ್ವದೇಶಕ್ಕೆ ಮರಳುತ್ತಿರುವುದಾಗಿ ವಿಷಾದ ವ್ಯಕ್ತಪಡಿಸಿದ್ದರು. ಹೀಗೆ ತೊರೆಯಲು ಕಾರಣವೇನೆಂದರೆ ಬಾಂಗ್ಲಾದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು ಕೌಶಲರಹಿತ ಕಾರ್ಮಿಕರಿಗೂ ದಿನಕ್ಕೆ 600 ಟಾಕಾಗಳಷ್ಟು ವೇತನ ಪಡೆಯಲು ಸಾಧ್ಯವಾಗುತ್ತಿದೆ. ಬಾಂಗ್ಲಾದೇಶದಲ್ಲಿ ವೇತನವೂ ಹೆಚ್ಚಳವಾಗುತ್ತಿದ್ದು ಅಲ್ಲಿಂದ ದುಬೈಗೆ ಬರುವ ವಲಸೆ ಕಾರ್ಮಿಕರ ದೃಷ್ಟಿಯಲ್ಲಿ ದುಬೈ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ. ಭಾರತದಲ್ಲೂ ಸಹ ಪೊಲೀಸರ ಬಳಿ ಕೇಳಿದರೆ ಹೇಳುತ್ತಾರೆ, ಬಾಂಗ್ಲಾದೇಶದಿಂದ ವಲಸೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ವಲಸೆ ನೀತಿಯಾಗಲೀ, ಭದ್ರತಾ ಅಧಿಕಾರಿಗಳು ಹೆಚ್ಚು ಜಾಗ್ರತೆ ವಹಿಸುತ್ತಿದ್ದಾರೆ ಎನ್ನುವುದಾಗಲೀ ಅಲ್ಲ, ಬದಲಾಗಿ ಬಾಂಗ್ಲಾದೇಶದಲ್ಲೇ ಅವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಬಿಹಾರದಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಹಾಗಾದರೆ ಭಾರತದಲ್ಲಿ ಸಾಧ್ಯವಾಗದಿರುವುದನ್ನು ಬಾಂಗ್ಲಾದೇಶ ಹೇಗೆ ಸಾಧ್ಯವಾಗಿಸಿದೆ ? ಮೊದಲು ಬಾಂಗ್ಲಾದೇಶ ಯಾವ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲಾಗಿಲ್ಲ ಎನ್ನುವುದನ್ನು ಗಮನಿಸೋಣ.
ಐಎಂಎಫ್ ವರದಿಯ ಅನುಸಾರ ಬಾಂಗ್ಲಾದೇಶ ತನ್ನ ಹಣಕಾಸು ಕ್ಷೇತ್ರದ ದೌರ್ಬಲ್ಯಗಳನ್ನು ನಿವಾರಿಸಿಕೊಂಡು, ಬಂಡವಾಳ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕಿದೆ. ಬಂಡವಾಳ ಮಾರುಕಟ್ಟೆ ಮತ್ತು ಹಣದ ಮಾರುಕಟ್ಟೆಯಲ್ಲಿ ಭಾರತ ಬಾಂಗ್ಲಾದೇಶಕ್ಕಿಂತಲೂ ಬಹಳ ಮುನ್ನಡೆ ಸಾಧಿಸಿದೆ. ಆದರೂ ಬಾಂಗ್ಲಾದೇಶದೊಳಗೆ ಹರಿದುಬರುವ ಬಂಡವಾಳಕ್ಕೆ ಚ್ಯುತಿ ಬಂದಿಲ್ಲ ಏಕೆಂದರೆ ಅಲ್ಲಿನ ಸರ್ಕಾರ ಉದ್ಯಮಿಗಳಿಗೆ ಹೆಚ್ಚಿನ ಲಾಭಾಂಶದ ಭರವಸೆ ನೀಡುತ್ತಿದೆ. ಬಾಂಗ್ಲಾದೇಶ ತನ್ನ ಬಂಡವಾಳಹೂಡಿಕೆ ವಾತಾವರಣವನ್ನು ವೃದ್ಧಿಪಡಿಸಬೇಕು ಮತ್ತು ಉತ್ಪಾದಕೀಯತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಐಎಂಎಫ್ ನಿರೀಕ್ಷಿಸುತ್ತದೆ. ಅಭಿವೃದ್ಧಿಯನ್ನು ಸಾಧಿಸಲು ಮತ್ತು ಸುಸ್ಥಿರ ಮಾದರಿಯಲ್ಲಿ ಸಾಮಾಜಿಕ ಗುರಿಯನ್ನು ತಲುಪಲು ಹೆಚ್ಚಿನ ಆದಾಯ ಅತ್ಯವಶ್ಯವಾಗಿದ್ದು, ಬಾಂಗ್ಲಾದೇಶ ಸರ್ಕಾರ ಅನುಸರಿಸುವ ತೆರಿಗೆಗಳ ಮೂಲಕ ಆದಾಯ ಹೆಚ್ಚಿಸುವ ಮಾರ್ಗಗಳು ಕಡಿಮೆ ಪ್ರಮಾಣದಲ್ಲಿವೆ. ಈ ನಿಟ್ಟಿನಲ್ಲಿ ಬಾಂಗ್ಲಾದೇಶ ಭಾರತದಿಂದ ಸಾಕಷ್ಟು ಕಲಿಯುವುದಿದೆ. ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದ್ದರೂ, ಖಾಸಗಿ ಆದಾಯವು ಜಡಗಟ್ಟಿದ್ದರೂ, ಸರ್ಕಾರವು ಸತತವಾಗಿ ಹೆಚ್ಚಿನ ಆದಾಯವನ್ನು ಕ್ರೋಢೀಕರಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಆದಾಯದ ಕೊರತೆಯ ಕಾರಣದಿಂದಲೇ ಬಾಂಗ್ಲಾದೇಶ ಸರ್ಕಾರ ತನ್ನ ಅಧಿಕಾರಶಾಹಿಗೆ ಮತ್ತು ರಾಜಕಾರಣಿಗಳಿಗೆ, ಅಧಿಕೃತವಾಗಿ ಮತ್ತು ಅನಧಿಕೃತವಾಗಿ, ಹೆಚ್ಚಿನ ಸವಲತ್ತುಗಳು ಒದಗಿಸುವುದನ್ನು ತಪ್ಪಿಸಿದೆ.
ಐಎಂಎಫ್ ತನ್ನ ವರದಿಯಲ್ಲಿ ಹೇಳಿರುವಂತೆ “ ಜಿಡಿಪಿಯ ಒಂದು ಭಾಗವಾಗಿ ಆದಾಯವು ಸತತವಾಗಿ ಕ್ಷೀಣಿಸುತ್ತಲೇ ಇದ್ದು ಇತರ ಮಿತ್ರ ರಾಷ್ಟ್ರಗಳಿಗಿಂತಲೂ ಕಡಿಮೆ ಇದೆ. 2013ರಿಂದಲೂ ಇದೇ ಭೂ ಪ್ರದೇಶದಲ್ಲಿ ಬೆಳವಣಿಗೆಯಾಗುತ್ತಿರುವ ಮಾರುಕಟ್ಟೆಗಳಿಗೆ ಹೋಲಿಸಿದರೆ ಅಂತರ ಹೆಚ್ಚಾಗುತ್ತಲೇ ಇದೆ. ಬಾಂಗ್ಲಾದೇಶವು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸುರಕ್ಷತೆಗಾಗಿ ಮಾಡುವ ಖರ್ಚುಗಳನ್ನು ಹೆಚ್ಚಿಸಿ ಮೂಲ ಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬೇಕಿದೆ ”. ಇದೇ ವೇಳೆ ಭಾರತದಲ್ಲೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಖರ್ಚು ಅತಿ ಕಡಿಮೆ ಎಂದೇ ಹೇಳಬಹುದು. ಐಎಂಎಫ್ ವರದಿಯಲ್ಲೇ ಹೇಳಿರುವಂತೆ “ ಸಾಲದ ಬಿಕ್ಕಟ್ಟಿನ ಅಪಾಯಗಳು ಕಡಿಮೆಯೇ ಇದ್ದರೂ, ಸಾಲ ತೀರುವಳಿ ಮತ್ತು ಆದಾಯದ ನಡುವಿನ ಅನುಪಾತ ಹೆಚ್ಚಾಗುತ್ತಲೇ ಇದೆ. ಅಭಿವೃದ್ಧಿ ಪ್ರೇರಿತ ಮತ್ತು ಪುನಸ್ಸಂಪಾದನೆಗೆ ನೀಡುವ ಬೆಂಬಲವನ್ನೂ ಸೇರಿದಂತೆ, ಆದ್ಯತೆಯ ವೆಚ್ಚಗಳು ಸಾರ್ವಜನಿಕ ಹಣಕಾಸು ನಿರ್ವಹಣೆಯ ಮೇಲೆ ಒತ್ತಡ ಹೆಚ್ಚಿಸುತ್ತದೆ. ”
ಆದಾಗ್ಯೂ ಈ ಕೊರತೆಗಳ ಹೊರತಾಗಿಯೂ ಸರ್ಕಾರವು ಕ್ಷಿಪ್ರಗತಿಯಲ್ಲಿ ಸ್ಪಂದಿಸಿದ್ದು ಕೋವಿದ್ ಸಾಂಕ್ರಾಮಿಕದಿಂದ ಉದ್ಭವಿಸಿದ ಆರ್ಥಿಕ ದುಷ್ಪರಿಣಾಮಗಳನ್ನು ನಿವಾರಿಸಲೆತ್ನಿಸಿದೆ. ಹಣಕಾಸು ರವಾನೆಯ ಪ್ರಮಾಣ ಕೋವಿದ್ ಪೂರ್ವದ ಪರಿಸ್ಥಿತಿಗಿಂತಲೂ ಉತ್ತಮವಾಗಿದ್ದು ಇದರಿಂದ ಬಳಕೆಗೆ ಹೆಚ್ಚು ಪ್ರೋತ್ಸಾಹ ದೊರೆತಿದೆ. 2020ರ ಹಣಕಾಸು ವರ್ಷದಲ್ಲಿ ಜಿಡಿಪಿಯಶೇ 1.7ರಷ್ಟಿದ್ದ ಚಾಲ್ತಿ ಖಾತೆಯ ಕೊರತೆ 2021ರ ಹಣಕಾಸು ವರ್ಷದಲ್ಲಿ ಶೇ 1.3ಕ್ಕೆ ಕುಸಿದಿದೆ. ಭಾರತಕ್ಕೆ ಹೋಲಿಸಿದರೆ ಬಾಂಗ್ಲಾದೇಶ ಚಾಲ್ತಿ ಖಾತೆಯ ಅಧಿಕ್ಯವನ್ನೇ ನಿರಂತರವಾಗಿ ಕಾಣುತ್ತಿದೆ. “ ಆದಾಗ್ಯೂ 2022ರ ಹಣಕಾಸು ವರ್ಷದಲ್ಲಿ ಚಾಲ್ತಿಖಾತೆಯ ಪ್ರಮಾಣ ಜಿಡಿಪಿಯ ಶೇ 2.4ರಷ್ಟಾಗಲಿದೆ. ಏಕೆಂದರೆ ಆಮದು ಪ್ರಮಾಣ ಹೆಚ್ಚಾಗಲಿದ್ದು ಹಣರವಾನೆಯೂ ಸಹ ಸಾಧಾರಣ ಮಟ್ಟದಲ್ಲಿರಲಿದೆ ” ಎಂದು ಐಎಂಎಫ್ ಹೇಳುತ್ತದೆ.
ಹಣಕಾಸು ವರ್ಷ 2022ರಲ್ಲಿ ಅಭಿವೃದ್ಧಿಯು ಶೇ 6.6ರಷ್ಟಾಗಲಿದ್ದು ರಫ್ತು ವ್ಯಾಪಾರದಲ್ಲಿ ವೃದ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತೇಜನಾಪೂರ್ವಕ ಯೋಜನೆಗಳ ಮುಂದುವರಿಕೆ, ಹೊಂದಾಣಿಕೆಯಾಗುವಂತಹ ಹಣಕಾಸು ಮತ್ತು ಆರ್ಥಿಕ ನೀತಿಗಳು ಇದಕ್ಕೆ ಕಾರಣ ಎನ್ನಲಾಗಿದೆ. ಕೋವಿದ್ ಸಂಬಂಧಿ ವೆಚ್ಚವನ್ನು ಹೆಚ್ಚಿಸಲಾಗಿರುವುದರಿಂದ ಹಣಕಾಸು ಕೊರತೆ ಜಿಡಿಪಿಯ ಶೇ 6.1ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಅಷ್ಟಾಗಿ ಕೇಳಿಬರದ ಮತ್ತೊಂದು ಅಂಶವೆಂದರೆ, ಬಾಂಗ್ಲಾದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯಾಗಲು ಮೂಲ ಕಾರಣ ಶೇಖ್ ಹಸೀನಾ ಸರ್ಕಾರವು ( ಆಕೆ ಪ್ರಧಾನಿಯಾಗಿದ್ದ 1996-2001ರ ಅವಧಿ ಮತ್ತು 2009ರಿಂದ ಈಚೆಗೆ) ದೇಶದಲ್ಲಿ ಮೂಲಭೂತವಾದಿ ಶಕ್ತಿಗಳಿಗೆ ಪ್ರಾಬಲ್ಯ ಸಾಧಿಸಲು ಅವಕಾಶವನ್ನು ನೀಡದಿರುವುದು. ಕೋಮು ಆಧಾರದ ಮೇಲೆ ಜನರನ್ನು ಧೃವೀಕರಿಸುವ ಯಾವುದೇ ಪ್ರಯತ್ನಗಳನ್ನು ಕ್ಷಿಪ್ರಗತಿಯಲ್ಲಿ, ನಿರ್ಣಾಯಕವಾಗಿ ನಿಯಂತ್ರಿಸಲಾಗುತ್ತಿದೆ.
ಮುಸ್ಲಿಂ ಜನಸಂಖ್ಯೆಯು ಶೇ 90ರಷ್ಟಿದ್ದರೂ ಇದು ಸಾಧ್ಯವಾಗಿದೆ. ಆಗಾಗ್ಗೆ ಭಾರತದಲ್ಲಿ ನಡೆಯುವ ಕೋಮು ಸಂಘರ್ಷಗಳು ಬಾಂಗ್ಲಾದೇಶದಲ್ಲೂ ಪ್ರಭಾವ ಬೀರುವ ಸಂದರ್ಭದಲ್ಲಿ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುತ್ತದೆ. ಅಚ್ಚರಿದಾಯಕ ಅಂಶವೆಂದರೆ ಶೇಖ್ ಹಸೀನಾ ಅವರ ಪಕ್ಷ 14 ಇತರ ಪಕ್ಷಗಳೊಡನೆ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದರೂ, ಸರ್ಕಾರ ಇನ್ನೂ ಸುಸ್ಥಿರವಾಗಿದೆ. ಬಾಂಗ್ಲಾದೇಶದಲ್ಲಿ ಬಂಗಾಲಿಗಳ ಸಂಖ್ಯೆ ಶೇ 98ರಷ್ಟಿದೆ. ಅವರ ಪೈಕಿ ಹಿಂದೂಗಳ ಸಂಖ್ಯೆ ಶೇ 8.5ರಷ್ಟಿದೆ. ಇತರ ಧಾರ್ಮಿಕ ಅಲ್ಪಸಂಖ್ಯಾತರೆಂದರೆ ಕ್ರೈಸ್ತರು ಮತ್ತು ಬೌದ್ಧರು ಶೇ 1ರಷ್ಟೂ ಇಲ್ಲ.
ಕುತೂಹಲಕಾರಿ ಅಂಶವೆಂದರೆ ಬಾಂಗ್ಲಾದೇಶದ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ, ಹಾಗಾಗಿ ಅಧಿಕೃತವಾಗಿ ಜಾತ್ಯತೀತ ರಾಷ್ಟ್ರವಾಗಿದೆ. ಇಸ್ಲಾಂ ಪ್ರಭುತ್ವದ ಧರ್ಮ ಎಂದು ಪರಿಗಣಿಸಲ್ಪಟ್ಟರೂ ಇದು ಸಾಧ್ಯವಾಗಿದೆ. ಬಾಂಗ್ಲಾದೇಶ ಸರ್ಕಾರವು ಪ್ರತಿಯೊಬ್ಬ ಪ್ರಜೆಗೂ “ ಯಾವುದೇ ಧರ್ಮವನ್ನು ಅನುಸರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕು ನೀಡುತ್ತದೆ. ಪ್ರತಿಯೊಂದು ಧಾರ್ಮಿಕ ಸಮುದಾಯಕ್ಕೂ ಅಥವಾ ಗುಂಪಿಗೂ ತಮ್ಮದೇ ಆದ ದಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಿರ್ವಹಿಸಲು ಅಧಿಕಾರವನ್ನು ನೀಡುತ್ತದೆ. ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಾದರೂ ಯಾವುದೇ ವ್ಯಕ್ತಿಯೂ ಧಾರ್ಮಿಕ ಮಾರ್ಗದರ್ಶನವನ್ನು ಪಡೆಯಬೇಕಿಲ್ಲ ಅಥವಾ ತನ್ನ ಧರ್ಮಕ್ಕೆ ಸಂಬಂಧಿಸದೆ ಇರುವಂತಹ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ, ಪೂಜಾ ವಿಧಾನಗಳಲ್ಲಿ , ನಿರ್ದೇಶನ ನೀಡಿದ್ದರೂ ಸಹ, ಭಾಗವಹಿಸಬೇಕಿಲ್ಲ. ”
ಮಹತ್ತರವಾದ ಸಂಗತಿ ಎಂದರೆ “ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಯು ಧಾರ್ಮಿಕ ಉಪದೇಶ ಅಥವಾ ಮಾರ್ಗದರ್ಶನವನ್ನು ಪಡೆಯಬೇಕಿಲ್ಲ ಒಂದು ವೇಳೆ ನಿರ್ದೇಶನ ಇದ್ದರೂ ಸಹ ಅಂತಹ ಆಚರಣೆಗಳು ತನ್ನ ಧರ್ಮಕ್ಕೆ ಸಂಬಂಧಿಸದೆ ಇದ್ದರೆ ಆ ವ್ಯಕ್ತಿಗಳು ಅಂತಹ ಆಚರಣೆಗಳಲ್ಲಿ, ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಿಲ್ಲ. ” ಹಿಂದೂ ಶಾಲೆಗಳಲ್ಲಿ ಕುರಾನ್ ಪಠಣ ಮಾಡುವ ಅಥವಾ ಮುಸ್ಲಿಂ ಶಾಲೆಗಳಲ್ಲಿ ಗೀತೆಯನ್ನು ಪಠಿಸುವ ಹಪಹಪಿ ಕಾಣಲಾಗುವುದಿಲ್ಲ.
ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು ನೀಡಿರುವ ಈ ಪ್ರಾಶಸ್ತ್ಯ ಮತ್ತು ಮೂಲಭೂತವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದರಿಂದಲೇ ಬಾಂಗ್ಲಾದೇಶವು, ಐಎಂಎಫ್ ಸೂಚಿಸಿರುವ ಹಲವು ನ್ಯೂನತೆಗಳ ಹೊರತಾಗಿಯೂ, ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ. ಬಾಂಗ್ಲಾದೇಶ ಇನ್ನೂ ಉತ್ತಮ ಸಾಧನೆ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿರಬಹುದು. ಯಾವುದೇ ದೇಶ ತನ್ನ ತಲಾ ಜಿಡಿಪಿ ಮತ್ತು ತಲಾ ಆದಾಯವನ್ನು ಪ್ರತಿ ವರ್ಷ ಹೆಚ್ಚಿಸಿಕೊಳ್ಳುವುದೋ ಆ ದೇಶವು ಮುನ್ನಡೆ ಸಾಧಿಸಲು ಸಾಧ್ಯ .