ಏರಿಳಿತಗಳ ನಡುವೆಯೂ ಈ ಬಾರಿ ಕಪ್ ನಮ್ದೆ ಎಂದು ಭರವಸೆ ಮೂಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಪ್ರಶಸ್ತಿ ಎತ್ತಿಹಿಡಿಯಲು ಕೇವಲ ಎರಡು ಹೆಜ್ಜೆ ಮಾತ್ರ ಹತ್ತಬೇಕಿದ್ದು, ಇಂದು ರಾಜಸ್ಥಾನ್ ರಾಯಲ್ಸ್ ಸವಾಲನ್ನು ಮೆಟ್ಟಿನಿಲ್ಲುವುದೇ ಎಂಬ ಕುತೂಹಲ ಮೂಡಿಸಿದೆ.
ಅಹಮದಾಬಾದ್ ನಲ್ಲಿ ಶುಕ್ರವಾರ ನಡೆಯಲಿರುವ ಕ್ವಾಲಿಫೈಯರ್-೨ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ರಾಜಸ್ಥಾನ್ ರಾಯಲ್ಸ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯದ ವಿಜೇತರು ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಆವೃತ್ತಿಯಲ್ಲೇ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ದಾಖಲೆ ಬರೆದಿದ್ದರೆ, 13 ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ಜೊತೆಗೆ ಅಪಾರ ಅಭಿಮಾನಿ ಬಳಗ ಹೊಂದಿರುವ ಆರ್ ಸಿಬಿ ಒಂದೂ ಬಾರಿಯೂ ಪ್ರಶಸ್ತಿ ಗೆದ್ದಿಲ್ಲ.

ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ನಂತರ ಫಾಫ್ ಡು ಪ್ಲೆಸಿಸ್ ನೇತೃತ್ವದಲ್ಲಿ ತಂಡ ಅಸ್ಥಿರ ಪ್ರದರ್ಶನ ನೀಡಿದರೂ ಕ್ವಾಲಿಫೈಯರ್-2ಗೆ ಅದೃಷ್ಟದ ಬೆಂಬಲದೊಂದಿಗೆ ಬಂದಿದೆ. ಇದೇ ಅದೃಷ್ಟ ಮುಂದೆಯೂ ಕೈ ಹಿಡಿದರೆ ಪ್ರಶಸ್ತಿ ಎತ್ತಿ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ.
ರನ್ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಿದರೆ, ರಜತ್ ಪಟಿಡರ್ ಶತಕ ಬಾರಿಸಿ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಕೆಳ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ದಿನೇಶ್ ಕಾರ್ತಿಕ್ ತಂಡವನ್ನು ಆಧರಿಸುತ್ತಿದ್ದಾರೆ. ಇದರಿಂದ ಬ್ಯಾಟಿಂಗ್ ಬಲ ಉತ್ತಮವಾಗಿಯೇ ಇದೆ. ಜೋಶ್ ಹ್ಯಾಜಲ್ ವುಡ್, ಹರ್ಷಲ್ ಪಟೇಲ್, ವಹಿಂದು ಹಸರಂಗ ಪರಿಣಾಮಕಾರಿ ದಾಳಿ ನಡೆಸುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಭರ್ಜರಿ ಫಾರ್ಮ್ ನೆರವು ನೀಡುತ್ತಿದೆ. ಉಳಿದ ಬ್ಯಾಟ್ಸ್ ಮನ್ ಗಳಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಬೌಲಿಂಗ್ ನಲ್ಲಿ ಯಜುರ್ವೆಂದ್ರ ಚಾಹಲ್ ಮಿಂಚಿನ ದಾಳಿ ನಡೆಸುತ್ತಿದ್ದಾರೆ.