ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕನ್ನಡಿಗ ಕೆಎಲ್ ಸಾರಥ್ಯದ ಲಕ್ನೋ ಸೂಪರ್ ಗೈಂಟ್ಸ್ ತಂಡಗಳ ನಡುವೆ ಇಂದು ಸಂಜೆ ನಡೆಯಲಿರುವ ಐಪಿಎಲ್ ಎಲಿಮಿನೇಷನ್ ಪಂದ್ಯಕ್ಕೆ ಮಳೆ ಭೀತಿ ಆವರಿಸಿದೆ.
ಕೋಲ್ಕತಾದಲ್ಲಿ ಬುಧವಾರ ಸಂಜೆ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಆಗಿದೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನ ಪಡೆದಿದ್ದ ಲಕ್ನೋ ಸೂಪರ್ ಗೈಂಟ್ಸ್ ಮತ್ತು ಅದೃಷ್ಟದ ಸಹಾಯದಿಂದ 4ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿದ ಆರ್ ಸಿಬಿ ತಂಡಗಳ ನಡುವೆ ಪಂದ್ಯ ಕುತೂಹಲ ಮೂಡಿಸಿದೆ.
ಈ ಪಂದ್ಯದಲ್ಲಿ ಯಾವುದೇ ತಂಡ ಸೋತರೂ ಪ್ರಶಸ್ತಿ ರೇಸ್ ನಿಂದ ಹೊರಬೀಳಲಿದೆ. ಮತ್ತೊಂದು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ-2ನೇ ಸುತ್ತಿನ ಪಂದ್ಯದಲ್ಲಿ ಆಡಬೇಕಿದೆ. ಇಲ್ಲಿ ಗೆದ್ದವರು ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ರನ್ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಿರುವುದು ತಂಡದ ಆತ್ಮಬಲ ಹೆಚ್ಚಿಸಿದೆ. ಇದರಿಂದ ತಂಡದ ಬ್ಯಾಟಿಂಗ್ ಬಲ ವೃದ್ಧಿಸಿದೆ. ನಾಯಕ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ರಜನ್ ಪಟಿಡರ್ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ರನ್ ಹೊಳೆ ಹರಿಸುತ್ತಿದ್ದಾರೆ.
ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್, ಹ್ಯಾಜಲ್ ವುಡ್, ಮೊಹಮದ್ ಸಿರಾಜ್, ವಹಿಂದು ಅಸರಂಗ ಉತ್ತಮ ದಾಳಿ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ರನ್ ಹೊಳೆ ಹರಿಸಿ ತಂಡವನ್ನು ಆಧರಿಸುತ್ತಿದ್ದಾರೆ. ಗಾಯಗೊಂಡಿದ್ದ ಕೃನಾಲ್ ಪಾಂಡ್ಯ ಈ ಪಂದ್ಯಕ್ಕೆ ಮರಳಿದರೆ ತಂಡ ಮತ್ತಷ್ಟು ಸಮತೋಲನ ಕಂಡುಕೊಳ್ಳಲಿದೆ.