ಪ್ರಸ್ತುತ ಬ್ರಿಟನ್ನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ನಿಮ್ಮ ಇಟಾಲಿಯನ್ ಕನ್ನಡಕವನ್ನು ತೆಗೆದು, ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತುಅರುಣಾಚಲ ಪ್ರದೇಶದ ಸಿಎಂ ಪೇಮ ಖಂಡು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ” ಎಂದು ವ್ಯಂಗ್ಯವಾಡಿದ್ದಾರೆ.
ಅರುಣಾಚಲ ಪ್ರದೇಶದ ನಮ್ಸಾಯಿ ಜಿಲ್ಲೆಯಲ್ಲಿ ₹ 1,000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಅಮಿತ್ ಶಾ ನೆರವೇರಿಸಿ ಮಾತನಾಡಿದ ಅವರು, ಎಂಟು ವರ್ಷಗಳಲ್ಲಿ ಏನಾಯಿತು ಎಂದು ಕಾಂಗ್ರೆಸ್ ನಾಯಕರು ಕೇಳುತ್ತಾರೆ, ಈ ಜನರು ಕಣ್ಣು ಮುಚ್ಚಿ ಎಚ್ಚರವಾಗಿದ್ದಾರೆ, ರಾಹುಲ್ ಬಾಬಾ ತಮ್ಮ ಇಟಾಲಿಯನ್ ಕನ್ನಡಕವನ್ನು ತೆಗೆದು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಪೆಮಾ ಖಂಡು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಬೇಕು” ಎಂದು ಟೀಕಿಸಿದ್ದಾರೆ.
“ಕಳೆದ ಎಂಟು ವರ್ಷಗಳಲ್ಲಿ ಅರುಣಾಚಲದಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ, ಪೆಮಾ ಖಂಡು ಮತ್ತು ನರೇಂದ್ರ ಮೋದಿ ಎಂಟು ವರ್ಷಗಳಲ್ಲಿ ಮಾಡಿದ ಕೆಲಸ ಹಿಂದಿನ 50 ವರ್ಷಗಳಲ್ಲಿ ಆಗಿಲ್ಲ. ಎಂದು ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವರು ಎರಡು ದಿನಗಳ ಕಾಲ ಅರುಣಾಚಲ ಪ್ರದೇಶಕ್ಕೆ ಪ್ರವಾಸದಲ್ಲಿದ್ದಾರೆ. ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.