ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಹಲವು ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದ್ದು ವಿರೋಧ ಪಕ್ಷದ ನಾಯಕರು ಆಡಳಿತ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಇಂದು ಕಠುವಾಗಿ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ನೋಡಿ ಮತ ತಂದು ಕೊಡುತ್ತಾರೆ ಅಂದುಕೊಂಡರೆ ಅದು ಸುಳ್ಳು ಎಂದು ಹೇಳಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದ ನಾಗವಾರ ರಿಂಗ್ ರೋಡ್ ಜಂಕ್ಷನ್, ಥಣಿಸಂದ್ರ, ಹೆಬ್ಬಾಳ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಲ್ಲಿ ಇಂದು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್ ಡಿಕೆ, ಬಿಜೆಪಿಯವರಿಗೆ ಹೊಟ್ಟೆ ಹುರಿ ಶುರುವಾಗಿರಬೇಕು. ಹಣ, ಅಧಿಕಾರದ ಮತ್ತಲ್ಲಿ ತೇಲಾಡುತ್ತಿದ್ದಿರಾ? ಪ್ರಧಾನಿ ನರೇಂದ್ರ ಮೋದಿ ನೋಡಿ ಮತ ತಂದು ಕೊಡುತ್ತಾರೆ ಅಂದುಕೊಂಡರೆ ಅದು ಸುಳ್ಳು. ಇಡೀ ಬೆಂಗಳೂರನ್ನು ಆವರಿಸಿಕೊಳ್ಳುತ್ತಿರಾ ಅಂದರೆ ಅದೂ ಸುಳ್ಳು. ಬನ್ನಿ ಜನರ ಕಥೆ ನೋಡಿ, ಅಭಿವೃದ್ಧಿ ಹೆಸರಲ್ಲಿ ತಿಂದಿದ್ದು ಸಾಕು ಎಂದು ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ರಾಜಕಾಲುವೆಗೆ ಹಣ ಕೊಡುತ್ತೇವೆಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರಲ್ಲಾ, ಅದನ್ನಾದರೂ ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದು ಬಿಜೆಪಿ ಸಚಿವರಿಗೆ ಸಲಹೆ ನೀಡಿದರು.
ಬೆಂಗಳೂರು ನಗರ ಜನತೆಗೆ ಹೊಸ ಪ್ರಣಾಳಿಕೆ ಅಂತ ಕಾಂಗ್ರೆಸ್ ಹೇಳುತ್ತೆ. ಐದು ವರ್ಷ ಹಾಗಾದ್ರೆ ಏನು ಮಾಡಿದ್ರಿ. ನಾನು ಐದು ಟೌನ್ ಶಿಪ್ ಮಾಡಲು ನೀಲಿ ನಕ್ಷೆ ತಯಾರು ಮಾಡಿದ್ದೆ. ನೀವು ಯಾರಾದರು ಸಹಕಾರ ಕೊಟ್ಟಿರಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕೊರಿಯನ್ ಕಂಪನಿ ಬಂದಿತ್ತು ಇದಕ್ಕೆ. ಆದರೆ ಕ್ಲಿಯರೆನ್ಸ್ ಕೊಡಲು ಮುಂದಾಗಿದ್ದೆ. ಬಿಜೆಪಿ ಸರ್ಕಾರ ಏನು ಮಾಡಿತು. ನಮ್ಮ ಬಗ್ಗೆ ಚರ್ಚೆ ಮಾಡ್ತೀರಾ?. ಕೆರೆ ಕಟ್ಟೆ ನುಂಗಿರುವವರು ನೀವು. ಇದರ ಬಗ್ಗೆ ಜನ ಹೇಳುತ್ತಿದ್ದಾರೆ. ಒಂದು ಕಾಂಪೌಂಡ್ ತೆಗೆಸಲು ಯೋಗ್ಯತೆ ಇದೆಯೇ? ಕಾಟಾಚಾರಕ್ಕೆ ನಾನು ಪ್ರದಕ್ಷಿಣೆ ಹಾಕುತ್ತಿಲ್ಲ. ಜನ ತೀರ್ಮಾನ ಮಾಡುತ್ತಾರೆ ಎಂದರು.






