ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದಾಗ ಆರಂಭವಾದ ಷೇರುಪೇಟೆಯಲ್ಲಿನ ರಕ್ತದೋಕುಳಿ ನಿಲ್ಲುತ್ತಲೇ ಇಲ್ಲ. ಗುರುವಾರವೂ ಷೇರುಮಾರುಕಟ್ಟೆ ತೀವ್ರ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ 1500 ಅಂಶಗಳಷ್ಟು ಕುಸಿದರೆ, ನಿಫ್ಟಿ 400 ಮತ್ತು ಬ್ಯಾಂಕ್ ನಿಫ್ಟಿ 800 ಅಂಶಗಳಷ್ಟು ಕುಸಿದಿವೆ.
ನಿಧಾನಗತಿಯಲ್ಲಿ ಷೇರುಪೇಟೆಯಲ್ಲಿ ಕರಡಿ ಹಿಡಿತ ಬಿಗಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯೆಯಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಮೇ 4ರಂದು ಆರ್ಬಿಐ ಶೇ.0.40ರಷ್ಟು ಬಡ್ಡಿ ದರ ಏರಿಕೆ ಮಾಡಿತ್ತು. ಹಣದುಬ್ಬರ ನಿಯಂತ್ರಿಸುವುದು ಬಡ್ಡಿದರ ಏರಿಕೆಯ ಉದ್ದೇಶವಾಗಿತ್ತು. ಬಡ್ಡಿದರ ಏರಿಕೆಗೆ ಷೇರು ಮಾರುಕಟ್ಟೆ ವ್ಯತಿರಿಕ್ತವಾಗಿ ಸ್ಪಂದಿಸಿದೆ. 57,200 ಅಂಶಗಳಷ್ಟಿದ್ದ ಸೆನ್ಸೆಕ್ಸ್ ಸತತ ಕುಸಿತ ದಾಖಲಿಸಿ 52,700 ಅಂಶಗಳಿಗೆ ಇಳಿದಿದೆ. ಸರಿಸುಮಾರು ಶೇ.10ರಷ್ಟು ಕುಸಿತ ದಾಖಲಿಸಿದಂತಾಗಿದೆ. ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕಗಳೂ ಸಹ ಶೇ.10ರಷ್ಟು ಕುಸಿದಿವೆ. ಮಾರುಕಟ್ಟೆ ಕುಸಿದಾಗಲೆಲ್ಲ ಬೆಂಬಲವಾಗಿ ನಿಲ್ಲುತ್ತಿದ್ದು ಐಟಿ ವಲಯದ ಸೂಚ್ಯಂಕವೂ ತೀವ್ರ ಕುಸಿತದ ಹಾದಿಯಲ್ಲಿದೆ. ಹೀಗಾಗಿ ಕರಡಿ ಹಿಡಿತ ಬಿಗಿಗೊಳ್ಳುತ್ತಿದೆ .ಗುರುವಾರ ಐಟಿ, ಆಟೋ, ರಿಯಾಲ್ಟಿ, ಎಫ್ಎಂಸಿಜಿ, ಎನರ್ಜಿ, ಇನ್ಫ್ರಾ ಸೇರಿದಂತೆ ಎಲ್ಲಾ ವಲಯಗಳ ಸೂಚ್ಯಂಕಗಳೂ ಶೇ.2ರಿಂದ 5ರಷ್ಟು ಕುಸಿತ ದಾಖಲಿಸಿವೆ.
ಷೇರುಪೇಟೆ ಕುಸಿತದ ಜತೆಗೇ ರೂಪಾಯಿ ಮೌಲ್ಯವು ಮತ್ತಷ್ಟು ಕುಸಿಯುತ್ತಿದೆ. ಗುರುವಾರ ಪ್ರತಿ ಡಾಲರ್ ಗೆ 77.73ರ ಆಜುಬಾಜಿನಲ್ಲಿ ರೂಪಾಯಿ ವಹಿವಾಟಾಗಿದೆ. ಮುಂಬರುವ ದಿನಗಳಲ್ಲಿ ರೂಪಾಯಿ ಮೌಲ್ಯವು 80ಗಡಿದಾಟಿ ಕುಸಿಯುವ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ. ಜಾಗತಿಕವಾಗಿ ಡಾಲರ್ ಮೌಲ್ಯ ಏರುತ್ತಲೇ ಇದೆ. ಉದಯಿಸುತ್ತಿರುವ ರಾಷ್ಟ್ರಗಳ ಕರೆನ್ಸಿಗಳ ಮೌಲ್ಯ ಕುಸಿಯುತ್ತಿದೆ.
ಮುಗಿಯದ ರಷ್ಯಾ- ಉಕ್ರೇನ್ ಯುದ್ಧ, ತೀವ್ರಗತಿಯಲ್ಲಿರುವ ಹಣದುಬ್ಬರ, ಹಣದುಬ್ಬರ ತಡೆಗೆ ಆರ್ಬಿಐ ಬಡ್ಡಿದರ ಏರಿಕೆ, ಮುಂದೆ ಮತ್ತಷ್ಟು ಏರಿಸುವ ನಿರೀಕ್ಷೆ, ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವಾ ದರಗಳ ತೀವ್ರ ಏರಿಕೆ ಈ ಎಲ್ಲಾ ಕಾರಣದಿಂದಾಗಿ ಷೇರುಪೇಟೆ ಕುಸಿತದ ಹಾದಿಯಲ್ಲಿದೆ. ಅಮೆರಿಕಾ ಮತ್ತು ಇಂಗ್ಲೆಂಡ್ ದೇಶಗಳಲ್ಲೂ ಹಣದುಬ್ಬರ 40 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಈ ದೇಶಗಳ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರ ಏರಿಸಿವೆ, ಮತ್ತಷ್ಟು ಏರಿಸಲು ಸಿದ್ಧತೆ ನಡೆಸಿವೆ. ಇದು ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಷೇರುಪೇಟೆ ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಜೂನ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಸುತ್ತು ಬಡ್ಡಿದರ ಏರಿಕೆ ಮಾಡಲಿದೆ. ಬಡ್ಡಿದರ ಏರಿಕೆ ಪ್ರಮಾಣವು 50ರಿಂದ 100 ಅಂಶಗಳಷ್ಟಾಗಬಹುದು (ಶೇ.0.50 ರಿಂದ ಶೇ.1 ರಷ್ಟು). ಈ ಪ್ರಮಾಣದಲ್ಲಿ ಬಡ್ಡಿ ಏರಿದರೆ ಷೇರುಪೇಟೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅಸ್ಥಿರತೆ ಮುಂದುವರೆದಿದೆ. ಅಸ್ಥಿರತೆಯ ನಡುವೆಯೇ ಏರುಹಾದಿಯಲ್ಲಿ ಸಾಗಿದೆ. ಡಬ್ಲ್ಯೂಟಿಐ ಮತ್ತು ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರೆಲ್ಲಿಗೆ 108-115 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿವೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮುನ್ನ 85 ಡಾಲರ್ ಆಜುಬಾಜಿನಲ್ಲಿದ್ದ ಕಚ್ಚಾ ತೈಲ ಒಂದು ಹಂತದಲ್ಲಿ 140 ಡಾಲರ್ ಗೆ ಜಿಗಿದಿತ್ತು. ನಂತರ 100 ಡಾಲರ್ ಮಟ್ಟದಿಂದ ಕೆಳಕ್ಕಿಳಿದಿಲ್ಲ. ಕಚ್ಚಾ ತೈಲ ದರ ಏರಿಕೆಯಿಂದಾಗಿ ಭಾರತವಷ್ಟೇ ಅಲ್ಲದೇ, ಇಂಧನ ಆಮದು ರಾಷ್ಟ್ರಗಳೆಲ್ಲವೂ ಸಂಕಷ್ಟ ಎದುರಿಸುತ್ತಿವೆ.