ಧಾರವಾಡದಲ್ಲಿ ಶ್ರೀರಾಮಸೇನೆಯ ಗೂಂಡಾ ಪಡೆಯಿಂದ ದಾಳಿಗೊಳಗಾಗಿ ನಷ್ಟ ಅನುಭವಿಸಿದ್ದ ತಳ್ಳುಗಾಡಿಯ ಕಲ್ಲಂಗಡಿ ವ್ಯಾಪಾರಿ ನಬಿಸಾಬ್ ಕಿಲ್ಲೇದಾರ್ ಎಂಟನೇ ವಾರ್ಷಿಕ ಮೇ ಸಾಹಿತ್ಯ ಮೇಳವನ್ನು ಉದ್ಘಾಟಿಸಲು ಸಜ್ಜಾಗಿದ್ದಾರೆ. ಮೇ 27 ಮತ್ತು 28 ರಂದು ಧಾರವಾಡ ನಗರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಮಿಕ ವರ್ಗದವರಿಗೆ ವೇದಿಕೆ ಕಲ್ಪಿಸುವ ಗುರಿ ಹೊಂದಲಾಗಿದೆ. ಸಮ್ಮೇಳನದ ಸಂಘಟಕರಲ್ಲಿ ಒಬ್ಬರಾದ ಬಸವರಾಜ ಸೂಳಿಭಾವಿ ಅವರು ಕಾರ್ಯಕ್ರಮದಲ್ಲಿ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಧಾರವಾಡದ ಹನುಮಾನ ಮಂದಿರದ ಹೊರಗೆ ಕಲ್ಲಂಗಡಿ ಹಣ್ಣು ಮಾರುತ್ತಿದ್ದ ನಬಿಸಾಬ್ ಕಿಲ್ಲೇದಾರ್ ಅವರ ಗಾಡಿಯ ಮೇಲೆ ಶ್ರೀರಾಮ ಸೇನೆಯ ಕಾರ್ಯಕರ್ತರು, ದಾಳಿ ನಡೆಸಿ ಗಾಡಿಯನ್ನು ಧ್ವಂಸಗೊಳಿಸಿದ್ದರು. ಕಲ್ಲಂಗಡಿಯನ್ನು ರಸ್ತೆಗೆಸೆದು ಒಡೆದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಬೀಸಾಬ್ ಅವರಿಗೆ ನೈತಿಕ ಸ್ಥೈರ್ಯ ತುಂಬಲು ಹಾಗೂ ಬೆಂಬಲಿಸಿ ಹಲವು ಸಾಮಾಜಿಕ ಸಂಘಟನೆಗಳು ಅವರನ್ನು ಸಂಪರ್ಕಿಸಿ ಸಹಾಯ ಹಸ್ತ ಚಾಚಿತ್ತು. ಅದರ ಮುಂದುವರಿದ ಭಾಗವಾಗಿ ಮೇ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸಲಾಗಿದೆ ಎನ್ನಲಾಗಿದೆ.
ನಬಿಸಾಬ್ ಅವರಲ್ಲದೆ ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ರೈತರು ಸೇರಿದಂತೆ ಐವರನ್ನು ಮೇ ಸಾಹಿತ್ಯ ಮೇಳವನ್ನು ಉದ್ಘಾಟಿಸಲು ಆಹ್ವಾನಿಸಲಾಗಿದೆ. ದಾವಣಗೆರೆಯ ತಾಜ್ ಪ್ಯಾಲೇಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಮೇ ಸಾಹಿತ್ಯ ಮೇಳವು ವಾರ್ಷಿಕ ಕಾರ್ಯಕ್ರಮವಾಗಿದೆ. ಸಮಕಾಲೀನ ವಿಷಯಗಳನ್ನು ಆಧರಿಸಿ ಮುಖ್ಯ ಭಾಷಣ ಮಾಡಲು ಪ್ರಮುಖರನ್ನು ಆಹ್ವಾನಿಸಲಾಗಿದೆ ಎಂದು ಬಸವರಾಜ ಸೂಳಿಭಾವಿ ಹೇಳಿದ್ದಾರೆ. ಈ ವರ್ಷ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಮುಖ್ಯ ಭಾಷಣ ಮಾಡಲಿದ್ದಾರೆ. ಚಂದ್ರು ಅವರ ಜೀವನದ ಕಥೆಯನ್ನೇ ಆಧರಿಸಿ ಬಂದ ʼಜೈ ಭೀಮ್ʼ ಚಿತ್ರ ದೊಡ್ಡ ಯಶಸ್ಸನ್ನು ಕಂಡಿತ್ತು.
ಹಿರಿಯ ಕೃಷಿ ಪತ್ರಕರ್ತ ಪಿ.ಸಾಯಿನಾಥ್ ಅವರು ‘ಗ್ರಾಮೀಣ ಭಾರತ ಬಿಕ್ಕಟ್ಟು’ ಕುರಿತು ಉಪನ್ಯಾಸ ನೀಡುತ್ತಿದ್ದಾರೆ. ಸುಧೀಂದ್ರ ಕುಲಕರ್ಣಿ ಅವರು ‘ವೈವಿಧ್ಯತೆ ಮತ್ತು ದಬ್ಬಾಳಿಕೆಯ ಹಿಂಸೆ’ ಕುರಿತು ಮಾತನಾಡುತ್ತಿದ್ದಾರೆ. ಕನ್ನಡದ ಜನಪ್ರಿಯ ದಿನಪತ್ರಿಕೆಯ ಖ್ಯಾತ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಸ್ವಾತಂತ್ರ್ಯ ಗಳಿಸಿದ ಕಳೆದ ಏಳು ದಶಕಗಳಲ್ಲಿ ದೇಶ ಏನು ಗಳಿಸಿದೆ ಮತ್ತು ಕಳೆದುಕೊಂಡಿದೆ ಎಂಬುದನ್ನು ಕಂಡುಹಿಡಿಯಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತದೆ. ದೇಶದ ಸಾಂವಿಧಾನಿಕ ಬಿಕ್ಕಟ್ಟು ಮತ್ತು ಒಕ್ಕೂಟದ ಆಶಯಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಬಸವರಾಜ ಸೂಳಿಭಾವಿ ಹೇಳಿದ್ದಾರೆ.
ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಅವರು ಕರ್ನಾಟಕ ಕೃಷಿ ಬಿಕ್ಕಟ್ಟಿನ ಬಗ್ಗೆ ಬೆಳಕು ಚೆಲ್ಲಲಿದ್ದಾರೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಉದ್ವಿಗ್ನತೆಗಳ ಕುರಿತು ನಸ್ರೀನ್ ಮಿಟಾಯಿ ಮಾತನಾಡಲಿದ್ದಾರೆ. ರಾಜ್ಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದೇವೆ.ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸಲು ಸಮಾನ ಮನಸ್ಕ ಲೇಖಕರ ತಂಡ ರಚಿಸಲಾಗುವುದು ಎಂದು ಸೂಳಿಭಾವಿ ವಿವರಿಸಿದ್ದಾರೆ.
ದೆಹಲಿಯ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಕಾರ್ಯದರ್ಶಿ ಕವಿತಾ ಕೃಷ್ಣನ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಲಡಾಯಿ ಪ್ರಕಾಶನ, ಕವಿ ಪ್ರಕಾಶನ ಕವಲಕಿ, ಚಿತ್ತಾರ ಕಲಾ ಬಳಗ ಸೇರಿದಂತೆ ಹಲವು ಚಿಂತಕರು, ಕಾರ್ಯಕರ್ತರು ಕೈಜೋಡಿಸಿ ಕಾರ್ಯಕ್ರಮ ಆಯೋಜಿಸಿದ್ದಾರೆ.
ಮಾಹಿತಿ: IANS












