• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮತಶ್ರದ್ಧೆ ಮತದ್ವೇಷ ಮತ್ತು ಬೌದ್ಧಿಕ ನಿಷ್ಕ್ರಿಯತೆ

ನಾ ದಿವಾಕರ by ನಾ ದಿವಾಕರ
May 10, 2022
in ಅಭಿಮತ
0
ಮತಶ್ರದ್ಧೆ ಮತದ್ವೇಷ ಮತ್ತು ಬೌದ್ಧಿಕ ನಿಷ್ಕ್ರಿಯತೆ
Share on WhatsAppShare on FacebookShare on Telegram

ಹೈದರಾಬಾದ್‌ನಲ್ಲಿ ನಡೆದಿರುವ ದಲಿತ ವ್ಯಕ್ತಿಯೊಬ್ಬನ ದಾರುಣ ಹತ್ಯೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಸ್ಲಿಮರಲ್ಲಿ ಮೇಲ್ಜಾತಿಗೆ ಸೇರಿದ ಯುವತಿಯೊಬ್ಬಳನ್ನು ಮದುವೆಯಾಗಿದ್ದ ಅಸ್ಪೃಶ್ಯ ಸಮುದಾಯದ ವ್ಯಕ್ತಿಯನ್ನು ಯುವತಿಯ ಸಂಬಂಧಿಕರು ಹತ್ಯೆ ಮಾಡಿರುವುದು ಲವ್‌ ಜಿಹಾದ್‌ ಪರಿಕಲ್ಪನೆಯ ಮತ್ತೊಂದು ಸ್ವರೂಪವಾಗಿ ಕಾಣುತ್ತದೆ. ಈ ಹತ್ಯೆಯ ಹಿಂದೆ ಇರುವುದು ಮತಶ್ರೇಷ್ಠತೆಯೋ, ಜಾತಿ ಶ್ರೇಷ್ಠತೆಯೋ ಅಥವಾ ಇವೆರಡನ್ನೂ ಮೀರಿದ ಅಮಾನುಷತೆಯೋ ? ಯಾವುದೇ ರೀತಿಯ ಶ್ರದ್ಧೆ ಶ್ರೇಷ್ಠತೆಯ ವ್ಯಸನಕ್ಕೆ ಕಾರಣವಾದಾಗ ಸಹಜವಾಗಿಯೇ ಜಾತಿ-ಮತ ಪ್ರಜ್ಞೆ ತನ್ನ ಮಾನವೀಯ ಸ್ಪರ್ಶವನ್ನು ಕಳೆದುಕೊಳ್ಳುತ್ತದೆ. ಮತಧರ್ಮಗಳ ಸಾಂಸ್ಥಿಕ ನೆಲೆಗಳಲ್ಲಿ ಬೇರು ಬಿಡುವ ಶ್ರೇಷ್ಠತೆಯ ವ್ಯಸನ ಮನುಷ್ಯನಲ್ಲಿ ಕ್ರೌರ್ಯವನ್ನೂ ಬಿತ್ತುವುದನ್ನು ಮನುಜ ಇತಿಹಾಸದ ಎಲ್ಲ ಕಾಲಘಟ್ಟಗಳಲ್ಲೂ, ಎಲ್ಲ ಮತಧರ್ಮಗಳ ಇತಿಹಾಸಗಳಲ್ಲೂ ಗುರುತಿಸಬಹುದು. ಸಾತ್ವಿಕ ರೂಪದ ಕ್ರೌರ್ಯ ಕೌಟುಂಬಿಕ ಚೌಕಟ್ಟಿನಲ್ಲಿ ವ್ಯಕ್ತವಾಗುತ್ತಲೇ ಇದ್ದರೂ ಅದನ್ನು ಸಹಜ ಜೀವನ ಕ್ರಿಯೆ ಎಂದು ಸ್ವೀಕರಿಸುವ ಮಟ್ಟಿಗೆ ಮನುಷ್ಯನ ಮನಸ್ಸನ್ನು ಜಾತಿ-ಮತ ಪ್ರಜ್ಞೆ ಆವರಿಸಿರುತ್ತದೆ. ವೈದಿಕ ಶಾಹಿ ಮತ್ತು ಪುರೋಹಿತಶಾಹಿಯು ವಿಧಿಸುವ ಅನೇಕ ಆಚರಣೆಗಳಲ್ಲಿ ಇದನ್ನು ವರ್ತಮಾನದ ಸಂದರ್ಭದಲ್ಲೂ ಗುರುತಿಸಬಹುದು.

ADVERTISEMENT

ಇದೇ ವೇಳೆ ಭಾರತೀಯ ಸಮಾಜದಲ್ಲಿ ಜಾತಿ ಶ್ರೇಷ್ಠತೆಯ ಮೇಲರಿಮೆ ಮತ್ತು ಪಾರಮ್ಯ ಹೇಗೆ ಅನ್ಯ ಮತಧರ್ಮಗಳಲ್ಲೂ ಬೇರುಬಿಟ್ಟಿದೆ ಎನ್ನುವುದನ್ನೂ ಈ ಘಟನೆ ನಿರೂಪಿಸಿದೆ. ಪ್ರೀತಿ ಪ್ರೇಮ ಸಹಬಾಳ್ವೆ ಮತ್ತು ಮನುಜ ಸಂಬಂಧಗಳ ನಡುವೆ ನುಸುಳುವ ಜಾತಿ ಮತಗಳ ವಿಷಗೋಡೆಗಳು ಒಂದು ಸಮಾಜವನ್ನು ಹೇಗೆ ನಿರ್ವೀರ್ಯಗೊಳಿಸುತ್ತವೆ ಎನ್ನುವ ಪ್ರಾತ್ಯಕ್ಷಿಕೆಯನ್ನು ಆಧುನಿಕ ಭಾರತ, ಮರ್ಯಾದೆಗೇಡು ಹತ್ಯೆಗಳ ಮೂಲಕ, ಗೌರವ ಹತ್ಯೆಗಳ ಮೂಲಕ ನಮ್ಮ ಮುಂದಿಟ್ಟಿದೆ. ಜಾತಿ ಶ್ರೇಷ್ಠತೆ ಮತ್ತು ಅಹಮಿಕೆ ಅಸ್ಮಿತೆಗಳ ಚೌಕಟ್ಟಿನೊಳಗೆ ನಿರ್ಬಂಧಕ್ಕೊಳಗಾದಾಗ, ಸ್ವಂತ ಮಕ್ಕಳನ್ನೂ ಹತ್ಯೆಗೈಯ್ಯುವ ಮನಸ್ಥಿತಿಯನ್ನು ಹೆತ್ತವರಲ್ಲಿ ಕಾಣಬಹುದು. ತಮ್ಮ ಕುಟುಂಬದ ಗೌರವ, ಅಂತಸ್ತು ಈ ಸಂದರ್ಭದಲ್ಲಿ ನಿಮಿತ್ತ ಮಾತ್ರವಾಗುತ್ತದೆ. ಅಂತರ್ಜಾತಿ, ಅಂತರ್‌ ಧರ್ಮೀಯ ವಿವಾಹಗಳ ಸಂದರ್ಭಗಳಲ್ಲಿ ನಡೆಯುವ ಅಮಾನುಷ ಹತ್ಯೆ ಮತ್ತು ಹಲ್ಲೆಗಳನ್ನು ಈ ದೇಶದ ವಿಚಾರವಂತ ಬೌದ್ಧಿಕ ವರ್ಗವೂ ಸಹ ಗೌರವ ಅಥವಾ ಮರ್ಯಾದಾ ಹತ್ಯೆ ಎಂದೇ ವ್ಯಾಖ್ಯಾನಿಸುತ್ತಾ ಬಂದಿದೆ. ಇಲ್ಲಿ ಗೌರವ ಅಥವಾ ಹತ್ಯೆ ಯಾರದು ? ಈ ಪ್ರಶ್ನೆ ಇನ್ನಾದರೂ ನಮ್ಮನ್ನು ಕಾಡಬೇಕಿದೆ.

ಭಾರತ ಹೀಗಿರಲಿಲ್ಲ !! ಹೀಗೆ ಹೇಳುವಷ್ಟು ಆತ್ಮಸ್ಥೈರ್ಯ ಬಹುಶಃ ನಮ್ಮೊಳಗೆ ಇರಲು ಸಾಧ್ಯವಿಲ್ಲ. ಏಕೆಂದರೆ ಜಾತಿಯ ಗಡಿ ರೇಖೆಗಳನ್ನು ದಾಟುವ ಮನಸುಗಳ ಮೇಲೆ ನಿರ್ಬಂಧಗಳನ್ನು ಹೇರುವ ಧಾರ್ಮಿಕ ಸ್ಮೃತಿಗಳು ಶತಮಾನಗಳಿಂದ ಜನಮಾನಸದಲ್ಲಿ ಬೇರೂರಿದ್ದು ಇಂದಿಗೂ ಸಹ  ಬೌದ್ಧಿಕವಾಗಿ, ಭೌತಿಕವಾಗಿ ಜೀವಂತವಾಗಿವೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವ ಜಾತಿ ಸಂಕೋಲೆಗಳು ಮತ್ತು ಚೌಕಟ್ಟುಗಳನ್ನು ಆಧುನಿಕತೆಯಾಗಲೀ, ಡಿಜಿಟಲ್‌ ಯುಗದ ತಂತ್ರಜ್ಞಾನಗಳಾಗಲೀ ಭೇದಿಸಲು ಸಾಧ್ಯವಾಗಿಲ್ಲ. ಶಿಕ್ಷಣ, ಜ್ಞಾನಾರ್ಜನೆ, ಅಧ್ಯಯನ ಮತ್ತು ಸಾಹಿತ್ಯ ವಲಯದ ಸೃಜನಾತ್ಮಕ ಸಪ್ರಯತ್ನಗಳನ್ನೂ ಮೀರಿ, ಜಾತಿ ಪ್ರಜ್ಞೆ ಜನಮಾನಸದಲ್ಲಿ ಬೇರೂರುತ್ತಿದೆ. ಸಾರ್ವಜನಿಕವಾಗಿ ಸಂವಿಧಾನವನ್ನು ಗೌರವಿಸುವ ಮನಸುಗಳೇ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಮನುಸ್ಮತಿಯ ಕಠೋರ ನಿಯಮಗಳನ್ನು ಅನುಸರಿಸುತ್ತವೆ. ಸಮಾಜದಲ್ಲಿ ಜಾತ್ಯತೀತತೆಗಾಗಿ ಹಂಬಲಿಸುವ ಮನಸುಗಳೇ ಇಸ್ಲಾಂ ಅಥವಾ ಕ್ರೈಸ್ತ ಮತದ ಧಾರ್ಮಿಕ ಬೋಧನೆಗಳಿಂದಾಚೆಗೆ ತಮ್ಮ ಬದುಕು ರೂಪಿಸಿಕೊಳ್ಳಲಿಚ್ಚಿಸುವುದಿಲ್ಲ. ಈ ದ್ವಂದ್ವದ ನಡುವೆಯೇ ಮತಧಾರ್ಮಿಕ ಕಟ್ಟಳೆಗಳು, ಜಾತಿ ವ್ಯವಸ್ಥೆಯ ರೀತಿ ರಿವಾಜುಗಳು ನಮ್ಮ ನಡುವೆ ಒಂದು ಕ್ರೂರ ಸಮಾಜವನ್ನು ನಿರ್ಮಿಸಿಬಿಟ್ಟಿವೆ. ಈ ಕ್ರೌರ್ಯದ ಒಂದು ಆಯಾಮವನ್ನು ಹೈದರಾಬಾದ್‌ನಲ್ಲಿ ಕಂಡಿದ್ದೇವೆ.

ಜಾತಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ತಾರತಮ್ಯಗಳು ಮತ್ತು ಸ್ಪೃಶ್ಯಾಸ್ಪೃಶ್ಯತೆಯ ಪರಿಕಲ್ಪನೆಗಳು ಆಧುನಿಕ ಸಮಾಜದ ಮುಂದುವರೆದ ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ತಮ್ಮದೇ ಆದ ಹೊಸ ರೂಪಗಳನ್ನು ಪಡೆದುಕೊಳ್ಳುತ್ತವೆ. ಮನುಷ್ಯ ಸಮಾಜದ ಆರ್ಥಿಕ ಪ್ರಗತಿಯಾಗಲೀ, ಬೌದ್ಧಿಕ ಬೆಳವಣಿಗೆಯಾಗಲೀ ಗ್ರಹಿಕೆಯ ನೆಲೆಯಲ್ಲಿ ಕೊಂಚ ಪರಿವರ್ತನೆಯನ್ನುಂಟುಮಾಡಬಹುದು. ಈ ಮೇಲ್ನೋಟದ ಪರಿವರ್ತನೆಯನ್ನು ನೋಡಿಯೇ ನಾವು, ಜಾತಿ ಎಲ್ಲಿದೆ ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡು, ನಗರೀಕರಣಗೊಂಡ ಬದುಕಿನ ನಡುವೆ ಸಮನ್ವಯವನ್ನು ಕಾಣಲು ಬಯಸುತ್ತೇವೆ. ಆದರೆ,  ಜನ್ಮದಾರಭ್ಯ ಅಂಟಿಕೊಂಡೇ ಬರುವ ಜಾತಿ ಸೂಚಕ ನಡವಳಿಕೆ, ಚಟುವಟಿಕೆ ಮತ್ತು ಆಚರಣೆಗಳು ಭಾರತೀಯರಲ್ಲಿ ಜಾತಿ ಪ್ರಜ್ಞೆಯನ್ನು ಮಿದುಳಿನ ಮೂಳೆಯೊಂದರ ಸುಭದ್ರ ಕಪಾಟಿನಲ್ಲಿ ರಕ್ಷಿಸಿಕೊಂಡೇ ಬರುತ್ತವೆ.

ಗಾಂಧಿ ಬಯಸಿದಂತೆ ಸಮಾಜದ ಸವರ್ಣೀಯ ಸಮುದಾಯ ಅಥವಾ ಮೇಲ್ಜಾತಿಯ ಮನಸುಗಳು ಲೌಕಿಕ ಪ್ರಪಂಚಕ್ಕೆ ತೆರೆದುಕೊಂಡಂತೆಲ್ಲಾ ತಮ್ಮ ಸುತ್ತಲಿನ ಗಡಿರೇಖೆಗಳನ್ನು ಅಳಿಸಿಹಾಕುವ ಮನೋಭಾವ ಬೆಳೆಸಿಕೊಳ್ಳುವುದೂ ಇಲ್ಲ.  ಅಥವಾ ಆರ್ಥಿಕ ಮುಂಚಲನೆಯು ಜಾತಿ ಪ್ರಜ್ಞೆಯನ್ನು ದುರ್ಬಲಗೊಳಿಸಬಹುದು ಎಂಬ ಆಲೋಚನೆಯೂ ಸಹ ಸಮರ್ಥನೀಯವಲ್ಲ. ಹಾಗಾಗಿಯೇ ಜಾತಿಯನ್ನು ಒಂದು ನಾಗರಿಕತೆ ಎಂದೇ ಪರಿಗಣಿಸಿದ್ದ ಅಂಭೇಡ್ಕರ್‌ ಜಾತಿ ವಿನಾಶವೊಂದೇ ಸಮನ್ವಯದ ಹಾದಿ ಎಂದು ಘೋಷಿಸಿದ್ದರು. ಏಕೆಂದರೆ ಬದುಕಿನ ಹಾದಿಯಲ್ಲಿ ಈ ಜಾತಿ ಸೂಚಕ ಅಸ್ಮಿತೆ ಮತ್ತು ಅಸ್ತಿತ್ವವೇ ಜೀವನೋಪಾಯ ಮತ್ತು ಜೀವನಾಧಾರದ ಆಕರಗಳೂ ಆಗಿಬಿಡುತ್ತವೆ.  ಆಧುನಿಕ ಶಿಕ್ಷಣ ಮತ್ತು ಆಧುನಿಕತೆಯ ಜೀವನಶೈಲಿ ಜಾತಿಗಳ ಇರುವಿಕೆಯ ಬಗ್ಗೆ ಪ್ರಜ್ಞೆ ಮೂಡಿಸಲು ಸಾಧ್ಯ ಆದರೆ ತನ್ನೊಳಗಿನ ಶ್ರೇಷ್ಠತೆಯ ಮೇಲರಿಮೆಯನ್ನು ತೊಡೆದುಹಾಕಲು ಯಾರನ್ನೂ ಪ್ರೇರೇಪಿಸುವುದಿಲ್ಲ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯರನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮೇಲೇರುವ ಮನಸ್ಥಿತಿಯೊಂದಿಗೇ, ಈ ಮೆಟ್ಟಿಲುಗಳಲ್ಲಿ “ಅನ್ಯ ಜಾತಿ- ಅನ್ಯಮತ ”ಗಳ ಅಸ್ಮಿತೆಗಳನ್ನೂ ಗುರುತಿಸುತ್ತಾ ಹೋಗುವ ಸಾಧ್ಯತೆಗಳೇ ಹೆಚ್ಚು.

ನಾವು ಗುರುತಿಸುವ ಗೌರವ ಹತ್ಯೆಗಳಲ್ಲಿ ಒಂದು ಕುಟುಂಬ ಅಥವಾ ಸಮುದಾಯದ ಗೌರವ, ಘನತೆ ಮತ್ತು ಸಾಮಾಜಿಕ ಅಸ್ತಿತ್ವ-ಅಂತಸ್ತನ್ನು ಕಾಪಾಡುವ ಧೋರಣೆಯನ್ನು ಕಾಣಬಹುದು. ಈ ಗೌರವ ಘನತೆ ಇತ್ಯಾದಿಗಳು ಶ್ರೇಣೀಕೃತ ಸಮಾಜದಲ್ಲಿ ಲಭ್ಯವಾಗುವುದಕ್ಕೆ ಕೇವಲ ಆರ್ಥಿಕ ಮುಂಚಲನೆ ಅಥವಾ ಸಾಮಾಜಿಕ ಮೇಲ್‌ ಚಲನೆ ಸಾಲದು ಎನ್ನುವುದನ್ನು ನಮ್ಮ ಸಮಕಾಲೀನ ಇತಿಹಾಸವೇ ನಿರೂಪಿಸಿದೆ. ಸಮಾಜದಲ್ಲಿ ಆರ್ಥಿಕವಾಗಿ ಸಮಾನರೆಂದು ಪರಿಭವಿಸಲಾಗುವ ಬ್ರಾಹ್ಮಣೇತರರು ನಗರ ಪ್ರದೇಶಗಳಲ್ಲೂ ಸಹ ಆಹಾರ ಪದ್ಧತಿಯ ಮೂಲಕ, ಧಾರ್ಮಿಕ ಆಚರಣೆಗಳ ಮೂಲಕ ತಾರತಮ್ಯವನ್ನು ಎದುರಿಸುತ್ತಲೇ ಇರುತ್ತಾರೆ. ಬಿಡಿ ಮನೆಗಳಲ್ಲಿರುವಂತೆಯೇ ನೂರಾರು ಮನೆಗಳನ್ನು ಹೊಂದಿರುವ ಬೃಹತ್‌ ಗೃಹಸಮುಚ್ಚಯಗಳಲ್ಲೂ ಸಹ  “ ಸಸ್ಯಾಹಾರಿಗಳಿಗೆ ಮಾತ್ರ ” ಎಂಬ ಫಲಕಗಳನ್ನು ಇಂದಿಗೂ ಕಾಣಬಹುದು. ತಮ್ಮಿಂದ ನೂರಾರು ಮೈಲಿ ದೂರದಲ್ಲಿರುವ ತಮ್ಮ ಮನೆಗೂ ಇದೇ ನಿಯಮವನ್ನು ಅನ್ವಯಿಸುವ ಮೇಲ್ಜಾತಿಯ ಮನಸ್ಥಿತಿ ಕಣ್ಣಿಗೆ ರಾಚುವಂತಿದೆ. ಹಾಗೆಯೇ ಬಡಾವಣೆಗಳ ನಿರ್ಮಾಣದಲ್ಲಿ ಜಾತಿ-ಮತ ಭೇದಗಳನ್ನು ಕಾಪಾಡಿಕೊಂಡೇ ಬರುವುದನ್ನೂ ಕಾಣುತ್ತಿದ್ದೇವೆ. ಈ ಆಧುನಿಕ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳುವ ಶೂದ್ರ ಸಮುದಾಯದ ಮೇಲ್ವರ್ಗದ ಜನರು, ತಾವು ಎದುರಿಸುವ ಜಾತಿ ತಾರತಮ್ಯಗಳ ಅರಿವು ಇದ್ದರೂ, ಅನ್ಯಮತೀಯರಿಂದ ಅಂತರ ಕಾಪಾಡಿಕೊಳ್ಳುವ ಹಪಹಪಿಯನ್ನು ಪ್ರದರ್ಶಿಸುತ್ತಾರೆ. ಇಲ್ಲಿ ಜಾತಿ ನೆಲೆಗಳ ನಮ್ಯತೆ ಹೆಚ್ಚಾಗಿರುವುದರಿಂದಲೇ ತಮ್ಮ ಮೂಲ ಸಾಮುದಾಯಿಕ ನೆಲೆಗಳನ್ನೂ ಮರೆತು ಅನ್ಯಮತೀಯರ ಬಗ್ಗೆ ತಾತ್ಸಾರ ಹೊಂದಿರುವುದನ್ನು ಅನೇಕರಲ್ಲಿ ಗುರುತಿಸಬಹುದು.

ಅಂತರ್‌ ಜಾತಿ ಅಥವಾ ಅಂತರ್‌ ಧರ್ಮೀಯ ವಿವಾಹಗಳು ನಡೆದಲ್ಲೆಲ್ಲಾ ಎರಡು ಧೃವಗಳು ಸೃಷ್ಟಿಯಾಗುತ್ತವೆ. ಭಾರತೀಯ ಸಮಾಜದಲ್ಲಿ ವಿವಾಹ ಎನ್ನುವುದು ಕೇವಲ ಮನಸುಗಳ ಮಿಲನ ಎಂದು ಅರ್ಥೈಸಲಾಗುವುದಿಲ್ಲ. ಭೌತಿಕವಾಗಿ ಒಂದಾಗಬಯಸುವ ಇಬ್ಬರು ವ್ಯಕ್ತಿಗಳ ಬೌದ್ಧಿಕ ವಾತಾವರಣವೇ ಇಲ್ಲಿ ಮುನ್ನೆಲೆಗೆ ಬರುತ್ತವೆ. ಹಾಗಾಗಿಯೇ ವಿವಾಹ ಎಂದ ಕೂಡಲೇ ಜಾತಿ ಮತ್ತು ಮತಧರ್ಮದ ಅಸ್ಮಿತೆಗಳು ಮುಖ್ಯವಾಗುತ್ತವೆ. ಈ ಅಸ್ಮಿತೆಗಳ ಆಧಾರದಲ್ಲಿ ರೂಪುಗೊಂಡಿರುವ ಆರ್ಥಿಕ ಸ್ಥಿತ್ಯಂತರಗಳು ಮತ್ತು ಸಾಮಾಜಿಕ ನೆಲೆಗಳು ಕೌಟುಂಬಿಕ ಘನತೆ, ಗೌರವ ಮತ್ತು ಸಮ್ಮಾನಗಳನ್ನು ನಿರ್ಧರಿಸುತ್ತವೆ. ಈ ಎರಡೂ ಧೃವಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಅಥವಾ ಕ್ರೈಸ್ತ ಅಥವಾ ಮೇಲ್ಜಾತಿ-ಕೆಳಜಾತಿ ಮತ್ತು ಬಡತನ-ಸಿರಿತನದ ಅಡ್ಡಗೋಡೆಗಳು ಸದಾ ಜಾಗೃತವಾಗಿರುತ್ತವೆ.  ಜಾತಿಮತದ ಶ್ರೇಷ್ಠತೆಯ ಅಹಮಿಕೆ, ಮನುಷ್ಯನ ಆರ್ಥಿಕ ಕೀಳರಿಮೆಯನ್ನೂ ಮೀರಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತದೆ. ಮೇಲ್ಜಾತಿಯ ಕುಟುಂಬವೊಂದು ಆರ್ಥಿಕವಾಗಿ ಎಷ್ಟೇ ದುರ್ಬಲವಾಗಿದ್ದರೂ ತನ್ನ ಜಾತಿ ಪ್ರಜ್ಞೆಯನ್ನು ಅಥವಾ ಮತೀಯ ಪ್ರಜ್ಞೆಯನ್ನು ಬಿಟ್ಟುಕೊಡಲಿಚ್ಚಿಸುವುದಿಲ್ಲ. ಈ ಪ್ರಜ್ಞೆಯನ್ನು ಶ್ರೇಷ್ಠತೆಯ ವ್ಯಸನ ಆಕ್ರಮಿಸಿದ್ದ ಸಂದರ್ಭದಲ್ಲಿ ತನ್ನ ಅಸ್ಮಿತೆಯ ರಕ್ಷಣೆಗಾಗಿ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಲೂ ಮನಸು ಹಿಂಜರಿಯುವುದಿಲ್ಲ. ಸಾಮಾಜಿಕ-ಆರ್ಥಿಕ ನೆಲೆಯನ್ನೂ ಮೀರಿ ಜಾತಿ ಮತದ ಶ್ರೇಷ್ಠತೆಯ ಅಹಮಿಕೆ ಇಲ್ಲಿ ವ್ಯಕ್ತವಾಗುತ್ತದೆ. ಇದು ಭಾರತದ ಜಾತಿ ವ್ಯವಸ್ಥೆಯ ಮೂಲ ಲಕ್ಷಣ.

ಶತಮಾನಗಳಿಂದ ಭಾರತದ ಸಾಂಪ್ರದಾಯಿಕ ಸಮಾಜದ ಒಂದು ಭಾಗವಾಗಿಯೇ ಇರುವ ಮುಸ್ಲಿಂ ಸಮುದಾಯದಲ್ಲಿ ಈ ಲಕ್ಷಣಗಳೂ ಇರುವುದು ಅಚ್ಚರಿಯೇನಲ್ಲ. ಮೇಲು ಕೀಳುಗಳ ತಾರತಮ್ಯಗಳನ್ನು ಮೀರಿ ಮನುಜ ಸಮಾಜವನ್ನು ಮುನ್ನಡೆಸುವ ಚಿಂತನೆಗಳನ್ನು ಗ್ರಾಂಥಿಕವಾಗಿ ಕಂಡಂತೆಯೇ ವಾಸ್ತವ ಬದುಕಿನಲ್ಲಿ ಕಾಣಲಾಗುವುದೂ ಇಲ್ಲ. ಇದಕ್ಕೆ ಯಾವುದೇ ಮತಧರ್ಮಗಳೂ ಹೊರತಾದುದಲ್ಲ. ಜಾತಿ ಪ್ರಜ್ಞೆಯ ಮೂಲಕವೇ ಮನುಜ ಸಂಬಂಧಗಳನ್ನು ಬೆಸೆಯುವ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ನಿತ್ಯ ಜೀವನದ ಆಚರಣೆಗಳು ಮತ್ತು ಧಾರ್ಮಿಕ ಕಟ್ಟುಪಾಡುಗಳೇ ನಿರ್ಣಾಯಕವೂ ಆಗುತ್ತದೆ. ನಮ್ಮ ಧರ್ಮದಲ್ಲಿ ಹೀಗೆ ಹೇಳಿಲ್ಲ, ಇದು ವೈಯಕ್ತಿಕ ನಂಬಿಕೆ ಮತ್ತು ವ್ಯಕ್ತಿಗತ ನಿಲುವು ಎಂಬ ಸಮರ್ಥನೆಗಳು ಅರ್ಥಹೀನ ಎನಿಸುತ್ತವೆ. ಏಕೆಂದರೆ ಮೂಲತಃ ಮನದಾಳದಲ್ಲಿ ಜಾತಿ-ಮತ ಶ್ರೇಷ್ಠತೆಯ ಪ್ರಜ್ಞೆ ಇದ್ದರೆ ಮಾತ್ರವೇ ಅದು ಅಸ್ಮಿತೆಗಳ ರಕ್ಷಣೆಗಾಗಿ ಹಿಂಸಾತ್ಮಕ ಮಾರ್ಗವನ್ನಾದರೂ ಅನುಸರಿಸುವಂತೆ ಪ್ರೇರೇಪಿಸಲು ಸಾಧ್ಯ. ಅಸ್ಪೃಶ್ಯತೆಯ ಬಗ್ಗೆ ಹಿಂದೂ ಸವರ್ಣೀಯರಲ್ಲಿ ಇರುವ ಮನೋಭಾವವೇ ಮುಸ್ಲಿಂ ಸಮುದಾಯದಲ್ಲೂ ಇರುವುದು ಮೇಲ್ನೋಟಕ್ಕೇ ಕಾಣುತ್ತದೆ.  ಹಾಗೆಯೇ ದಲಿತ-ಅಸ್ಪೃಶ್ಯ ಸಮುದಾಯದಲ್ಲೂ ಸಹ ಮುಸಲ್ಮಾನರ ಬಗ್ಗೆ ಇರುವ ಪೂರ್ವಗ್ರಹಗಳನ್ನೂ ಈ ಸಂದರ್ಭದಲ್ಲಿ ಗುರುತಿಸಬೇಕಿದೆ. ಹಿಂದುತ್ವ ರಾಜಕಾರಣ ಮತ್ತು ಹಿಂದೂ ಸಾಂಪ್ರದಾಯಿಕ ಶಕ್ತಿಗಳು ಈ ಮನಸ್ಥಿತಿಯನ್ನು ಮತ್ತಷ್ಟು ಪೋಷಿಸುತ್ತಲೇ ಹಿಂದೂ ಐಕ್ಯತೆಯನ್ನು ಸಾಧಿಸಲು ಇಸ್ಲಾಂ ವಿರೋಧಿ ಧೋರಣೆಯನ್ನು ಸಾರ್ವತ್ರಿಕಗೊಳಿಸುತ್ತವೆ.

ಹೈದರಾಬಾದ್‌ ಘಟನೆ ನಡೆದ ಕೂಡಲೇ ಇಡೀ ಮುಸ್ಲಿಂ ಸಮುದಾಯ ಇದನ್ನು ಖಂಡಿಸಬೇಕಿತ್ತು ಎಂಬ ನಿರೀಕ್ಷೆ ತಪ್ಪೇನಲ್ಲ. ಸೋದರತ್ವ ಮತ್ತು ಮಾನವತೆಯನ್ನು ಸಾರುವ ಒಂದು ಮತಧರ್ಮದ ಅನುಯಾಯಿಗಳು, ಜಾತಿ ಶ್ರೇಷ್ಠತೆಯ ವ್ಯಸನಕ್ಕೊಳಗಾಗಿ, ಹಿಂಸಾತ್ಮಕವಾಗಿಯಾದರೂ ತಮ್ಮ ದ್ವೇಷವನ್ನು ಹೊರಗೆಡಹುವ ಪ್ರವೃತ್ತಿಗೆ ಮುಸ್ಲಿಂ ಧಾರ್ಮಿಕ ಗುರುಗಳಿಂದ, ನಾಯಕರಿಂದ ಮತ್ತು ಪ್ರಜ್ಞಾವಂತ ಮುಸ್ಲಿಂ ಸಮುದಾಯದಿಂದ ಪ್ರತಿರೋಧ ವ್ಯಕ್ತವಾಗಬೇಕಿತ್ತು. ಕೆಲವೇ ಚಿಂತಕರನ್ನು ಹೊರತುಪಡಿಸಿ ಈ ಪ್ರತಿರೋಧದ ದನಿಗಳು ಕೇಳಿಬಂದಿಲ್ಲ ಎನ್ನುವುದು ವಾಸ್ತವ. ಆದರೆ ಈ ಕಾರಣಕ್ಕಾಗಿಯೇ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸಮರ್ಥನೀಯವಲ್ಲ. ಹತ್ಯೆ ಮಾಡಿದವರು ಇಸ್ಲಾಂ ಧರ್ಮೀಯರೇ ಆಗಿದ್ದರೂ ಅವರಲ್ಲಿ ಇದ್ದ ಜಾತಿ ಶ್ರೇಷ್ಠತೆಯ ಮೇಲರಿಮೆ ಮತ್ತು ಅಹಮಿಕೆಯೂ ಸಹ ಮುಖ್ಯವಾಗುತ್ತದೆ. ಇದೇ ಪ್ರಶ್ನೆಯನ್ನು ನಾವು ದಲಿತರ-ಅಸ್ಪೃಶ್ಯರ ಮೇಲೆ ದಾಳಿಗಳು ನಡೆದಾಗ ಎದುರಿಸಿದ್ದೇವಲ್ಲವೇ ? ಊನ ಘಟನೆ ನಡೆದಾಗ, ಹಥ್ರಾಸ್‌ ಸಂಭವಿಸಿದಾಗ, ಕೊಪ್ಪಳದ ಘಟನೆ ನಡೆದಾಗ ಸಮಸ್ತ ದಲಿತ ಸಮುದಾಯದ ಒಕ್ಕೊರಲ ದನಿ ಕೇಳಿಬರಲೇ ಇಲ್ಲ. ಏಕೆಂದರೆ ಸಾಮಾಜಿಕ ಮೇಲ್‌ ಚಲನೆ ಪಡೆದ ಹಿತವಲಯದ ದಲಿತ ಸಮುದಾಯವೂ ಸಹ ಇಂತಹ ವಿಚಾರಗಳಲ್ಲಿ ನಿರ್ಲಿಪ್ತತೆಯನ್ನೇ ಬಯಸುತ್ತದೆ. ತಮ್ಮ ಸಾಮುದಾಯಿಕ ಮೂಲ ಬೇರುಗಳೊಡನೆ ಭೌತಿಕವಾಗಿ ಸಂಬಂಧ ಹೊಂದಿದ್ದರೂ, ಬೌದ್ಧಿಕವಾಗಿ ಹೊರಗುಳಿದಿರುತ್ತಾರೆ.

ಮತ್ತೊಂದು ಆಯಾಮದಲ್ಲಿ ನೋಡಿದಾಗ, ದಲಿತ ವ್ಯಕ್ತಿಯೊಬ್ಬ ಮುಸ್ಲಿಂ ಮತಾಂಧರಿಂದ ಹತ್ಯೆಗೊಳಗಾದ ಕೂಡಲೇ ಧಿಗ್ಗನೆದ್ದು ಕುಳಿತು ಮುಗಿಲುಮುಟ್ಟುವ ಪ್ರತಿರೋಧದ ದನಿ ದಾಖಲಿಸುವ ಹಿಂದುತ್ವ ಸಂಘಟನೆಗಳು, ಶೂದ್ರ ಸಮುದಾಯದಿಂದ, ಸವರ್ಣೀಯರಿಂದ, ಮೇಲ್ಜಾತಿಯವರಿಂದ ನಿರಂತರ ದೌರ್ಜನ್ಯ, ಅತ್ಯಾಚಾರ, ತಾರತಮ್ಯಕ್ಕೊಳಗಾಗುತ್ತಿರುವ ಅಸ್ಪೃಶ್ಯರ ನೋವಿಗೆ ಸ್ಪಂದಿಸದೆ ಇರುವುದನ್ನೂ ಗಮನಿಸಬೇಕಾಗುತ್ತದೆ. ಹಿಂದೂ ಐಕ್ಯತೆಯ ಪ್ರಶ್ನೆ ಎದುರಾದಾಗ ಹೋರಾಟದ ದಾಳಗಳಾಗಿ, ಕಾಲಾಳುಗಳಾಗಿ ಪರಿಗಣಿಸಲ್ಪಡುವ ಬೃಹತ್‌ ಸಮುದಾಯ, ಸ್ವತಃ ಮೇಲ್ಜಾತಿಯ ಹಿಂದೂಗಳಿಂದಲೇ ದಾಳಿಗೊಳಗಾದಾಗಲೂ ನಿರ್ಲಕ್ಷ್ಯಕ್ಕೊಳಗಾಗಿ ಅನಾಥವಾಗುತ್ತದೆ. ಅಥವಾ ಅಸ್ಪೃಶ್ಯರ ಮೇಲೆ ದಾಳಿ ನಡೆದ ಸಂದರ್ಭಗಳಲ್ಲಿ ಮುಸ್ಲಿಂ ಧಾರ್ಮಿಕ ನಾಯಕರು, ಹಿಂದೂ ಮಠಾಧೀಶರಂತೆಯೇ ಮೌನ ವಹಿಸುತ್ತಾರೆ. ಕೆಲವೇ ಸಮಾಜಮುಖಿ ಮುಸ್ಲಿಂ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸುವುದನ್ನು ನೋಡಿದ್ದೇವೆ. ಆರ್ಥಿಕ ದಬ್ಬಾಳಿಕೆಯಿಂದ ದಾರಿದ್ರ್ಯದ ಕೂಪಕ್ಕೆ ತಳ್ಳಲ್ಪಡುವ ದಲಿತ-ಅಸೃಶ್ಯ-ತಳಸಮುದಾಯಗಳ ಬಗ್ಗೆ ಇದೇ ಸಮುದಾಯಗಳ ಮೇಲ್ಪದರದ ಗಣ್ಯ ವರ್ಗವೂ ಸಹ ಇದೇ ರೀತಿಯ ನಿರ್ಲಕ್ಷ್ಯ ಮನೋಭಾವ ಪ್ರದರ್ಶಿಸುತ್ತವೆ. ಸಾಮಾಜಿಕ ಮೇಲ್‌ಚಲನೆ ಮತ್ತು ಆರ್ಥಿಕ ಮುಂಚಲನೆ ಸೃಷ್ಟಿಸುವ ವರ್ಗ ಪ್ರಜ್ಞೆ, ಜಾತಿ ಪ್ರಜ್ಞೆಯನ್ನು ಉಳಿಸಿಕೊಂಡರೂ, ಕೆಳವರ್ಗಗಳೊಡನೆ ಗುರುತಿಸಿಕೊಳ್ಳುವ ಮನೋಭಾವವನ್ನು ಇಲ್ಲವಾಗಿಸುತ್ತದೆ. ಈ ವಿದ್ಯಮಾನವನ್ನು ಮುಸ್ಲಿಂ ಸಮುದಾಯದಲ್ಲೂ ಕಾಣಬಹುದು.

ಭಾರತಕ್ಕೆ ಇಂದು ಬೇಕಿರುವುದು ಈ ಜಾತಿ-ಮತ-ಧರ್ಮದ ಗಡಿಗಳನ್ನು ದಾಟಿದ ಒಂದು ಸಮನ್ವಯ-ಸೌಹಾರ್ದತೆಯ ವಾತಾವರಣ. ಎಲ್ಲಿಯವರೆಗೆ ಜಾತಿ ಶ್ರೇಷ್ಠತೆ ಮತ್ತು ಮತಶ್ರದ್ಧೆ ತಮ್ಮ ಸಾಂಪ್ರದಾಯಿಕ ಬೇರುಗಳಿಂದ ಬೇರ್ಪಡುವುದಿಲ್ಲವೋ ಅಲ್ಲಿಯವರೆಗೂ ಕ್ರೌರ್ಯ ಮತ್ತು ಹಿಂಸೆ ಕೊನೆಗೊಳ್ಳುವುದಿಲ್ಲ. ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸುವ ತಾರತಮ್ಯಗಳ ಅಡಿಪಾಯಗಳು ಜಾತಿ-ಮತಗಳ ನಡುವಿನ ಕಂದರವನ್ನು ಮತ್ತಷ್ಟು ಹಿಗ್ಗಿಸಲು ನೆರವಾಗುತ್ತಲೇ ಇರುತ್ತವೆ. ವಿಘಟಿತ ಸಮಾಜದಲ್ಲಷ್ಟೇ ಬಂಡವಾಳಶಾಹಿ ವ್ಯವಸ್ಥೆ ತನ್ನ ಉನ್ನತ ಹಂತವನ್ನು ತಲುಪಲು ಸಾಧ್ಯ. ಭಾರತದಲ್ಲಿ ಸಾಮಾಜಿಕ ವಿಘಟನೆಗೆ ಪೂರಕವಾದಂತಹ ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಿರುವುದರಿಂದಲೇ, ಇಲ್ಲಿನ ಊಳಿಗಮಾನ್ಯ ಶಕ್ತಿಗಳೂ ಸಹ ಜಾತಿ, ಮತದ ಹೆಸರಿನಲ್ಲಿ ತಮ್ಮ ಪಾರಮ್ಯ ಸಾಧಿಸಲೆತ್ನಿಸುತ್ತಿವೆ. ಹೈದರಾಬಾದ್‌ ಘಟನೆ ಇದರ ಒಂದು ಝಲಕ್‌ ಮಾತ್ರ. ಸಾರ್ವಜನಿಕ ಅಭಿಪ್ರಾಯ ಉತ್ಪಾದಿಸುವಲ್ಲಿ ಪ್ರಧಾನ ಪಾತ್ರ ವಹಿಸಬೇಕಾದ ಬೃಹತ್‌ ಸುಶಿಕ್ಷಿತ ವರ್ಗ ಇಂದು ಬೌದ್ಧಿಕವಾಗಿ ನಿಷ್ಕ್ರಿಯವಾಗಿರುವುದರಿಂದಲೇ ಮತಾಂಧತೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ನೆಲೆ ಕಂಡುಕೊಂಡಿದೆ, ಜಾತಿ ಶ್ರೇಷ್ಠತೆ ತಳಸಮುದಾಯಗಳಲ್ಲೂ ಬೇರೂರುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟ ಮಸಣದಂತಾಗುತ್ತಿರುವುದಕ್ಕೆ ಶ್ರೇಷ್ಠತೆಯ ಅಹಮಿಕೆಯಷ್ಟೇ ಈ ಬೌದ್ಧಿಕ ನಿಷ್ಕ್ರಿಯತೆಯೂ ಒಂದು ಕಾರಣ.

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿ
Previous Post

ಹಿಂದೂಗಳ ವೋಟ್‌ಗೆ ಬಿಜೆಪಿ ಬದ್ದರಾಗಿರಿ : ಪ್ರಮೋದ ಮುತಾಲಿಕ್

Next Post

ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ಕಚ್ಚಾಡಿಸಿದ್ದವರಿಗೆ ಶ್ರೀಲಂಕಾದಲ್ಲಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ: ಪ್ರಕಾಶ್‌ ರಾಥೋಡ್

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ಕಚ್ಚಾಡಿಸಿದ್ದವರಿಗೆ ಶ್ರೀಲಂಕಾದಲ್ಲಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ: ಪ್ರಕಾಶ್‌ ರಾಥೋಡ್

ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ಕಚ್ಚಾಡಿಸಿದ್ದವರಿಗೆ ಶ್ರೀಲಂಕಾದಲ್ಲಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ: ಪ್ರಕಾಶ್‌ ರಾಥೋಡ್

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುತೂಹಲ ಘಟ್ಟಕ್ಕೆ BIGG BOSS ಫಿನಾಲೆ : ಗಿಲ್ಲಿಯಿಂದ ವೋಟಿಂಗ್‌ ಬಾಕ್ಸ್‌ ಲೂಟಿ, ರಕ್ಷಿತಾಗೆ ಪಡೆದ ಮತಗಳೆಷ್ಟು..?

ಕುತೂಹಲ ಘಟ್ಟಕ್ಕೆ BIGG BOSS ಫಿನಾಲೆ : ಗಿಲ್ಲಿಯಿಂದ ವೋಟಿಂಗ್‌ ಬಾಕ್ಸ್‌ ಲೂಟಿ, ರಕ್ಷಿತಾಗೆ ಪಡೆದ ಮತಗಳೆಷ್ಟು..?

January 18, 2026
ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada